ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ 38ನೇ ವರ್ಷದ ಗಣೇಶೋತ್ಸವ

0


ಶ್ರೇಷ್ಠ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಮಕ್ಕಳಿಗೆ ನೀಡಬೇಕು: ಲಕ್ಷ್ಮೀಕಾಂತ ರೈ

ಪುತ್ತೂರು: ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 38ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.27ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.


ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಮಾತನಾಡಿ, ವಿಶಿಷ್ಠ ಕುಟುಂಬ ವ್ಯವಸ್ಥೆಯನ್ನು ಹೊಂದಿರುವ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಮಹತ್ವದ ಸ್ಥಾನವಿದೆ. ಅದರಲ್ಲಿಯೂ ಗಣೇಶೋತ್ಸವವು ಭಕ್ತಿಯ ಜೊತೆಗೆ ರಾಷ್ಟ್ರಪ್ರಜ್ಞೆಯನ್ನು ಉದ್ದೀಪನಗೊಳಿಸುವ ಕಾರ್ಯವನ್ನು ಮಾಡುತ್ತದೆ. ಗಣೇಶೋತ್ಸವದಂತಹ ಧಾರ್ಮಿಕ ಆಚರಣೆಗಳ ಉತ್ಸವಗಳಿಂದ ಸಮುದಾಯಗಳನ್ನು ಒಗ್ಗೂಡಿಸುತ್ತದೆ ಹಾಗೂ ನಮ್ಮ ಭವ್ಯ ಸಂಸ್ಕೃತಿಯನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಯುತ್ತದೆ. ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠವಾಗಿರುವ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಮಕ್ಕಳಿಗೆ ನೀಡಬೇಕು. ಅದಕ್ಕಾಗಿ ನಮ್ಮ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕಾದ ಜವಾಬ್ದಾರಿ ನಮ್ಮ ಮುಂದಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಗಣೇಶೋತ್ಸವ ಸಮಿತಿ ಸ್ಥಾಪಕ ಅಧ್ಯಕ್ಷ ಬಾಲಕೃಷ್ಣ ಜೋಯಿಷ ಯರ್ಮುಂಜ ಮಾತನಾಡಿ, ಕಳೆದ 37 ವರ್ಷಗಳಿಂದ ನಿರಂತರವಾಗಿ ಗಣೇಶೋತ್ಸವ ನಡೆಯುತ್ತಿದ್ದು, ಪ್ರತಿ ವರ್ಷ ಗ್ರಾಮಸ್ಥರ ಸೇರುವಿಕೆ ಜಾಸ್ತಿಯಾಗುತ್ತಿದೆ. ಜೊತೆಗೆ ಯುವಜನತೆಯ ಸಕ್ರಿಯ ಭಾಗವಹಿಸುವಿಕೆ ಜಾಸ್ತಿಯಾಗುತ್ತಿದ್ದು, ಆ ಮೂಲಕ ಊರನ್ನು ಒಗ್ಗೂಡಿಸುವ ಕಾರ್ಯವನ್ನು ಈ ಗಣೇಶೋತ್ಸವ ಕಾರ್ಯಕ್ರಮ ಮಾಡುತ್ತಿದೆ ಎಂದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಮಾತನಾಡಿ ಶುಭಹಾರೈಸಿದರು. ಇದೇ ವೇಳೆ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್ ಪಡೆದುಕೊಂಡ ಮಾನ್ಯ ಮೂವಪ್ಪ ಅವರಿಗೆ ಸನ್ಮಾನ ಮಾಡಲಾಯಿತು.


ಗಣಪತಿಗೆ ಸ್ವರ್ಣ ಪದಕ ಸಮರ್ಪಣೆ:
ಸಾರ್ವಜನಿಕ ಶ್ರೀಗಣೇಶೋತ್ಸವದಲ್ಲಿ ಈ ತನಕ ವಿವಿಧ ರೀತಿಯ ಬೆಳ್ಳಿಯ ಆಭರಣಗಳು ಮಹಾಗಣಪತಿ ದೇವರಿಗೆ ಸಮರ್ಪಣೆಗೊಂಡಿದ್ದು, ಈ ವರ್ಷದ ಗಣೇಶೋತ್ಸವದಲ್ಲಿ ವಿಶೇಷವಾಗಿ ಸಮಿತಿಯಿಂದ ಮಹಾಗಣಪತಿಗೆ ಸುಮಾರು 2 ಪವನ್‌ನ ಸ್ವರ್ಣದ ಪದಕ ಸಮರ್ಪಣೆಗೊಂಡಿದೆ.


ಧಾರ್ಮಿಕ ಕಾರ್ಯಕ್ರಮಗಳು:
ಅರ್ಚಕ ಶ್ರೀಕಾಂತ್ ಭಟ್ ರವರ ನೇತೃತ್ವದಲ್ಲಿ ಗಣೇಶೋತ್ಸವದಲ್ಲಿ ಬೆಳಿಗ್ಗೆ ಬಿಂಬ ಶುದ್ದಿ, ಗಣಪತಿ ವಿಗ್ರಹ ಪ್ರತಿಷ್ಠೆ, ಗಣಪತಿ ಹೋಮ, ಸೇವಾ ಪೂಜೆಗಳು ನಡೆಯಿತು. ನಂತರ ಮದಗ ಶ್ರೀ ಭಜನಾ ಮಂಡಳಿಯವರಿಂದ ಭಜನೆ, ಕುಣಿತ ಭಜನೆ ನಡೆದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದವರಿಂದ ಶ್ರೀಹರಿ ದರ್ಶನ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.


ಗಣೇಶನ ವಿಗ್ರಹದ ಭವ್ಯ ಶೋಭಾಯಾತ್ರೆ:
ಸಂಜೆ ಶ್ರೀ ದೇವರಿಗೆ ವಿಶೇಷ ರಂಗಪೂಜೆ, ಮಹಾಪೂಜೆ ನಡೆದ ಬಳಿಕ ಶ್ರೀ ಗಣೇಶನ ವಿಗ್ರಹದ ಭವ್ಯ ಶೋಭಾಯಾತ್ರೆ ನಡೆಯಿತು. ದೇವಸ್ಥಾನದ ಬಳಿಯಿಂದ ಹೊರಟ ಶೋಭಾಯಾತ್ರೆಯು ಮತಾವು, ಯರ್ಮುಂಜಪಳ್ಳ ಮಾರ್ಗವಾಗಿ ಕಡವ ತನಕ ಸಾಗಿ ಅಲ್ಲಿಂದ ಹಿಂತಿರುಗಿ ಪಂಜಿಗುಡ್ಡೆ ಜುಮಾದಿಪಲ್ಕೆ ಮುಂಡಾಜೆ, ಹಾರಕರೆ ಪಡೀಲು ರಸ್ತೆಯಲ್ಲಿ ಸಾಗಿ ದೇವರಗುಂಡಿಯಲ್ಲಿ ಗಣೇಶನ ವಿಗ್ರಹದ ಜಲಸಂಭನದೊಂದಿಗೆ ಗಣೇಶೋತ್ಸವವು ಸಂಪನ್ನಗೊಂಡಿತ್ತು.

LEAVE A REPLY

Please enter your comment!
Please enter your name here