ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘವು ಸದಸ್ಯರ ಸಹಕಾರ, ಆಡಳಿತ ಮಂಡಳಿ, ಸಲಹಾ ಸಮಿತಿ, ಸಿಇಒ ಅವರ ಮಾರ್ಗದರ್ಶನದಲ್ಲಿ ಹಾಗು ಸಿಬ್ಬಂದಿಗಳ ಉತ್ತಮ ಸೇವೆಯಿಂದ ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಹೇಳಿದರು.
ಪುತ್ತೂರು ಎಪಿಎಂಸಿ ರಸ್ತೆಯಲ್ಲಿನ ಮಣಾಯಿ ಆರ್ಚ್ನಲ್ಲಿ ಸ್ವಂತ ಕಟ್ಟಡದಲ್ಲಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ಸೆ.2ರಂದು ನಡೆದ ಸಂಘದ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದರು. ಸಿಇಒ ಅವರ ಮಾರ್ಗದರ್ಶನ ಬಹಳ ಉತ್ತಮವಾಗಿದೆ. ಆಡಳಿತ ಮಂಡಳಿ ಮತ್ತು 10 ಶಾಖೆಯಲ್ಲಿರುವ ಸುಮಾರು 120 ಮಂದಿ ಸಲಹಾ ಸಮಿತಿ ಸದಸ್ಯರು ಕೂಡಾ ಈ ಸಂಸ್ಥೆಯ ಪಾಲುದಾರರು. ನಮ್ಮ ಸಂಸ್ಥೆಯ ಸಿಬ್ಬಂದಿಗಳ ಕೆಲಸ ಮೆಚ್ಚಬೇಕು. ಅವರ ಪ್ರಾಮಾಣಿಕತೆಯಿಂದ ನಾವು ಈ ಹಂತಕ್ಕೆ ಮುಟ್ಟಿದ್ದೇವೆ. ಜನವರಿ ಬಂದಾಗ ಸಾಲ ವಸೂಲಾತಿಯ ಗುರಿ ನೀಡುತ್ತೇವೆ. ಹಾಗಾಗಿ ಮಾರ್ಚ್ ಅಂತ್ಯಕ್ಕೆ ಶೇ.99 ರೀಚ್ ಆಗಿಯೇ ಆಗುತ್ತೇವೆ. ನಮ್ಮ ಈ ವ್ಯವಸ್ಥೆಯ ಕುರಿತು ಇತರ ಸಹಕಾರಿ ಸಂಘ ನಮ್ಮಿಂದ ಮಾಹಿತಿ ಕೇಳಿದ್ದೂ ಇದೆ. ಸಂಘದ ಏಳಿಗೆಗಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ, ರಾಜ್ಯ ಮಟ್ಟದಲ್ಲಿ ಶಾಖೆ ತೆರೆಯುವ ಗುರಿ:
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ಮಾತನಾಡಿ, ಸಂಘದ ಸದಸ್ಯರ ಮನಸ್ಸು, ಛಲ ಮತ್ತು ಪ್ರಯತ್ನದಿಂದ ಪುಟ್ಟ ಹೆಜ್ಜೆ ಇಟ್ಟು 2002ರಲ್ಲಿ ಈ ಸಂಸ್ಥೆ ಆರಂಭಗೊಂಡಿತು. ಇವತ್ತು 10 ಶಾಖೆಗಳನ್ನು ಹೊಂದಿ ಹೆಮ್ಮರವಾಗಿ ಬೆಳೆದಿದೆ. ಮುಂದಕ್ಕೆ ಕೂಡಾ ಒಳ್ಳೆಯ ರೀತಿಯಲಿ ಬೆಳೆಯಲು ಎಲ್ಲರ ಸಹಕಾರ ಬೇಕು. ಗ್ರಾಹಕರು ಮತ್ತು ಸಿಬ್ಬಂದಿಗಳ ಹೊಂದಾಣಿಕೆಯಿಂದ ಸಂಘ ಯಶಸ್ವಿಯತ್ತ ಮುನ್ನಡೆಯುತ್ತಿದೆ. ಹಾಗಾಗಿ ಸತತವಾಗಿ ಪ್ರಶಸ್ತಿಯೂ ಲಭಿಸುತ್ತಿದೆ. ಮುಂದಿನ ದಿನ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಶಾಖೆಗಳನ್ನು ತೆರಯುವ ಗುರಿಯೂ ಇದೆ ಎಂದರು.
ಕಚೇರಿಯ ಮೀಟಿಂಗ್ ಹಾಲ್ನಲ್ಲಿ ದೀಪ ಪ್ರಜ್ವಲಿಸಿ ಸಂಸ್ಥಾಪಕರ ದಿನವನ್ನು ಆಚರಿಸಲಾಯಿತು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಜಿನ್ನಪ್ಪ ಗೌಡ ಮಳವೇಲು, ರಾಮಕೃಷ್ಣ ಗೌಡ ಕರ್ಮಲ, ನಾರಾಯಣ ಗೌಡ ಪಾದೆ, ಸಂಘದ ಲೆಕ್ಕಪರಿಶೋದನಾಧಿಕಾರಿ ಶ್ರೀಧರ್ ಗೌಡ ಕಣಜಾಲು, ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ತೆಂಕಿಲ, ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಸಲಹಾ ಸಮಿತಿ ಸದಸ್ಯೆ ಗೌರಿ ಬನ್ನೂರು, ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಆಡಳಿತ ಮಂಡಳಿ ಅಧ್ಯಕ್ಷ ಕಳುವಾಜೆ ವೆಂಟಕಟರಮಣ ಗೌಡ, ಸಂಸ್ಥೆಯ ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಒಕ್ಕಲಿ ಗೌಡ ಸೇವಾ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಸುರೇಶ್ ಗೌಡ, ಸೀತಾರಾಮ ಪೆರಿಯತ್ತೋಡಿ, ಉಪಸ್ಥಿತರಿದ್ದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಸ್ವಾಗತಿಸಿ, ಪುತ್ತೂರು ಎಪಿಎಂಸಿ ಶಾಖಾ ಪ್ರಬಂಧಕ ವಿನೋದ್ ವಂದಿಸಿದರು. ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆರಂಭಗೊಂಡ ಪ್ರಥಮ ಶಾಖೆಯಲ್ಲಿ ದೀಪ ಪ್ರಜ್ವಲನೆ:
ಮಹಾಲಿಂಗೇಶ್ವರ ದೇವಸ್ಥಾನ ಸಭಾಭವನ ಕಟ್ಟಡದಲ್ಲಿ 2002ರಲ್ಲಿ ಆರಂಭಗೊಂಡ ಶಾಖೆಯ ಕಚೇರಿಯಲ್ಲಿ ಬೆಳಿಗ್ಗೆ ಪ್ರಥಮವಾಗಿ ದೀಪ ಬೆಳಗಿಸಲಾಯಿತು. ಈ ಸಂದರ್ಭ ಅಲ್ಲಿನ ಪ್ರಭಾರ ಶಾಖಾ ಪ್ರಬಂಧಕಿ ನಿಶ್ಚಿತಾ ಯು.ಡಿ ಕಾರ್ಯಕ್ರಮ ನಿರ್ವಹಿಸಿದರು.