ನರೇಂದ್ರ ಪ.ಪೂ.ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಉತ್ಸವ ಬಿಝ್‌ಬ್ಲೂಮ್ ಫೆಸ್ಟ್ 2025- ಸಮಾರೋಪ ಸಮಾರಂಭ

0

ಪುತ್ತೂರು: ಶಿಕ್ಷಣ, ಕ್ರೀಡೆ, ಚಿತ್ರಕಲೆ, ಸಂಗೀತ, ನಾಟಕ, ಹೀಗೆ ಪ್ರತೀ ಕ್ಷೇತ್ರದ ಚಟುವಟಿಕೆಗಳಲ್ಲಿಯೂ ನಿತ್ಯಭಾಗಿಯಾಗುವ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತಾ ಸಾಗಬೇಕು. ಆಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ. ಎಲ್ಲರೂ ದಿನನಿತ್ಯ ಒಂದೊಂದು ಗುಣಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಆಲೋಚನೆಗಳಿಂದ ಜೀವನದ ಯಾವುದೇ ಸವಾಲನ್ನು ಧೈರ್ಯವಾಗಿ ಎದುರಿಸಬಹುದು.ಜೀವನದಲ್ಲಿ ಎದುರಾಗುವ ಸವಾಲನ್ನು ಎದುರಿಸಿ ಸೋಲಲ್ಲೂ ಗೆಲುವನ್ನು ಕಾಣುವ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು.ಎಂದು ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ ಇದರ ಕಾರ‍್ಯದರ್ಶಿಗಳಾದ ಚಂದ್ರಹಾಸ ಮುರೂರು ಇವರು ಹೇಳಿದರು.


ಕಾರ‍್ಯಕ್ರಮದಲ್ಲಿ ಇನ್ನೋರ್ವ ಮುಖ್ಯಅತಿಥಿಯಾದ ಖ್ಯಾತ ಕನ್ನಡ ಯೂಟ್ಯೂಬರ್ ಮತ್ತು ಚಲನಚಿತ್ರ ನಟ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ಧನ್‌ರಾಜ್ ಆಚಾರ್ ಇವರು ಮಾತನಾಡುತ್ತ, ಈ ಕಾರ‍್ಯಕ್ರಮವು ಕೇವಲ ಪ್ರತಿಭೆಯ ಪ್ರದರ್ಶನ ಮಾತ್ರವಲ್ಲದೆ ಬದಲಾಗಿ ವಿದ್ಯಾರ್ಥಿಗಳು ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಲು, ತಮ್ಮ ಉತ್ಸಾಹಗಳನ್ನು ಕಂಡುಕೊಳ್ಳಲು ಮತ್ತು ಮರೆಯಲಾಗದ ನೆನಪುಗಳನ್ನು ರೂಪಿಸಿಕೊಳ್ಳಲು ಒಂದು ವೇದಿಕೆಯಾಗಿದೆ. ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಅಪರಿಮಿತ ಸಾಧ್ಯತೆಗಳನ್ನು ಅರಿತುಕೊಳ್ಳಲು ಅವಕಾಶವನ್ನು ನೀಡುತ್ತದೆ.ವಿದ್ಯಾರ್ಥಿಗಳು ಪಾಠದ ಜೊತೆಗೆ ಇತರ ಚಟುವಟಿಕೆ ಗಳಲ್ಲಿಯೂ ಭಾಗವಹಿಸಿ ತಮ್ಮ ಕಲಾ ಪ್ರೌಢಿಮೆಯನ್ನು ಅನಾವರಣಗೊಳಿಸಬೇಕು.ವಿದ್ಯಾರ್ಥಿಗಳು ಆರೋಗ್ಯಪೂರ್ಣ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನದ ಪರಿಪೂರ್ಣತೆಯ ಕಡೆಗೆ ಸಾಗಬೇಕು ಎಂದು ಹೇಳಿದರು.


ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯರವರು ಮಾತನಾಡುತ್ತಾ ಪ್ರತೀ ವ್ಯಕ್ತಿಯು ತನ್ನಲ್ಲಿರುವ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಬೇಕಾಗುತ್ತದೆ.ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಪೂರಕವಾದ ವೇದಿಕೆ ಇಂತಹ ಕಾರ‍್ಯಕ್ರಮಗಳಿಂದ ದೊರೆಯುತ್ತದೆ.ಪಠ್ಯ ಚಟುವಟಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗುವುದರಿಂದ ಅವರ ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.


ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಪ್ರತೀ ವರ್ಷವು ಇಂತಹ ಅವಕಾಶ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗಲಿ ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಪ್ರತೀ ಸ್ಪರ್ಧೆಯ ವಿಜೇತರಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು. ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ತಂಡ ಪ್ರಥಮ ಸ್ಥಾನ ಪಡೆದು ವಿನ್ನರ್ ಮತ್ತು ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತಂಡ ದ್ವಿತೀಯ ಸ್ಥಾನ ಪಡೆದು ರನ್ನರ್ ಅಪ್ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.ಬಹುಮಾನ ವಿಜೇತರ ವಿವರಗಳನ್ನು ಉಪನ್ಯಾಸಕರಾದ ಶ್ರೀಮತಿ ಸೌಮ್ಯ ಇವರು ವಾಚಿಸಿದರು.


ವಿದ್ಯಾರ್ಥಿಗಳ ನೈಜ ಜಗತ್ತಿನ ಕೌಶಲ್ಯ ಮತ್ತು ಜ್ಞಾನವನ್ನು ಸಂಯೋಜಿಸುವ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಿದ ಈ ಕಾರ‍್ಯಕ್ರಮದಲ್ಲಿ ಒಟ್ಟು ೧೪ ವಿವಿಧ ಮಾದರಿಯ ಸ್ಪರ್ಧೆಗಳಲ್ಲಿ ವಿವಿಧ ಶಾಲೆಗಳ ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.


ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಸಂತೋಷ ಬಿ., ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ದೀಪಾ ನಾಯಕ್, ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್, ವ್ಯವಹಾರ್ ಕ್ಲಬ್ ನ ಅಧ್ಯಕ್ಷರಾದ ದ್ವಿತೀಯ ವಾಣಿಜ್ಯ ವಿಭಾಗದ ಮುಕುಂದ ಶ್ಯಾಮ ಮುಳಿಯ, ಕಾರ‍್ಯದರ್ಶಿಯಾದ ಪುನೀತ್ ಉಪಸ್ಥಿತರಿದ್ದರು.


ಕಾರ‍್ಯಕ್ರಮದಲ್ಲಿ ಉಪನ್ಯಾಸಕರಾದ ರೇಖಾ ಸ್ವಾಗತಿಸಿ,ವಂದಿಸಿದರು. ಕಾರ‍್ಯಕ್ರಮವನ್ನು ಉಪನ್ಯಾಸಕರಾದ ಸಾಯಿಗೀತ ನಿರೂಪಿಸಿದರು.

LEAVE A REPLY

Please enter your comment!
Please enter your name here