ಲೋಕಾಯುಕ್ತ ದಾಳಿ ಬಳಿಕ ಕಚೇರಿಗೆ ಬಾರದ ತಹಸೀಲ್ದಾರ್: ಕಚೇರಿಗೆ ಬೀಗ – ವಿಚಾರಣೆಗೆ ಹಾಜರಾಗಲು ನೊಟೀಸ್

0

ಪುತ್ತೂರು:ಅಕ್ರಮ ಸಕ್ರಮ ಜಮೀನು ಪರಭಾರೆಗೆ ಎನ್‌ಓಸಿ ನೀಡಲು ಲಂಚ ಪಡೆದ ಆರೋಪದಲ್ಲಿ ತಾಲೂಕು ಕಚೇರಿ ಭೂಸುಧಾರಣೆ ಶಾಖೆ ಕೇಸ್ ವರ್ಕರ್ ಸುನಿಲ್ ಲೋಕಾಯುಕ್ತ ಪೊಲೀಸರಿಂದ ರೆಡ್ ಹ್ಯಾಂಡ್ ಆಗಿ ಬಂಧನಕ್ಕೊಳಗಾದ ಬಳಿಕ ಪುತ್ತೂರು ತಹಸೀಲ್ದಾರ್ ಎಸ್.ಬಿ.ಕೂಡಲಗಿ ನಾಪತ್ತೆಯಾಗಿದ್ದಾರೆ.ಈ ಪ್ರಕರಣದಲ್ಲಿ ತಹಸಿಲ್ದಾರ್ ವಿರುದ್ಧವೂ ದೂರು ದಾಖಲಾಗಿದ್ದು, ಅವರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಲೋಕಾಯಕ್ತ ಪೊಲೀಸರು ತಿಳಿಸಿದ್ದರು.


ಕೇಸ್ ವರ್ಕರ್ ಸುನಿಲ್ ಬಂಧನದ ಬಳಿಕ ತಹಸೀಲ್ದಾರ್ ಎಸ್.ಬಿ.ಕೂಡಲಗಿ ನಾಪತ್ತೆಯಾಗಿದ್ದು ಆ.29,30ರಂದು ಅವರು ಕಚೇರಿಗೆ ಬಂದಿರಲಿಲ್ಲ.ಅವರ ಕಚೇರಿಗೆ ಬೀಗ ಹಾಕಲಾಗಿದೆ.ಈ ನಡುವೆ ಅವರು ಎರಡು ದಿನದ ರಜೆ ಪಡೆಯಲು ಪ್ರಯತ್ನ ನಡೆಸಿದ್ದರೆಂದು ಮೂಲಗಳಿಂದ ತಿಳಿದು ಬಂದಿದೆ.ರಜೆ ಪಡೆಯುವ ಪ್ರಕ್ರಿಯೆಯನ್ನು ತಹಸೀಲ್ದಾರ್ ಆರಂಭಿಸಿದ್ದರು ಎಂದು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ತಿಳಿಸಿದ್ದಾರೆ.ಆದರೆ, ಪುತ್ತೂರು ತಹಸೀಲ್ದಾರ್‌ಗೆ ರಜೆ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.


ವಿಚಾರಣೆಗೆ ಹಾಜರಾಗಲು ಸೂಚನೆ:
ತಹಸೀಲ್ದಾರ್ ಕಚೇರಿಯ ಭೂಸುಧಾರಣೆ ಶಾಖೆಯ ಕೇಸ್ ವರ್ಕರ್ ಸುನಿಲ್ ಅವರನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಈ ಪ್ರಕರಣದಲ್ಲಿ ತಹಸಿಲ್ದಾರ್ ಪಾತ್ರದ ಬಗ್ಗೆಯೂ ತನಿಖೆ ನಡೆಯಲಿದೆ.ಆದರೆ ತಹಸೀಲ್ದಾರ್ ನಾಪತ್ತೆಯಾಗಿರುವ ವಿಚಾರವನ್ನು ಲೋಕಾಯುಕ್ತ ಪೊಲೀಸರು ಎ.ಸಿ.ಯವರ ಗಮನಕ್ಕೆ ತಂದಿದ್ದಾರೆ.ಆ ಬಳಿಕ ಉಪ ತಹಸೀಲ್ದಾರ್ ಅವರಿಗೆ ಎ.ಸಿ.ಯವರು ಜವಾಬ್ದಾರಿ ನೀಡಿ, ತನಿಖೆಗೆ ಬೇಕಾದ ಸಹಕಾರ ನೀಡುವಂತೆ ಸೂಚಿಸಿದ್ದರು.ಸೆ.1ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಕಚೇರಿಗೆ ಅಗಮಿಸಿ ವಿಚಾರಣೆ ಎದುರಿಸುವಂತೆ ತಹಸೀಲ್ದಾರ್ ಅವರಿಗೆ ಲೋಕಾಯುಕ್ತ ಪೊಲೀಸರು ನೋಟೀಸ್ ನೀಡಿದ್ದಾರೆ.

ರಜೆ ಮಂಜೂರಾಗಿದೆಯೇ ಗೊತ್ತಿಲ್ಲ
ಲೋಕಾಯುಕ್ತ ಪೊಲೀಸರ ದಾಳಿಯ ವೇಳೆ ಇಲಾಖಾ ಮುಖ್ಯಸ್ಥ ತಹಸೀಲ್ದಾರ್ ಇಲ್ಲದ ಕಾರಣ ಪತ್ರದ ಮೂಲಕ ಉಪ ತಹಸೀಲ್ದಾರ್‌ಗೆ ಜವಾಬ್ದಾರಿ ನೀಡಿದ್ದೆ.ಆ.29,30ರಂದು ರಜೆ ಪಡೆಯಲು ತಹಸೀಲ್ದಾರ್ ಅವರು ಇಲಾಖಾ ಉಪಕ್ರಮ ಆರಂಭಿಸಿದ್ದಾರೆ.ಆದರೆ ಅದು ಮಂಜೂರಾಗಿದೆಯೇ ಎಂಬುದು ನನಗೆ ತಿಳಿದಿಲ್ಲ.
ಸ್ಟೆಲ್ಲಾ ವರ್ಗೀಸ್, ಎಸಿ ಪುತ್ತೂರು


ರಜೆ ನೀಡಿಲ್ಲ
ಪುತ್ತೂರು ತಹಸೀಲ್ದಾರ್ ಅವರಿಗೆ ನಾನು ರಜೆ ಮಂಜೂರು ಮಾಡಿಲ್ಲ.ಅವರು ರಜೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುವ ವಿಚಾರವೂ ನನ್ನ ಗಮನಕ್ಕೆ ಬಂದಿಲ್ಲ.ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು
-ದರ್ಶನ್ ಹೆಚ್.ವಿ., ದ.ಕ. ಜಿಲ್ಲಾಽಕಾರಿ

LEAVE A REPLY

Please enter your comment!
Please enter your name here