ಪುತ್ತೂರು: ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ, ಸ್ವರಾಜ್ ಶೆಟ್ಟಿ ನಿರ್ದೇಶನದಲ್ಲಿ ಲಂಚುಲಾಲ್ ಕೆ.ಎಸ್. ನಿರ್ಮಾಣದ ತುಳು ಚಲನ ಚಿತ್ರ ‘ನೆತ್ತೆರಕೆರೆ’ ಆ.29ರಂದು ಬಿಡುಗಡೆಗೊಂಡಿತು.
ದೀಪ ಬೆಳಗಿಸಿ ಉದ್ಘಾಟಿಸಿದ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ತುಳು ಚಲನ ಚಿತ್ರಗಳ ಮುಖಾಂತರ ತುಳು ಭಾಷೆ, ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗುತ್ತಿದೆ. ಹೀಗಾಗಿ ತುಳು ಚಲನ ಚಿತ್ರಗಳಿಗೆ ಸಹಕಾರ, ಪ್ರೋತ್ಸಾಹ ನೀಡಬೇಕು. ಸ್ವರಾಜ್ ಶೆಟ್ಟಿಯವರ ತುಳು ಚಿತ್ರ ಬಿಡುಗಡೆಗೊಳ್ಳುತ್ತಿದ್ದು ಉಡುಪಿ ಮತ್ತು ದ.ಕ ಜಿಲ್ಲೆಯ ತುಳುವರು ವೀಕ್ಷಣೆ ಮಾಡುವ ಮುಖಾಂತರ ಕಲಾವಿದರ ಭವಿಷ್ಯ ಉಜ್ವಲವಾಗಲಿದೆ. ತುಳುವಿನ ಮೇಲಿನ ಗೌರವದಿಂದ ಚಿತ್ರ ವೀಕ್ಷಣೆ ಮಾಡಿ ಇನ್ನಷ್ಟು ಮಂದಿಗೆ ಪ್ರೇರಣೆ ನೀಡಬೇಕು ಎಂದರು.
ಅಕ್ಷಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಜಯಂತ ನಡುಬೈಲು ಮಾತನಾಡಿ, ತುಳುವಿನಲ್ಲಿ ಹಲವು ಚಿತ್ರಗಳು ಬರುತ್ತಿದೆ. ನಮ್ಮದೇ ಊರಿನ ಕಲಾವಿದರು ಅಭಿನಯಿಸಿರುವ ಚಿತ್ರಗಳು ತುಳು ಚಿತ್ರ ತಂಡದಲ್ಲಿರುವುದು ನಮಗೆ ಹೆಮ್ಮೆ. ಈ ಚಿತ್ರವು ನೂರು ದಿನ ಪ್ರದರ್ಶನ ಕಂಡ ಚಿತ್ರಗಳ ಸಾಲಿಗೆ ಸೇರ್ಪಡೆಗೊಳ್ಳಲಿ ಎಂದರು.
ಉದ್ಯಮಿ ಸಹಜ್ ರೈ ಬಳೆಜ್ಜ ಮಾತನಾಡಿ, ತುಳುವಿನಲ್ಲಿ ಸಾಕಷ್ಟು ಹೊಸ ಹೊಸ ಚಿತ್ರಗಳ ನಿರ್ಮಾಣ ಅಗುತ್ತಿರುವುದು ತುಳು ಭಾಷೆಗೆ ಹೆಮ್ಮೆ. ಬಹಳಷ್ಟು ಕಲಾವಿದರು ಚಿತ್ರದಲ್ಲಿದ್ದು ಚಿತ್ರವನ್ನು ಗೆಲ್ಲಿಸುವ ಕೆಲಸವಾಗಬೇಕು ಎಂದರು.
ಸಂಪ್ಯ ಉದಯಗಿರಿ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿಯ ಗೌರವಾಧ್ಯಕ್ಷ ಮಂಜಪ್ಪ ರೈ ಬಾರಿಕೆ ಮಾತನಾಡಿ, ತುಳು ಚಲನ ಚಿತ್ರಗಳನ್ನು ಎಲ್ಲರೂ ವಿಕ್ಷಣೆ ಮಾಡುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ರಾಷ್ಟ್ರಪ್ರಶಸ್ತಿ ವಿಜೇತ ಮುಖ್ಯಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ, ಮೂಕಾಂಬಿಕ ಕಲ್ಚರಲ್ ಅಕಾಡೆಮಿಯ ನೃತ್ಯಗುರು ದೀಪಕ್ ಕುಮಾರ್, ದಯಾನಂದ ರೈ ಬೆಟ್ಟಂಪಾಡಿ ಮಾತನಾಡಿ ಶುಭಹಾರೈಸಿದರು. ಸ್ಕೂಲ್ ಲೀಡರ್ ರಝಾಕ್, ಚಿತ್ರದ ನಟಿ ಭವ್ಯ ಪೂಜಾರಿ, ಭಾರತ್ ಸಿನೇಮಾಸ್ನ ವ್ಯವಸ್ಥಾಪಕ ಜಯರಾಮ ವಿಟ್ಲ ಉಪಸ್ಥಿತರಿದ್ದರು. ಪದ್ಮರಾಜ್ ಪುತ್ತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಚಲನಚಿತ್ರ ವಿತರಕ ಬಾಲಕೃಷ್ಣ ರೈ ಕುಕ್ಕಾಡಿ ವಂದಿಸಿದರು.