ಉಪ್ಪಿನಂಗಡಿ: ಕೋರಂ ಕೊರತೆಯ ಹಿನ್ನೆಲೆಯಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ಸಾಮಾನ್ಯ ಸಭೆ ರದ್ದುಗೊಂಡ ಘಟನೆ ಆ.29ರಂದು ನಡೆಯಿತು.
ಆ.29ರಂದು ಪೂರ್ವಾಹ್ನ 1೦:3೦ ಗಂಟೆಗೆ ಗ್ರಾ.ಪಂ.ನ ಸಾಮಾನ್ಯ ಸಭೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಸಭೆಗೆ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಹಾಗೂ ಸದಸ್ಯ ವಿಜಯಕುಮಾರ್ ಅವರು ಮಾತ್ರ ಹಾಜರಾಗಿದ್ದು, 11:3೦ರವರೆಗೆ ಇತರ ಸದಸ್ಯರಿಗಾಗಿ ಕಾದರೂ ಸಭೆಗೆ ಗ್ರಾ.ಪಂ. ಉಪಾಧ್ಯಕ್ಷರಾದ ಹರೀಶ್ ಡಿ., ಸದಸ್ಯರಾದ ಸ್ವಪ್ನ, ವೇದಾವತಿ, ತುಳಸಿ, ಹರೀಶ್ ಕೆ., ಕೆ. ರಮೇಶ ನಾಯ್ಕ, ಎ. ರತ್ನಾವತಿ, ಪ್ರಶಾಂತ ಎನ್. ಅವರು ಹಾಜರಾಗಿರಲಿಲ್ಲ. ಕೊನೆಗೇ ಕೋರಂ ಕೊರತೆಯಿಂದ ಸಭೆಯನ್ನು ರದ್ದುಪಡಿಸುವಂತೆ ಅಧ್ಯಕ್ಷೆ ಸುಜಾತ ಆರ್. ರೈ ಅವರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಸೂಚಿಸಿದರು. ಬಳಿಕ ಪಿಡಿಒ ಅವರು ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದರು. ಈ ಸಂದರ್ಭ ಗ್ರಾ.ಪಂ. ಲೆಕ್ಕ ಸಹಾಯಕ ದೇವಪ್ಪ ನಾಯ್ಕ ಉಪಸ್ಥಿತರಿದ್ದರು.
34 ನೆಕಿಲಾಡಿ ಗ್ರಾ.ಪಂ.ನಲ್ಲಿ 11 ಸದಸ್ಯ ಬಲವಿದ್ದು, ಎಲ್ಲರೂ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ. ಗ್ರಾ.ಪಂ.ನ ಸಾಮಾನ್ಯ ಸಭೆಗೆ ಒಟ್ಟು ಸದಸ್ಯರಲ್ಲಿ ಶೇ.5೦ರಷ್ಟು ಕೊರಂ ಇರಬೇಕಾಗುತ್ತದೆ.
ಬೆಳಗ್ಗೆ 10:3೦ಗೆ ಗ್ರಾ.ಪಂ.ನ ಸಾಮಾನ್ಯ ಸಭೆ ನಿಗದಿಯಾಗಿತ್ತು. ಸಾಮಾನ್ಯ ಸಭೆಯ ಬಗ್ಗೆ ಎಲ್ಲಾ ಸದಸ್ಯರಿಗೆ ನೊಟೀಸ್ ತಲುಪಿಸಲಾಗಿತ್ತು. ನಾನು ಕೂಡಾ ಫೋನ್ ಸಂಪರ್ಕ ಮಾಡಿ ತಿಳಿಸಿದ್ದೆ. ಆದರೆ 11:3೦ ತನಕ ಕಾದರೂ ವಿಜಯಕುಮಾರ್ ಅವರನ್ನು ಬಿಟ್ಟರೆ ಉಳಿದ ಯಾವ ಸದಸ್ಯರು ಸಭೆಗೆ ಬಾರದ್ದರಿಂದ ಸಭೆಯನ್ನು ಕೋರಂ ಕೊರತೆಯಿಂದ ರದ್ದುಗೊಳಿಸಲಾಗಿದೆ. ಯಾಕೆ ಸದಸ್ಯರು ಸಭೆಗೆ ಗೈರು ಹಾಜರಿಯಾಗಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ.
ಸುಜಾತ ರೈ ಆರ್.
ಅಧ್ಯಕ್ಷರು, 34 ನೆಕ್ಕಿಲಾಡಿ ಗ್ರಾ.ಪಂ.