ಗಣೇಶೋತ್ಸವ ಆಚರಣೆಯ ಉದ್ದೇಶವನ್ನು ಮರೆಯಬಾರದು: ವಿಜಯ ಕುಮಾರ್
ಪುತ್ತೂರು: ಎಲ್ಲಾ ಕಡೆಗಳಲ್ಲಿ ಗಣೇಶೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ ಆದರೆ ಗಣೇಶೋತ್ಸವದ ಹಿಂದಿನ ಉದ್ದೇಶವನ್ನು ನಾವು ಮರೆತಂತೆ ಕಾಣುತ್ತಿದೆ. ಯಾವ ಉದ್ದೇಶಕ್ಕಾಗಿ ನಮ್ಮ ಹಿರಿಯರು ಸಾರ್ವಜನಿಕ ಗಣೇಶೋತ್ಸವವನ್ನು ಜಾರಿಗೆ ತಂದರೋ ಆ ಉದ್ದೇಶ ಇಂದು ಕಾಣುತ್ತಿಲ್ಲ ಇದನ್ನು ನಾವು ಅರ್ಥ ಮಾಡಕೊಳ್ಳಬೇಕಾಗಿದೆ. ಗಣೇಶೋತ್ಸವದ ನಿಜವಾದ ಉದ್ದೇಶವನ್ನು ಅರ್ಥಮಾಡಿಕೊಂಡು ಆಚರಣೆ ಮಾಡಬೇಕಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕಾರರಾದ ವಿಜಯ ಕುಮಾರ್‌ರವರು ಹೇಳಿದರು.
ಅವರು ಕೆದಂಬಾಡಿ ಗ್ರಾಮ ವ್ಯಾಪ್ತಿಯ ತ್ಯಾಗರಾಜನಗರ ಹಿಂದು ಜಾಗರಣಾ ವೇದಿಕೆಯ 23 ನೇ ವಾರ್ಷಿಕ ಸಮಾರಂಭದ ಪ್ರಯುಕ್ತ 29 ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ನಮ್ಮ ಆಚಾರ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದ ಅವರು ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಭೇಟಿ ನೀಡುವ ವೇಳೆ ನಾವು ಧರಿಸಬೇಕಾದ ಉಡುಪಗಳ ಬಗ್ಗೆ ದೇವರ ಪ್ರಾರ್ಥನೆಯ ಬಗ್ಗೆ ಮಾಹಿತಿ ನೀಡಿದರು.
ಹಿಂದೂ ಜಾಗರಣಾ ವೇದಿಕೆಯ ಸಂಯೋಜಕ ರವಿ ಸ್ವಾಮಿನಗರ ಸಭಾಧ್ಯಕ್ಷತೆ ವಹಿಸಿದ್ದರು. ಶೇಷಪ್ಪ ಮಡಿವಾಳ ಕೋಡಿಯಡ್ಕರವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಆ.೨೭ ರಂದು ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ದಿ.ಉಮೇಶ್ ತ್ಯಾಗರಾಜನಗರ ಇವರ ಸ್ಮರಣಾರ್ಥ ಪೊಡಿಯ ತ್ಯಾಗರಾಜನಗರ ಮತ್ತು ಸಹೋದರರು ಬಹುಮಾನ ಪ್ರಾಯೋಜಕತ್ವ ವಹಿಸಿದ್ದರು. ದೀಪಕ್ ಕೋಡಿಯಡ್ಕ ಪ್ರಾರ್ಥಿಸಿದರು. ಶಿವರಾಮ ಅಮೈ ಸ್ವಾಗತಿಸಿದರು. ಅಶೋಕ್ ಅಮೈ, ಬಾಲಕೃಷ್ಣ ಮಡಿವಾಳ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಅಶೋಕ್ ತ್ಯಾಗರಾಜನಗರ ವಂದಿಸಿದರು. ಸೌಮ್ಯ ವಿನಯ ಕುಮಾರ್ ಮತ್ತು ದಿವ್ಯಶ್ರೀ ತ್ಯಾಗರಾಜನಗರ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಸ್ವಾಮಿನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ತಿಂಗಳಾಡಿ ಶ್ರೀ ದೇವತಾ ಸಮಿತಿ ವತಿಯಿಂದ ಪೂಜಿಸಲ್ಪಟ್ಟ ಶ್ರೀ ಮಹಾಗಣೇಶ ವಿಗೃಹದ ಶೋಭಾಯಾತ್ರೆಯನ್ನು ಬರಮಾಡಿಕೊಂಡು ಹಣ್ಣುಕಾಯಿ, ಮಂಗಳಾರತಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ಪದಾಧಿಕಾರಿಗಳು, ಸರ್ವ ಸದಸ್ಯರುಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.