ಪುತ್ತೂರು: ಪುರುಷರಕಟ್ಟೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಮುಂಭಾಗದಲ್ಲಿ 4 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಿದ ಗಣೇಶೋತ್ಸವದ ಬೆಳ್ಳಿ ಹಬ್ಬದ ಸಂಭ್ರಮವು ಆ.30ರಂದು ಶ್ರೀಗಣೇಶನ ವಿಗ್ರಹದ ವೈಭವದ ಶೋಭಾಯಾತ್ರೆ, ಜಲಸ್ಥಂಬನದೊಂದಿಗೆ ಸಂಪನ್ನಗೊಂಡಿತು.

ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯರವರ ನೇತೃತ್ವದಲ್ಲಿ ನಡೆದ ಬೆಳ್ಳಿ ಹಬ್ಬದ ಗಣೇಶೋತ್ಸವದಲ್ಲಿ ಆ.27ರಂದು ವಿಗ್ರಹದ ಪ್ರತಿಷ್ಠೆ, ಗಣಹೋಮದೊಂದಿಗೆ ಚಾಲನೆ ದೊರೆಯಿತು. ಪ್ರತಿ ವರ್ಷ ಮೂರು ದಿನಗಳ ಕಾಲ ನಡೆಯುವ ಗಣೇಶೋತ್ಸವವು ಈ ಭಾರಿ ಬೆಳ್ಳಿ ಹಬ್ಬದ ಅಂಗವಾಗಿ ಕಾರ್ಯಕ್ರಮಗಳು ನಾಲ್ಕು ದಿನಗಳ ಕಾಲ ವೈಭವದಿಂದ ನೆರವೇರಿತು. ಬೆಳ್ಳಿ ಹಬ್ಬದ ಅಂಗವಾಗಿ ಎರಡನೇ ದಿನವಾದ ಆ.28ರಂದು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 108 ಕಾಯಿ ಗಣಹೋಮ, ಸಂಜೆ ಮೂಡಪ್ಪ ಸೇವೆ ನೆರವೇರಿತು. ನಾಲ್ಕು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಪ್ರತಿದಿನ ವಿವಿಧ ಭಜನಾ ಮಂಡಳಿಯವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಸಂಜೆ ರಂಗಪೂಜೆ, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ, ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆದು ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿತು.
ಬೆಳ್ಳಿ ಹಬ್ಬದ ಕೊನೆಯ ದಿನವಾದ ಆ.30ರಂದು ಬೆಳಿಗ್ಗೆ ಗಣಹೋಮ, ವಿವಿಧ ಭಜನಾ ಮಂಡಳಿಯವರಿಂದ ಭಜನೆ, ಕುಣಿತ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ನಂತರ ‘ರಾಮ ಶ್ರೀರಾಮ’ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಸಂಜೆ ಮಹಾಪೂಜೆ ನಂತರ ವಿಶೇಷ ಸುಡುಮದ್ದು ಪ್ರದರ್ಶನದೊಂದಿಗೆ ವೈಭವ ಶೋಭಾಯಾತ್ರೆ ನಡೆಯಿತು.
ಶೋಭಾಯಾತ್ರೆಯುದ್ದಕ್ಕೂ ವಿವಿಧ ಭಜನಾ ಮಂಡಳಿಗಳ ನೂರಾರು ಮಕ್ಕಳಿಂದ ಕುಣಿತ ಭಜನೆ, ಚೆಂಡೆ, ನಾಸಿಕ್ ಬ್ಯಾಂಡ್ಗಳು ಮೇಳೈಸಿತು. ಶೋಭಾಯಾತ್ರೆಯು ಪುರುಷರಕಟ್ಟೆಯಿಂದ ಹೊರಟು ಇಂದಿರಾನಗರ, ಕೂಡುರಸ್ತೆ ಮಾರ್ಗವಾಗಿ ಸಂಚರಿಸಿ ಕಲ್ಕಾರ್ನಲ್ಲಿ ಜಲಸ್ಥಂಭನಗೊಳ್ಳುವ ಮೂಲಕ ಬೆಳ್ಳಿಹಬ್ಬದ ಗಣೇಶೋತ್ಸವವು ಸಂಪನ್ನಗೊಂಡಿತು.
2೦,೦೦೦ ಮಂದಿಗೆ ಅನ್ನದಾನ:
ನಾಲ್ಕು ದಿನಗಳ ಕಾಲ ಬೆಳ್ಳಿ ಹಬ್ಬದ ಗಣೇಶೋತ್ಸವದಲ್ಲಿ ಬೆಳಿಗ್ಗೆ ಹಾಗು ಸಂಜೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆದಿದ್ದು ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಸುಮಾರು 20,೦೦೦ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ಬೆಳ್ಳಿ ಸರ, ರಥ ಸಮರ್ಪಣೆ:
ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ಸಮಿತಿಯಿಂದ ಶೋಭಾಯಾತ್ರೆಗೆ ಆವಶ್ಯಕವಾಗಿದ್ದ ಮೂಶಿಕ ವಾಹನ ಇರುವ ರಥವನ್ನು ಸುಮಾರು ರೂ.5ಲಕ್ಷ ವೆಚ್ಚದಲ್ಲಿ ಸಮಿತಿಯಿಂದ ಸಮರ್ಪಣೆಗೊಂಡಿತ್ತು. ಅಲ್ಲದೆ ಕಿಶೋರ್ ನಾೖಕ್ ಮತ್ತು ಮನೆಯವರು ಬೆಳ್ಳಿಸರವನ್ನು ಮಹಾಗಣಪತಿಗೆ ಅರ್ಪಣೆ ಮಾಡಿದರು.
ಟೈ ಬ್ರೇಕರ್ಸ್ ಯುವಕ ವೃಂದ ಪುರುಷರಕಟ್ಟೆ, ನೇತಾಜಿ ಯುವಕ ಮಂಡಲ ಕೂಡರಸ್ತೆ, ನವಶಕ್ತಿ ಸ್ಪೋರ್ಟ್ಸ್& ಆರ್ಟ್ಸ್ ಕ್ಲಬ್ ಮುಂಡೋಡಿ, ಶ್ರೀ ವನದುರ್ಗಾಂಬಿಕಾ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಸೇವಾ ಸಮಿತಿ, ಶ್ರೀ ಮಹಾಲಿಂಗೇಶ್ವರ ಕಟ್ಟೆಪೂಜೆ ಸೇವಾ ಸಮಿತಿ ಪುರುಷರಕಟ್ಟೆ, ಕೋಡಿಮಜಲು ಫ್ರೆಂಡ್ಸ್, ಶ್ರೀ ದುರ್ಗಾ ಭಜನಾ ಮಂಡಳಿ ಕೂಡು ರಸ್ತೆ, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮಜಲಮಾರು, ಹಿಂದು ಜಾಗರಣ ವೇದಿಕೆ ಶಿವಾಜಿ ಶಾಖೆ ಪುರುಷರಕಟ್ಟೆ, ಕಟ್ಟೆ ಫ್ರೆಂಡ್ಸ್, ನರಿಮೊಗರು ಯುವಕ ಮಂಡಲ, ನಾಥ ಪಂಥೀಯ ಜೋಗಿ ಸಮಾಜ ಸುಧಾರಕ ಸಂಘ, ಬಿ.ಎಂಎಸ್ ಆಟೋ ಚಾಲಕರ ಸಂಘ ಪುರುಷರಕಟ, ಪ್ರೀತಿ, ಸ್ನೇಹಾ, ಭಾಗ್ಯ ಶ್ರೀ, ಸ್ತ್ರೀ ಶಕ್ತಿ ಸಂಘ ಪುರುಷರಕಟ್ಟೆ, ಅಂಗನವಾಡಿ ಕೇಂದ್ರ ಪುರುಷರಕಟ್ಟೆ, ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ದವರು ಸಹಕರಿಸಿದರು.
ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ವಿಟ್ಲ ಯೋಗೀಶ್ವರ ಮಠದ ರಾಜಗುರು ಶ್ರದ್ಧಾನಾಥಾಜಿ ಮಹಾರಾಜ, ಬೆಳ್ತಂಗಡಿ ಬೆಳಾಲ್ ಆರಿಕೋಡಿ ದೇವಸ್ಥಾನದ ಧರ್ಮ ದರ್ಶಿ ಹರೀಶ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಕೆ.ಎಸ್ ಬಲ್ಯಾಯ ಪುರುಷರಕಟ್ಟೆ, ಪ್ರಕಾಶ್ ಶೆಟ್ಟಿಮಜಲು, ಬಿಂದು ಸಂಸ್ಥೆಯ ಆಡಳಿತ ನಿರ್ದೇಶಕ ಸತ್ಯಶಂಕರ ಭಟ್, ಬಿನು ನಾಯರ್ ಕಣ್ಣೂರು, ಅಧ್ಯಕ್ಷರು ಗಣೇಶೋತ್ಸವ ಸಮಿತಿ ರವಿಕುಮಾರ್ ಮಾಯಂಗಲ, ಸ್ಥಾಪಕ ಅಧ್ಯಕ್ಷ ಬಿ.ಕೆ ಶ್ರೀನಿವಾಸ ರಾವ್, ಕಾರ್ಯದರ್ಶಿ ಸಂತೋಷ್ ಎಂ. ಮುಕ್ವೆ, ಖಜಾಂಚಿ ರಾಘವೇಂದ್ರ ನಾಯಕ್, ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಉಮೇಶ್ ಇಂದಿರಾನಗರ, ಪ್ರಧಾನ ಕಾರ್ಯದರ್ಶಿ ಶರತ್ಚಂದ್ರ ಬೈಪಾಡಿತ್ತಾಯ, ಖಜಾಂಚಿ ವಿಶ್ವನಾಥ ಬಲ್ಯಾಯ ಮುಂಡೋಡಿ, ಗೌರವಾಧ್ಯಕ್ಷರಾದ ಬಿನು ನಾಯರ್ ಕಣ್ಣೂರು, ವಸಂತ ಪೂಜಾರಿ ಕಲ್ಲರ್ಪೆ, ವಿಶ್ವನಾಥ ಪುರುಷ ಸುರುಳಿಮಜಲು, ರವೀಂದ್ರ ರೈ ನೆಕ್ಕಿಲು, ಉಪಾಧ್ಯಕ್ಷರಾದ ನವೀನ್ ಪ್ರಭು ಬಜಪ್ಪಳ, ರವಿ ಕೋಡಿಮಜಲು, ಸಂಚಾಲಕರಾದ ಸುಬ್ರಹ್ಮಣ್ಯ ಪೂಜಾರಿ ಪುರುಷರಕಟ್ಟೆ, ಸತೀಶ್ ಜೋಗಿ ಇಂದಿರಾನಗರ, ಬೇಬಿ ಜಾನ್ ಕೂಡರಸ್ತೆ ಸಂಚಾಲಕರು, ಜತೆ ಕಾರ್ಯದರ್ಶಿ ರೋಹಿತ್ ಕೋಟ್ಯಾನ್ ಶಿಬರ, ಸಮಿತಿ ಸದಸ್ಯರು ಸೇರಿದಂತೆ ಸಾವಿರಾರು ಸಹಸ್ರಾರು ಮಂದಿ ಭಾಗವಹಿಸಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ವೈಭವವನ್ನು ಕಣ್ತುಂಬಿಕೊಂಡರು.