ಪುತ್ತೂರು: ಪುತ್ತೂರು ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ 7 ದಿನ ಪೂಜಿಸಲ್ಪಟ್ಟ 68ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದ ವೈಭವದ ಶೋಭಾಯಾತ್ರೆಯು ಸೆ.2ರಂದು ರಾತ್ರಿ ನಡೆಯಿತು. ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಅವರ ನೇತೃತ್ವದಲ್ಲಿ 7 ದಿನದ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದಿದೆ.

ಶ್ರೀ ಮಹಾಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ಪುರೋಹಿತ ಸುಬ್ರಹ್ಮಣ್ಯ ಹೊಳ್ಳ ವಹಿಸಿದ್ದರು. ಸೆ.2ರಂದು ಬೆಳಿಗ್ಗೆ 108 ಕಾಯಿ ಗಣಪತಿ ಹೋಮ, ಮಧ್ಯಾಹ್ನ ದೇವರ ಬಲಿ ಉತ್ಸವ ನಡೆಯಿತು. ಬಳಿಕ ಯಕ್ಷ ನಂದನ ಕಲಾ ಸಂಘ, ಗೋಕುಲ ಕೊಯಿಲ ಇಲ್ಲಿನ ಮಕ್ಕಳ ಮೇಳದಿಂದ ಯಕ್ಷಗಾನ ಪ್ರದರ್ಶನಗೊಂಡಿತು. ಮಧ್ಯಾಹ್ನ ಶರಣ್ಯ ರೈ ಮತ್ತು ಶ್ರಾವಣ್ಯ ರೈ ಅವರಿಂದ ಭರತನಾಟ್ಯ ಪ್ರದರ್ಶನ, ಬಳಿಕ ಬಾರಿಸು ಕನ್ನಡ ಡಿಂಡಿಮವದಿಂದ ಸಾಂಸ್ಕೃತಿಕ ವೈಭವ ನಡೆಯಿತು. ಸಂಜೆ ನೆಲ್ಲಿಕಟ್ಟೆ ಮಿತ್ರ ಮಂಡಳಿಯಿಂದ ಶ್ರೀ ಗಣೇಶನ ಹಂಸರಥಕ್ಕೆ ಹೂವಿನ ಅಲಂಕಾರಕ್ಕೆ ಹೂವಿನ ಮಾಲೆಯನ್ನು ಮೆರವಣಿಗೆ ಮೂಲಕ ತಂದು ಸಮರ್ಪಣೆ ಮಾಡುವ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಉತ್ಸವ ಸರ್ವವಾದ್ಯಗಳೊಂದಿಗೆ ನಡೆದ ಬಳಿಕ ದರ್ಶನ ಬಲಿ ಉತ್ಸವ ನಡೆಯಿತು. ಹಂಸರೂಢ ರಥದಲ್ಲಿ ವಿರಾಜಮಾನರಾಗಿರುವ ಮಹಾಗಣಪತಿಗೆ ಉತ್ಸವ ಮೂರ್ತಿಯನ್ನು ಹೊತ್ತ ಬ್ರಹ್ಮವಾಹಕರು ಪ್ರದಕ್ಷೀಣೆಯೊಂದಿಗೆ ಹೆಜ್ಜೆ ಹಾಕುತ್ತಾ ದರ್ಶನ ಬಲಿ ನೆರವೇರಿಸಿದರು. ಅನಂತ ಬಳ್ಳಕುರಾಯ ಅವರು ಬ್ರಹ್ಮವಾಹಕರಾಗಿದ್ದರು. ರಾತ್ರಿ 9.10ರ ಸುಮಾರಿಗೆ ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಗಳ ಕೋಲ ನಡೆಯಿತು. ಆ ಬಳಿಕ ಮಹಾಗಣಪತಿಯ ವೈಭವದ ಶೋಭಾಯಾತ್ರೆ ರಾತ್ರಿ ಗಂಟೆ 10.55ರ ಸುಮಾರಿಗೆ ಮೈದಾನದಿಂದ ಹೊರಟಿತು. ಶಶಾಂಕ್ ನೆಲ್ಲಿತ್ತಾಯ ಅವರು ದೈವಗಳ ಮಧ್ಯಸ್ಥರಾಗಿದ್ದರು. ಶೋಭಾಯಾತ್ರೆಗೆ ಮೊದಲು ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ತಂಡಗಳ ಪ್ರದರ್ಶನ
ಶೋಭಾಯಾತ್ರೆಯಲ್ಲಿ ಭಾಗವಹಿಸುವ ಚೆಂಡೆ, ಸರ್ವವಾದ್ಯ, ನೃತ್ಯಗಳು, ನೃತ್ಯ ಭಜನೆ, ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗದ ಕುಣಿತಗಳು ಶೋಭಾಯಾತ್ರೆ ಆರಂಭದ ಮೊದಲು ನೆಲ್ಲಿಕಟ್ಟೆ ದಿ.ಸುಧಾಕರ್ ಶೆಟ್ಟಿ ವೇದಿಕೆಯಲ್ಲಿ ಪ್ರದರ್ಶನ ನೀಡಲಾಯಿತು. ತಾಲೀಮು ಮತ್ತು ನಾಸಿಕ್ ಬ್ಯಾಂಡ್ ಪ್ರದರ್ಶನ ಮೈದಾನದಲ್ಲಿ ನಡೆಯಿತು.
ಮಹಾ ಅನ್ನಸಂತರ್ಪಣೆ
ಕಳೆದ 7 ದಿನಗಳಿಂದ ಕಿಲ್ಲೆ ಮೈದಾನದಲ್ಲಿ ನಡೆದ ಗಣೇಶೋತ್ಸವದಲ್ಲಿ ಲಕ್ಷಾಂತರ ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಶ್ರೀ ದೇವತಾ ಸಮಿತಿಯ ನೇತೃತ್ವದಲ್ಲಿ ತುಳಸಿ ಕೆಟರರ್ಸ್ನ ಹರೀಶ್ ರಾವ್ ಅವರ ತಂಡ ನಳಪಾಕದ ಸವಿ ಉಣಬಡಿಸಿತು. ಅನ್ನಸಂತರ್ಪಣೆಯಲ್ಲಿ ಪ್ರತಿದಿನವೂ ವೈವಿಧ್ಯಮಯ ಪದಾರ್ಥ ಹಾಗೂ ಪಾಯಸವನ್ನು ಭಕ್ತರಿಗೆ ಉಣಬಡಿಸಲಾಯಿತು. ಅನ್ನಸಂತರ್ಪಣೆಗೆ ಪ್ರತ್ಯೇಕ ಸುಸಜ್ಜಿತ ವ್ಯವಸ್ಥೆಯನ್ನು ಮಾಡಿದ್ದು, ಒಟ್ಟು ವ್ಯವಸ್ಥೆ ಅಚ್ಚುಕಟ್ಟಾಗಿ ಮೂಡಿಬಂದಿತು. ಮಧ್ಯಾಹ್ನ ಆರಂಭಗೊಂಡರೆ ರಾತ್ರಿ ಎಷ್ಟು ಹೊತ್ತಾದರೂ ಬಂದ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯುತ್ತಿತ್ತು.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
7 ದಿನದ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು. ಭಜನೆ, ಸ್ಯಾಕ್ಸೋ-ನ್ ವಾದನ, ಸಂಗೀತ ಕಛೇರಿ, ನೃತ್ಯ ವೈವಿಧ್ಯ, ಯಕ್ಷಗಾನ, ನಾಟಕ, ಗೊಂಬೆ ಕುಣಿತ ಮೊದಲಾದ ಕಾರ್ಯಕ್ರಮಗಳಿಗೆ ವೇದಿಕೆ ಸಾಕ್ಷಿಯಾಯಿತು.
ಬೃಹತ್ ಮಾಲೆ
ನೆಲ್ಲಿಕಟ್ಟೆ ಮಿತ್ರವೃಂದದಿಂದ ಕಿಲ್ಲೆ ಗಣಪನಿಗೆ ಬೃಹತ್ ಮಾಲೆಯನ್ನು ಅರ್ಪಿಸಲಾಯಿತು. ಸೆ.೨ರ ಸಂಜೆ ನೆಲ್ಲಿಕಟ್ಟೆಯಿಂದ ಮೆರವಣಿಗೆ ಮೂಲಕ ಕಿಲ್ಲೆ ಮೈದಾನಕ್ಕೆ ಬೃಹತ್ ಮಾಲೆಯನ್ನು ತಂದು ಮಹಾಗಣಪತಿಗೆ ಅರ್ಪಿಸಲಾಯಿತು.
ಶೋಭಾಯಾತ್ರೆ
ಕಿಲ್ಲೆ ಶ್ರೀ ಮಹಾಗಣಪತಿಯ ಶೋಭಾಯಾತ್ರೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ದೊಡ್ಡ ಭಾವಚಿತ್ರ ಹೊತ್ತ ವಾಹನ, ತಾಲೀಮು ಪ್ರದರ್ಶನ, ಗೊಂಬೆ ಕುಣಿತದ ಜೊತೆಗೆ ಚೆಂಡೆ ಸದ್ದು ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿತು. ಗಣಪತಿ ಮೂರ್ತಿಯ ಜೊತೆಗೆ ದೈವಗಳು ಸಾಗುತ್ತಿದ್ದರೆ, ಸ್ಯಾಕ್ಸೋಫೋನ್ ಹಾಗೂ ತಾಸೆ ಸದ್ದು ಧಾರ್ಮಿಕ ಟಚ್ ನೀಡಿತು.