ಕರ್ನೂರು ಸಾರ್ವಜನಿಕ ಗಣೇಶೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ

0

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಆ.27 ರಂದು ಕರ್ನೂರು ಶಾಲಾ ಬಳಿ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಶ್ರೀ ಗಣಪತಿ ಹೋಮ ನಡೆದು ಬಳಿಕ ಭಜನಾ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಸ್ಥಳೀಯ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಅಂಗನವಾಡಿ ಕೇಂದ್ರದ ಮಕ್ಕಳಿಂದ ಪುಟಾಣಿ ಹೆಜ್ಜೆ ಮತ್ತು ತೇಜಸ್ವಿನಿ ನವೀನ್ ಗೌಡ ಕುಕ್ಕುಡೇಲು ಎಸ್ಟೇಟ್ ನಿರ್ದೇಶನದಲ್ಲಿ ಸಮರ್ಥ ಸಾಂಸ್ಕೃತಿಕ ಕಲಾ ತಂಡ ಈಶ್ವರಮಂಗಲ ತಂಡದಿಂದ ನೃತ್ಯ ವೈಭವ ಫಿಲ್ಮೀ ಡ್ಯಾನ್ಸ್ ಧಮಾಕ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ ಸಾಧಕರಾದ ಡಾ. ಶಶಾಂಕ್ ರೈ ಕರ್ನೂರು ಬಾವ, ಡಾ. ಚೈತ್ರಾ ಕೆ ಆಚಾರ್ಯ, ಡಾ. ಸುಶ್ಮಿತಾ ರೈ ಕರ್ನೂರು ಬಾವ ಇವರನ್ನು ಗೌರವಿಸಲಾಯಿತು.


ಸಮಿತಿಯ ಗೌರವಾಧ್ಯಕ್ಷ ರವಿಕಿರಣ್ ಶೆಟ್ಟಿ ಬೆದ್ರಾಡಿ ಮಾತನಾಡಿ, ಇನ್ನೊಬ್ಬರ ಕಷ್ಟದಲ್ಲಿ ಯಾರು ಮುಂದೆ ಬರುತ್ತಾರೋ ಅಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಉತ್ತುಂಗಕ್ಕೆ ಏರುತ್ತಾರೆ ಎಂಬುದಕ್ಕೆ ಶಂಕರ ಆಳ್ವರವರು ನಿದರ್ಶನರಾಗಿದ್ದಾರೆ. ಈ ಮಣ್ಣಿನಲ್ಲಿ ಅದೆಷ್ಟೋ ಜೀವರಾಶಿಗಳಿದ್ದರೂ ಮನುಷ್ಯ ಜನ್ಮ ಶ್ರೇಷ್ಠವಾಗಿದೆ. ಇಂತಹ ಮಣ್ಣಿನಲ್ಲಿ ಹುಟ್ಟಿ ಬೆಳೆದು ಸಮಾಜಕ್ಕೆ ಆದರ್ಶರಾಗಿರುವ ಮೂರು ಮತ್ತುಗಳಂತಿರುವ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಾಂಕ್ ಕರ್ನೂರು ಬಾವ, ಶಿವಮೊಗ್ಗ ಮಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಹಾರ ತಜ್ಞೆ ಡಾ.ಚೈತ್ರಾ ಕೆ.ಆಚಾರ್ಯ ಮತ್ತು ಕಾಸರಗೋಡಿನ ದಂತ ವೈದ್ಯೆ ಡಾ.ಸುಶ್ಮಿತಾ ರೈ ಕರ್ನೂರುರವರ ಆದರ್ಶಗಳು ನಮಗೆಲ್ಲಾ ಮಾದರಿಯಾಗಿದೆ ಎಂದರು.
ವೈದ್ಯರು ತಮ್ಮ ಹುಟ್ಟೂರಿನಲ್ಲಿ ಸನ್ಮಾನ ಪಡೆಯುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯಾಗಿದೆ ಎಂದ ಅವರು, ಡಾ.ಶಶಾಂಕ್ ಕರ್ನೂರು ಬಾವರವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಮಂಗಳೂರಿನ ಜಿಲ್ಲಾಧಿಕಾರಿಯಾಗಿ ಬರಬೇಕು ಎಂಬುದು ನಮ್ಮೆಲ್ಲರ ಅಭಿಲಾಷೆಯಾಗಿದೆ. ನಮ್ಮ ಆಸೆ ಮತ್ತು ಅವರ ಕನಸ್ಸನ್ನು ಈಡೇರಿಸಲು ದೈವ ದೇವರು ಅನುಗ್ರಹಿಸಲಿ ಎಂದರು.


ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಶಂಕರ ಆಳ್ವ ಕರ್ನೂರು ಮಾತನಾಡಿ, ರವಿಕಿರಣ್ ಶೆಟ್ಟಿ ಬೆದ್ರಾಡಿಯವರು ಕರ್ನೂರಿಗೆ ನಾಯಕತ್ವ ಗುಣವನ್ನು ತೋರಿಸಿದ ಒಬ್ಬ ನಾಯಕರಾಗಿದ್ದಾರೆ. ಇಂತಹ ಸಮರ್ಥ ನಾಯಕತ್ವದಲ್ಲಿ ಇಲ್ಲಿನ ಗಣೇಶೋತ್ಸವ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಜಾತಿ, ಧರ್ಮ, ರಾಜಕೀಯ ರಹಿತವಾಗಿ ನಡೆಸುತ್ತಿರುವ ಗಣೇಶೋತ್ಸವ ಬಹಳಷ್ಟು ಖುಷಿ ಕೊಟ್ಟಿದೆ ಎಂದರು.


ಡಾ.ಸುಶ್ಮಿತಾ ಅವರ ತಾಯಿ ಶಿಕ್ಷಕಿ ರೋಹಿಣಾಕ್ಷಿ ಮಾತನಾಡಿ, ನನ್ನ ಮಗಳಿಗೆ ನನ್ನ ಹುಟ್ಟೂರಿನಲ್ಲಿ ಸನ್ಮಾನ ಸಿಕ್ಕಿರುವುದು ಖುಷಿಯ ವಿಚಾರವಾಗಿದೆ. ಎಲ್ಲರೂ ಸೇರಿಕೊಂಡು ನಡೆಸುತ್ತಿರುವ ಇಲ್ಲಿನ ಗಣೇಶೋತ್ಸವ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಸನ್ಮಾನಿತರ ಪರವಾಗಿ ಡಾ.ಚೈತ್ರಾ ಆಚಾರ್ಯ ಮಾತನಾಡಿ, ಇತರ ಕಡೆಗಳಲ್ಲಿ ಸನ್ಮಾನ ಸ್ವೀಕರಿಸಿದಕ್ಕಿಂತಲೂ ನನ್ನ ಹುಟ್ಟೂರಿನಲ್ಲಿ ಸ್ವೀಕರಿಸಿದ ಈ ಸನ್ಮಾನ ಬಹಳಷ್ಟು ಖುಷಿ ಕೊಟ್ಟಿದೆ. ಗಣೇಶೋತ್ಸವ ಎಂದರೆ ನನಗೆ ನನ್ನ ಜೀವನ ಪಥವನ್ನು ಬದಲಾಯಿಸಿದ ದಿನವಾಗಿದೆ. ಅದೇ ದಿನದಂದು ನನಗೆ ಸನ್ಮಾನ ಸಿಕ್ಕಿರುವುದು ಗಣೇಶನ ಆಶೀರ್ವಾದವೇ ಸರಿ. ಇದಕ್ಕೆ ನಾನು ಸಮಿತಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಗ್ರಾ.ಪಂ. ಸದಸ್ಯರಿಗೆ ಸನ್ಮಾನ:
ವೇದಿಕೆಗೆ ಪಂಚಾಯತ್ ನಿಧಿಯಿಂದ ಶಾಶ್ವತ ವೇದಿಕೆ ಹಾಗೂ ಶೀಟ್ ಅಳವಡಿಸಿದ ಕರ್ನೂರು ವಾರ್ಡ್‌ಗೆ ಸಂಬಂಧಪಟ್ಟ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಸದಸ್ಯರಾದ ಪ್ರದೀಪ್ ರೈ (ಗಣೇಶೋತ್ಸವ ಸಮಿತಿ ಅಧ್ಯಕ್ಷ), ಕುಮಾರನಾಥ ಪೂಜಾರಿ ಕರ್ನೂರು ಚಾರ್ಪಟ್ಟೆ (ಸಮಿತಿ ಖಜಾಂಜಿ), ಪ್ರಫುಲ್ಲಾ ರೈ ಅವರನ್ನು ಶಲ್ಯ ಹೊದಿಸಿ ಗೌರವಿಸಲಾಯಿತು. ಇದೇ ವೇಳೆ, ಉದ್ಯಮಿ ಶಂಕರ ಆಳ್ವ ಹಿತ್ಲುಮೂಲೆ ಕರ್ನೂರು ನಡುಮನೆ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ಪ್ರಾಯೋಜಕರನ್ನು ಗೌರವಿಸಲಾಯಿತು.

ಕಾರ್ಯಧ್ಯಕ್ಷ ಪ್ರವೀಣ ರೈ ಮೂರ್ತಿಮಾರು, ಕಾರ್ಯದರ್ಶಿ ಪ್ರವೀಣ್ ಮುಖಾರಿ ಕೋರಿಗದ್ದೆ, ಸಮಿತಿ ಸದಸ್ಯ ಶಿವರಾಜ್,ಕಿಶನ್ ರೈ, ರಕ್ಷಿತ್‌ಮುಕಾರಿ, ಮತ್ತಿತರರು ಉಪಸ್ಥಿತರಿದ್ದರು. ಪ್ರಾಯೋಜಕರಾದ ಸುಭಾಸ್‌ಚಂದ್ರ ರೈ ಮೈರೋಳು, ರಾಮದಾಸ ರೈ, ವಿನಿತ್, ಮನೋಜ್, ಗಿರೀಶ್ ರೈ ಅವರು ಅತಿಥಿಗಳಿಗೆ ಶಲ್ಯ ಹೊದಿಸಿ ಸ್ವಾಗತಿಸಿದರು. ಸಾತ್ವಿಕಾ ರೈ, ತೃಷಾ, ಯಕ್ಷಿತಾ ರೈ ಸನ್ಮಾನಿತರ ಪರಿಚಯಯವನ್ನು ವಾಚಿಸಿದರು. ಪ್ರಶಾಂತ್ ನಾಯಾರ್ ನಿರೂಪಿಸಿದರು. ಮಂಜುನಾಥ್ ರೈ ಸ್ವಾಗತಿಸಿ, ವಂದಿಸಿದರು.

ಬಳಿಕ ನಡೆದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಕರ್ನೂರು ಶಾಲಾ ಮಕ್ಕಳಿಂದ ವಿಷ್ಣು ದರ್ಶನ ಎಂಬ ನೃತ್ಯ ರೂಪಕ ನಡೆಯಿತು. ಕೇರಳದ ಪ್ರಸಿದ್ಧ ಮೂರು ತಂಡಗಳಿಂದ ಕೈ ತೊಟ್ಟ್ ಕಳಿ ಮತ್ತು ನಾಡನ್ ಪಾಟುಗಳ್ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು.

ಸ್ಥಳೀಯರು ಐಎಎಸ್, ಐಪಿಎಸ್‌ಗಳಾದರೆ ಸನ್ಮಾನ
ನಮ್ಮೂರಿನ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಪಾಸ್ ಆಗಿ ಬಂದರೆ ನಮ್ಮೂರಿನ ಗಣೇಶೋತ್ಸವದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಅದರ ಸಂಪೂರ್ಣ ಖರ್ಚನ್ನು ನಾನೇ ಭರಿಸುತ್ತೇನೆ ಎಂದು ರವಿಕಿರಣ್ ಶೆಟ್ಟಿಯವರು ಘೋಷಣೆ ಮಾಡಿದರು.

LEAVE A REPLY

Please enter your comment!
Please enter your name here