ಶ್ರೀ ಧರ್ಮಸ್ಥಳ ಕ್ಷೇತ್ರದ ಅಭಿಮಾನಿಗಳ ವೇದಿಕೆಯಿಂದ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ
ಪುತ್ತೂರು: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಪಾವಿತ್ರ್ಯತೆಗೆ ಕಳಂಕ ತರುತ್ತಿರುವ ಬಗ್ಗೆ ಮತ್ತು ಇದರ ಒಳಸಂಚಿನ ವಿರುದ್ಧ ಸೂಕ್ತ ತನಿಖೆಯನ್ನು ಕೈಗೊಳ್ಳಬೇಕೆಂದು ಪುತ್ತೂರಿನಲ್ಲಿ ನಡೆದ ಜನಾಗೃಹ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸೆ.2ರಂದು ಪುತ್ತೂರು ಉಪತಹಸೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.
ಧರ್ಮಸಂರಕ್ಷಣಾ ವೇದಿಕೆ ಪುತ್ತೂರು ತಾಲೂಕಿನ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರ ನಿಯೋಗದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭೆ ಸದಸ್ಯ ಕೆ.ಜೀವಂಧರ್ ಜೈನ್, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಲೋಕೇಶ್ ಹೆಗ್ಡೆ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಡಾ. ನಾರಾಯಣ ಭಟ್, ವಿರೂಪಾಕ್ಷ ಭಟ್ ಮಚ್ಚಿಮಲೆ, ಉದಯ ಹೆಚ್, ಯುವರಾಜ್ ಪೆರಿಯತ್ತೋಡಿ ಅವರು ಉಪತಹಶೀಲ್ದಾರ್ ರವಿ ಅವರಿಗೆ ಮನವಿಯನ್ನು ಹಸ್ತಾಂತರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯು ಹಿಂದೂ ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುತ್ತದೆ.ಜಾತಿ ಧರ್ಮ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಪುಣ್ಯಕ್ಷೇತ್ರವಾಗಿರುತ್ತದೆ. ಇದು ಸರಿಸುಮಾರು ಎಂಟುನೂರು ವರ್ಷಗಳ ಗತವೈಭವ ಮತ್ತು ಇತಿಹಾಸ ಹೊಂದಿದ ಪುಣ್ಯಕ್ಷೇತ್ರ. ಈಗಿನ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದ 21ನೇ ಧರ್ಮಾಧಿಕಾರಿಗಳಾಗಿರುತ್ತಾರೆ. ಡಾ|ಡಿ. ವೀರೇಂದ್ರ ಹೆಗ್ಗಡೆಯವರನ್ನು ನಾವು ಮಾತನಾಡುವ ಮಂಜುನಾಥ ಎಂದು ಕರೆಯಲ್ಪಡುತ್ತೇವೆ.ನಮ್ಮ ತಲೆತಲಾಂತರಗಳಿಂದ ಭಕ್ತಿ ಮತ್ತು ಸೇವೆಯನ್ನು ಶ್ರೀ ಮಂಜುನಾಥ ಸ್ವಾಮಿಗೆ ಹಾಗೂ ಧರ್ಮಾಧಿಕಾರಿ ಪೀಠಕ್ಕೆ ಸಲ್ಲಿಸುತ್ತಾ ಬಂದಿರುತ್ತೇವೆ. ಅಲ್ಲದೆ ಈ ಕ್ಷೇತ್ರದಲ್ಲಿ ಧರ್ಮಾಧಿಕಾರಿಗಳ ಆಶಯದಂತೆ ಚತುರ್ವಿಧ ದಾನಗಳು ದಿನನಿತ್ಯ ನಡೆಯುತ್ತಿರುತ್ತದೆ. ಇಂತಹ ಪುಣ್ಯಕ್ಷೇತ್ರದ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸೋಮನಾಥ ನಾಯಕ್, ಯೂಟ್ಯೂಬರ್ ಸಮೀರ್ ಎಂ ಡಿ. ಜಯಂತ್ ಟಿ. ಅಜಯ ಅಂಚಿನ್ ಇವರುಗಳು ಮಂಜುನಾಥ ಸ್ವಾಮಿ ದೇವಾಲಯ ಮತ್ತು ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಇವರಿಗೆ ಕಳಂಕ ತರುವಂತಹ ಕಟ್ಟುಕಥೆಗಳನ್ನು ಕಟ್ಟಿ ಕೃತಕ ತಂತ್ರಜ್ಞಾನಗಳನ್ನು ಬಳಸಿ ಆಡಿಯೋ / ವಿಡಿಯೋಗಳನ್ನು ಮಾಡಿ ಇದನ್ನು ಸಾಮಾಜಿಕ/ ಸಮೂಹ ಮಾಧ್ಯಮದಲ್ಲಿ ಹರಿಬಿಡುತ್ತಿದ್ದಾರೆ. ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ 12 ವರ್ಷಗಳಿಗೆ ಮೇಲ್ಪಟ್ಟು ಅಪಪ್ರಚಾರವನ್ನು ಮಾಡುತ್ತಿದ್ದು ಇದು ನಮ್ಮಂತಹ ಭಕ್ತಾಭಿಮಾನಿಗಳ ಭಾವನೆಗಳಿಗೆ ತುಂಬಾ ನೋವನ್ನು ಉಂಟು ಮಾಡಿರುತ್ತದೆ. ಅಲ್ಲದೆ, ಕೆಲವೊಂದು ದ್ವಂದ್ವ ಮನಸುಳ್ಳ ವ್ಯಕ್ತಿಗಳಿಗೆ ಈ ಅಪಪ್ರಚಾರದ ವಿಷ ಬೀಜವನ್ನು ಬಿತ್ತಿ ಸಮಾಜದಲ್ಲಿ ಉದ್ವಿಗ್ನತೆ ಮತ್ತು ಶಾಂತಿಯನ್ನು ಕದಡುವ ಹುನ್ನಾರವನ್ನು ಮಾಡುತ್ತಿದ್ದಾರೆ. ಈಗಾಗಲೆ ನಮಗೆ ತಿಳಿದಂತೆ ಉಚ್ಛ ನ್ಯಾಯಾಲಯವು ಕ್ಷೇತ್ರದ ಮೇಲೆ ಹಾಗೂ ಹೆಗ್ಗಡೆಯವರ ಮತ್ತು ಅವರ ಕುಟುಂಬದ ವಿರುದ್ಧ ಅಪಪ್ರಚಾರ ಮಾಡಬಾರದೆಂದು ಆದೇಶ ಮಾಡಿದ್ದರೂ ಸಹ ಇವರುಗಳು ಘನ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಆಪಪ್ರಚಾರವನ್ನು ಸಮೂಹ ಮಾಧ್ಯಮಗಳಲ್ಲಿ ಬಿತ್ತರಿಸಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಕರ್ನಾಟಕ ಸರಕಾರವು ಕೂಡಲೆ ಇವರ ಮೇಲೆ ಕಾನೂನು ಉಲ್ಲಂಘನೆ ಮಾಡಿರುವುದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹ ಮಾಡಿಕೊಳ್ಳುತ್ತಿದ್ದೇವೆ.
ಮುಸುಕುಧಾರಿ ವ್ಯಕ್ತಿಯು ನೀಡಿದ ದೂರಿನ ಆಧಾರದಲ್ಲಿ ಮಾನ್ಯ ರಾಜ್ಯ ಸರಕಾರವು ವಿಶೇಷ ತನಿಖಾ ತಂಡದ ಮೂಲಕ ಬೇರೆ ಬೇರೆ ವಿಧಾನದಲ್ಲಿ ತನಿಖೆ ನಡೆಸುತ್ತಿರುವುದನ್ನು ಕ್ಷೇತ್ರದ ಅಭಿಮಾನಿಗಳು ಮತ್ತು ಭಕ್ತರಾದ ನಾವೆಲ್ಲರೂ ಸ್ವಾಗತಿಸುತ್ತೇವೆ. ಆದರೆ, ಈ ತನಿಖೆಯು ಸಮಗ್ರವಾಗಿ ನಿಗದಿತ ಸಮಯದಲ್ಲಿ ಕೊನೆಗೊಳ್ಳಬೇಕಾದಲ್ಲಿ ಅನಾಮಿಕ ದೂರುದಾರರ ಮತ್ತು ಆತನ ಹಿಂದೆ ಇರುವ ಇತರ ವ್ಯಕ್ತಿಗಳಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಯೂಟ್ಯೂಬರ್ ಸಮೀರ್ ಎಂಡಿ. ಜಯಂತ್ ಟಿ, ಸೋಮನಾಥ ನಾಯಕ್, ಅಜಯ್ ಅಂಚನ್ ಇವರ ಹಿನ್ನೆಲೆ ಇವರಿಗೆ ಯಾರಿಂದ ಧನ ಸಹಾಯವಾಗುತ್ತಿದೆ ಮತ್ತು ಯಾರು ಇವರಿಗೆ ಪ್ರಚೋದನೆ ಮಾಡುತ್ತಿದ್ದಾರೆ ಎಂಬುದನ್ನು ಮತ್ತು ಸದ್ರಿಯವರ ಬ್ಯಾಂಕ್ ಖಾತೆಗಳನ್ನೂ ಸಹ ತನಿಖೆಗೊಳಪಡಿಸಬೇಕು. ಇಂತಹ ಪುಣ್ಯ ಕ್ಷೇತ್ರವನ್ನು ನಂಬಿಕೊಂಡಿರುವ ಮತ್ತು ಕ್ಷೇತ್ರದ ಅಭಿಮಾನಿಗಳಾದ ನಾವೆಲ್ಲರೂ ಈ ಮೂಲಕ ವಿನಂತಿಸುವುದೇನೆಂದರೆ ಸಮಾಜದಲ್ಲಿ ಸಾಮೂಹಿಕ ಮಾಧ್ಯಮಗಳ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಮತ್ತು ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಕೂಡಲೆ ಕ್ರಮ ಜರುಗಿಸಬೇಕು ಮತ್ತು ಮುಂದೆಯೂ ಇಂತಹ ಅಪಪ್ರಚಾರಗಳು ಬಿತ್ತರಿಸದಂತೆ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.