ಪುತ್ತೂರು:ಶಾಲಾ ಶಿಕ್ಷಣ ಇಲಾಖೆ ಮತ್ತು ಡಾ ಕೆ ಶಿವರಾಮ ಕಾರಂತ ಸರ್ಕಾರಿ ಪ್ರೌಢಶಾಲೆ ಪುತ್ತೂರು ನಗರ ಇದರ ಆಶ್ರಯದಲ್ಲಿ ಪುತ್ತೂರು ನಗರ ವಲಯದ 17ರ ವಯೋಮಾನದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟವು ಆ.25 ರಂದು ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ ಎಮ್, ಕ್ರೀಡೆಯು ವಿದ್ಯಾರ್ಥಿಗಳನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಬೌದ್ಧಿಕವಾಗಿ ಸದೃಢಗೊಳಿಸುತ್ತದೆ. ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ನಾಗರಿಕರಾಗಿ ಎಂದರು.
ಲೋಕೋಪಯೋಗಿ ಇಲಾಖೆಯ ಅಭಿಯಂತರ ಪ್ರಮೋದ್ ಕುಮಾರ್ ಕೆ ಕೆ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆಯು ಅತ್ಯಂತ ಅವಶ್ಯಕ. ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ತನ್ನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು. ಎಸ್ ಆರ್ ಕೆ ಲ್ಯಾಡರ್ಸ್ ನ ಮಾಲಕ ಕೇಶವ ಎ ಮಾತನಾಡಿ, ಕ್ರೀಡೆಯು ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತದೆ ಎಂದು ಹೇಳಿ,ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಪಂಚಾಕ್ಷರಿ ಇವರು ವಹಿಸಿದ್ದರು. ವೇದಿಕೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಉಪ ಪ್ರಾಂಶುಪಾಲರು ಹಾಗೂ ಪುತ್ತೂರು ತಾಲೂಕಿನ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ವಸಂತ್ ಮೂಲ್ಯ , ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಯ್ಯ, ಪುತ್ತೂರು ನಗರ ವಲಯದ ಪ್ರೌಢ ವಿಭಾಗದ ನೋಡಲ್ ಅಧಿಕಾರಿ ನರೇಶ್ ಲೋಬೋ ,ಪುತ್ತೂರು ನಗರ ವಲಯದ ಪ್ರಾಥಮಿಕ ವಿಭಾಗದ ನೋಡಲ್ ಅಧಿಕಾರಿ ಕುಸುಮಾವತಿ ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇತನ್ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ಜಲಜಾಕ್ಷಿ ಕೆ ಎಂ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಪ್ರಮೀಳಾ ಬಿ ಕೆ ವಂದಿಸಿದರು. ಹಿಂದಿ ಶಿಕ್ಷಕ ಅಬ್ರಹಾಂ ಎಸ್ ಎ ದಾನಿಗಳ ಪಟ್ಟಿಯನ್ನು ವಾಚಿಸಿ,ಅಭಿನಂದನೆ ಸಲ್ಲಿಸಿದರು. ಕನ್ನಡ ಶಿಕ್ಷಕ ನಾರಾಯಣ್ ನಾಯ್ಕ್ ಎ ಕಾರ್ಯಕ್ರಮ ನಿರೂಪಿಸಿದರು.
ಅಪರಾಹ್ನ ಶಾಲಾ ಎಸ್ ಡಿ ಎಂ ಸಿ ಯ ಕಾರ್ಯಾಧ್ಯಕ್ಷ ಪಂಚಾಕ್ಷರಿ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವು ನಡೆಯಿತು. ಶಾಲಾ ಮುಖ್ಯ ಶಿಕ್ಷಕ ಜಲಜಾಕ್ಷಿ ಕೆ ಎಂ,ಪುತ್ತೂರು ಕ್ಲಸ್ಟರ್ ನ ಸಿ ಆರ್ ಪಿ ಶಶಿಕಲಾ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಿನೀತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
17ರ ವಯೋಮಾನದ ಬಾಲಕರ ವಿಭಾಗದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಬಹುಮಾನ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ ಪುತ್ತೂರು ನಗರ ಪ್ರಥಮ ಸ್ಥಾನ ಹಾಗೂ ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು.ವಿಜೇತರ ಪಟ್ಟಿಯನ್ನು ಆಂಗ್ಲ ಭಾಷಾ ಶಿಕ್ಷಕರಾದ ಡಾ. ಚಾಂದಿನಿ ವಾಚಿಸಿದರು. ಶಿಕ್ಷಕರಾದ ನಳಿನಿ ಎ, ಸವಿತಾ ಯು ಆರ್, ವೀಣಾ ಎ ವಿ ಸಹಕರಿಸಿದರು.