ಡಿ.17: ನಿವೃತ್ತ ಯೋಧರನ್ನೊಳಗೊಂಡ 23 ತಂಡದ ಸ್ವದೇಶಿ ಜಾಗರಣ ಸೈಕ್ಲಿಂಗ್ ಪುತ್ತೂರಿಗೆ

0

ವಿವೇಕಾನಂದ ವಿದ್ಯಾಸಂಸ್ಥೆಗಳು, ನಾಗರಿಕರಿಂದ ಸ್ವಾಗತದೊಂದಿಗೆ ಸೈಕ್ಲಿಂಗ್ ಜಾಥಾ

ಪುತ್ತೂರು: ಬೆಂಗಳೂರಿನ ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾರತೀಯ ಮಾಜಿ ಸೇನಾ ಅಧಿಕಾರಿ ಹಾಗು ಕರ್ನಾಟಕ ಸರಕಾರದ ಮಾಜಿ ನಿರ್ದೇಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸ್ವದೇಶಿ ಜಾಗರಣ ಸೈಕ್ಲಿಂಗ್ ಅಭಿಯಾನ ಡಿ.17ರಂದು ಪುತ್ತೂರಿಗೆ ಆಗಮಿಸಲಿದೆ. ಈ ಸಂದರ್ಭ ವಿವೇಕಾನಂದ ವಿದ್ಯಾಸಂಸ್ಥೆಗಳು ಮತ್ತು ಪುತ್ತೂರಿನ ನಾಗರಿಕರು ಭವ್ಯ ಸ್ವಾಗತ ನೀಡಿ ಅವರ ಜೊತೆ ಸೈಕ್ಲಿಂಗ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


’ಸ್ವದೇಶಿ ಬಳಸಿ ದೇಶ ಬೆಳೆಸಿ’ ಎಂಬ ಘೋಷವಾಕ್ಯದಡಿ ಸಾಫ್ಟ್‌ವೇರ್ ಉತ್ಪನ್ನಗಳಿಂದ ಹಿಡಿದು ನಿತ್ಯೋಪಯೋಗಿ ವಸ್ತುಗಳ ತನಕ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಿ ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವುದು ಈ ಯಾತ್ರೆಯ ಉದ್ದೇಶವಾಗಿದೆ. ಸೈಕ್ಲಿಂಗ್‌ನಲ್ಲಿ ಸುಮಾರು 23 ಮಂದಿಯಿದ್ದು, ಅವರಲ್ಲಿ ಮಾಜಿ ಸೈನಿಕರು, ಬ್ಯಾಂಕ್ ಉದ್ಯೋಗಿಗಳು, ವಿಜ್ಞಾನಿಗಳು, ಎಂಜಿನಿಯರ್‌ಗಳು ಹಾಗು ವೈದ್ಯರು ಇರಲಿದ್ದಾರೆ. ವಿವೇಕಾನಂದ ವಿದ್ಯಾಸಂಸ್ಥೆಗಳು ಮತ್ತು ಪುತ್ತೂರಿನ ನಾಗರಿಕರು ಮಧ್ಯಾಹ್ನ ಗಂಟೆ 3ಕ್ಕೆ ದರ್ಬೆ ಬೈಪಾಸ್ ವೃತ್ತದಲ್ಲಿ ಸ್ವಾಗತಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಉಪಸ್ಥಿತರಿರುತ್ತಾರೆ ಎಂದವರು ಹೇಳಿದರು.


ದರ್ಬೆಯಿಂದ ಸೈಕಲ್ ಜಾಥಾ:
ಪುತ್ತೂರು ಬೈಪಾಸ್ ದರ್ಬೆ ವೃತ್ತದಿಂದ ಪುತ್ತೂರು ಮುಖ್ಯರಸ್ತೆಯಾಗಿ ನೆಹರುನಗರ ವಿವೇಕಾನಂದ ಕಾಲೇಜು ಅವರಣದ ತನಕ ಸೈಕಲ್ ಜಾಥಾ ನಡೆಯಲಿದೆ. ಜಾಥಾದಲ್ಲಿ ಪುತ್ತೂರಿನ ನಾಗರಿಕರಿಗೆ ಭಾಗವಹಿಸಲು ಅವಕಾಶವಿದೆ ಎಂದು ರವೀಂದ್ರ ಪಿ ಹೇಳಿದರು.


ವಿಶೇಷ ಸಂವಾದ:
ಸೈಕಲ್ ಜಾಥಾ ವಿವೇಕಾನಂದ ಕಾಲೇಜು ತಲುಪಿದ ಬಳಿಕ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಜಾಥಾದಲ್ಲಿ ಭಾಗವಹಿಸುತ್ತಿರುವ ತಂಡದ ಜೊತೆ ವಿಶೇಷ ಸಂವಾದ ನಡೆಯಲಿದೆ ಎಂದು ರವೀಂದ್ರ ಪಿ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಸಮಿತಿ ಕೋಶಾಧಿಕಾರಿ ನರಸಿಂಹ ಪೈ, ಇಂಜಿನಿಯರಿಂಗ್ ಆಡಳಿತ ಸಮಿತಿ ಅಧ್ಯಕ್ಷ ವಿಶ್ವಾಸ್ ಶೆಣೈ, ಸದಸ್ಯ ರವಿಕೃಷ್ಣ ಕಲ್ಲಾಜೆ, ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕಾಂತ್ ಕೊಳತ್ತಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here