ಮಂಗಳೂರು ವಿಭಾಗ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ
ಪುತ್ತೂರು:ಅಕ್ರಮ ಸಕ್ರಮದಡಿ ಮಂಜೂರಾಗಿರುವ ಜಮೀನು ಪರಭಾರೆ ಮಾಡಲು ನಿರಾಕ್ಷೇಪಣಾ ಪತ್ರ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ತಹಸಿಲ್ದಾರ್ ಕಚೇರಿಯ ಭೂಸುಧಾರಣಾ ಶಾಖೆಯ ಕೇಸ್ ವರ್ಕರ್ ಸುನಿಲ್ ಎಂಬವರನ್ನು ರೆಡ್ಹ್ಯಾಂಡ್ ಆಗಿ ಬಂಧಿಸಿರುವ ಘಟನೆ ಆ.28ರಂದು ನಡೆದಿದೆ.
ಈಶ್ವರಮಂಗಲದ ಅಜಿತ್ ಎಂಬವರ ಚಿಕ್ಕಪ್ಪನವರಿಗೆ ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ೬೫ ಸೆಂಟ್ಸ್ ಜಮೀನು ಅಕ್ರಮ ಸಕ್ರಮದನ್ವಯ ದರ್ಖಾಸ್ತು ಮಂಜೂರಾಗಿತ್ತು.ಅವರಿಗೆ ಅನಾರೋಗ್ಯ ಇದ್ದುದರಿಂದ ಅವರು ತನ್ನ ಸ್ವ-ಇಚ್ಛೆಯಿಂದ ಉಪ ನೋಂದಣಾಧಿಕಾರಿ ಕಛೇರಿ, ಪುತ್ತೂರು ಇಲ್ಲಿ ವೀಲುನಾಮೆ ಯಾನೆ ಮರಣ ಶಾಸನ ಬರೆಸಿ ಕೊಟ್ಟಿದ್ದರು.
ಅವರ ಮರಣ ನಂತರ ಸದ್ರಿ ಜಮೀನಿನ ಸಂಪೂರ್ಣ ಹಕ್ಕು ಅಜಿತ್ ಅವರಿಗೆ ಸೇರಿರುತ್ತದೆ.ಮಂಜೂರಾಗಿ 27 ವರ್ಷ ಆಗಿರುವ ಸದರಿ ಜಮೀನನ್ನು ಪರಭಾರೆ ಮಾಡಲೆಂದು ಅಜಿತ್ ಅವರ ಚಿಕ್ಕಪ್ಪ 2024ರ ಡಿಸೆಂಬರ್ನಲ್ಲಿ ನಿರಾಕ್ಷೇಪಣಾ ಪತ್ರ ಕೋರಿ ಪುತ್ತೂರು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಇಲ್ಲಿಯವರೆಗೆ ನಿರಾಕ್ಷೇಪಣಾ ಪತ್ರ ಸಿಕ್ಕಿರದೇ ಇದ್ದುದರಿಂದ ಸದ್ರಿ ಅರ್ಜಿಯ ಬಗ್ಗೆ ವಿಚಾರಿಸಲೆಂದು ಅವರು ಅಜಿತ್ ಅವರಿಗೆ ಹೇಳಿದ್ದರು.ಅಜಿತ್ ಅವರು,ಕಳೆದ ಜೂನ್ ೨೬ರಂದು ಪುತ್ತೂರು ತಹಶೀಲ್ದಾರ್ ಕಛೇರಿಯ ಭೂ ಸುಧಾರಣಾ ಶಾಖೆಗೆ ಹೋಗಿ ಕೇಸ್ ವರ್ಕರ್ ಸುನೀಲ್ರವರಲ್ಲಿ,ತನ್ನ ಚಿಕ್ಕಪ್ಪ ಸಲ್ಲಿಸಿದ ನಿರಾಕ್ಷೇಪಣಾ ಪತ್ರದ ಬಗ್ಗೆ ವಿಚಾರಿಸಿದಾಗ ಕೇಸ್ ವರ್ಕರ್ ಸುನೀಲ್ರವರು ತಹಶೀಲ್ದಾರ್ರವರ ಸಹಿಗೆ ಬಾಕಿ ಇರುತ್ತದೆ.
ಅದಕ್ಕೆ ಸ್ವಲ್ಪ ಹಣ ಖರ್ಚು ಇರುತ್ತದೆ,ತಹಶೀಲ್ದಾರರಿಗೆ ರೂ.10,000 ಕೊಡಬೇಕಾಗುತ್ತದೆ ಮತ್ತು ನನಗೂ ಹಣ ಕೊಡಬೇಕಾಗುತ್ತದೆ ಎಂದು ಹೇಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಿ ಅಜಿತ್ ಅವರು ನೀಡಿದ್ದ ದೂರಿನ ಮೇರೆಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕೇಸ್ ವರ್ಕರ್ ಸುನೀಲ್ ಮತ್ತು ತಹಶೀಲ್ದಾರ್ ವಿರುದ್ಧ ಅಜಿತ್ ಅವರು ಪ್ರಕರಣ ದಾಖಲಾಗಿತ್ತು.
ಆ.28ರಂದು ಭೂಸುಧಾರಣಾ ಶಾಖೆಯ ಕೇಸ್ ವರ್ಕರ್ ಸುನೀಲ್ ಅವರು ಅಜಿತ್ ಅವರಿಂದ ರೂ.12 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ.ಅವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.ಈ ಪ್ರಕರಣದಲ್ಲಿ ಪುತ್ತೂರು ತಹಶೀಲ್ದಾರರ ಪಾತ್ರದ ಕುರಿತು ತನಿಖೆ ನಡೆಸಲಾಗುವುದು.ತಹಶೀಲ್ದಾರ್ ಸದ್ಯ ತಲೆಮರೆಸಿಕೊಂಡಿರುತ್ತಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಮಂಗಳೂರು ವಿಭಾಗದ ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ|ಗಾನ ಪಿ ಕುಮಾರ್, ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ಜಿ, ಚಂದ್ರಶೇಖರ್ ಕೆ.ಎನ್,ರವಿ ಪವಾರ್ರವರು ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ ಎಂದು ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.