ಕ್ರೀಡೆಯಿಂದ ನಾಯಕತ್ವ, ಸಮನ್ವಯತೆ, ಶಿಸ್ತು, ಬಾಂಧವ್ಯ ವೃದ್ಧಿ–ಸುಕುಮಾರ್ ಜೈನ್
ಪುತ್ತೂರು: ಕೇವಲ ಅಂಕದಿಂದ ವ್ಯಕ್ತಿಯ ಕೌಶಲ್ಯ, ವಿಶೇಷ ಜ್ಞಾನ ನಿರ್ಧಾರವಾಗದು. ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಕೌಶಲ್ಯ, ವಿಶೇಷ ಜ್ಞಾನದ ಜೊತೆಗೆ ನಾಯಕತ್ವಗುಣ, ಸಮನ್ವಯತೆ, ಅನ್ನೋನ್ಯಭಾವ, ಹಂಚಿಕೆಯ ಸ್ವಭಾವ, ಶಿಸ್ತು, ಬಾಂಧವ್ಯ ವೃದ್ಧಿಯಾಗಬಲ್ಲುದು ಎಂದು ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕುಮಾರ್ ಜೈನ್ ರವರು ಹೇಳಿದರು.

ಸೆ.2 ರಂದು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ದ.ಕ, ಮಂಗಳೂರು ಹಾಗೂ ಅಕ್ಷಯ ಪದವಿ ಪೂರ್ವ ಕಾಲೇಜು ಸಂಪ್ಯ ಇದರ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಹಾಗೂ ಕಮ್ಮಾಡಿ ಕ್ರೀಡಾಂಗಣದಲ್ಲಿ ತ್ರೋಬಾಲ್ ಅನ್ನು ಅನಾವರಣಗೊಳಿಸಿ ಮಾತನಾಡಿದರು.
ಪಿಯುಸಿ ಬಳಿಕ ವಿದ್ಯಾರ್ಥಿಗಳಿಗೆ ಉದ್ಯೋಗ ಗಿಟ್ಟಿಸಲು ವೃತ್ತಿಪರ ಕೋರ್ಸ್-ಜಯಂತ್ ನಡುಬೈಲು:
ಅಧ್ಯಕ್ಷತೆ ವಹಿಸಿದ ಸಂಪ್ಯ ಅಕ್ಷಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಪದವಿ ಪೂರ್ವ ಶಿಕ್ಷಣವನ್ನು ಆರಂಭಿಸಿದ ಪ್ರಥಮ ವರ್ಷದಲ್ಲೇ ತಾಲೂಕು ಮಟ್ಟದ ತ್ರೋಬಾಲ್ ಅನ್ನು ಪ್ರಾಯೋಜಿಸಿ ಕ್ರೀಡಾ ಸ್ಪರ್ಧಿಗಳಿಗೆ ಉತ್ತೇಜನ ನೀಡುವ ಕೆಲಸವು ಅಕ್ಷಯ ಸಂಸ್ಥೆ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸಂಸ್ಥೆಯು ವೇದಿಕೆ ಕಲ್ಪಿಸುತ್ತಿದೆ. ಸೋಲು, ಗೆಲುವಿನ ಪ್ರಶ್ನೆ ಅಲ್ಲ, ಸೋಲನ್ನು ಗೆಲುವಿನ ಮೆಟ್ಟಿಲುಗಳಾಗಿಸುವ ಛಲ ಹಾಗೂ ಗುರಿಯನ್ನು ಬೆಳೆಸಿಕೊಳ್ಳಿ ಎಂದ ಅವರು ಪಿಯುಸಿ ಬಳಿಕ ವಿದ್ಯಾರ್ಥಿಗಳಿಗೆ ಉದ್ಯೋಗ ಗಿಟ್ಟಿಸಲು ವೃತ್ತಿಪರ ಕೋರ್ಸ್ ಗಳನ್ನು ಅಕ್ಷಯ ಸಂಸ್ಥೆ ಆರಂಭಿಸಿದೆ ಎಂದು ಅವರು ಹೇಳಿದರು.
ಪ.ಪೂ ಮಟ್ಟದ ಕ್ರೀಡಾ ವಿಭಾಗದಲ್ಲಿ ಸೆಲೆಕ್ಷನ್ ಪ್ರಕ್ರಿಯೆಯಿದೆ-ಪ್ರೇಮನಾಥ ಶೆಟ್ಟಿ:
ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಕ್ರೀಡಾ ಸಂಯೋಜಕರಾದ ಪ್ರೇಮನಾಥ್ ಶೆಟ್ಟಿ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಪುತ್ತೂರಿಗೆ ಅದರದೇ ಆದ ಇತಿಹಾಸವಿದೆ. ಪುತ್ತೂರಿನ ಕ್ರೀಡಾ ಶಿಲ್ಪಿ ಮೇಜರ್ ವೆಂಜಟ್ರಾಮಯ್ಯರವರ ಗರಡಿಯಲ್ಲಿ ವಿವಿಧ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಗೂ ತರಬೇತುದಾರರು ದೇಶದ ಮೂಲೆ ಮೂಲೆಗಳಲ್ಲಿ ಕಾಣ ಸಿಗುತ್ತಾರೆ. ಪದವಿ ಪೂರ್ವ ಮಟ್ಟದ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ಕ್ರೀಡಾ ಪ್ರತಿಭೆಗಳಿಗೆ ಸೆಲೆಕ್ಷನ್ ಪ್ರಕ್ರಿಯೆ ಇದೆ. ಶಾಲೆಯಲ್ಲಿಯೇ ಶಿಸ್ತು ಕಲಿತಾಗ ಜೀವನದಲ್ಲಿ ಶಿಸ್ತು ಮೈಗೂಡಿಸುತ್ತದೆ ಎಂದರು.
ಸರಕಾರದ ಉದ್ಯೋಗ ಗಿಟ್ಟಿಸಬೇಕಾದರೆ ಕ್ರೀಡೆಯಲ್ಲಿ ಕೌಶಲ್ಯವನ್ನು ಪ್ರದರ್ಶಿಸಿ-ಸಂಪತ್ ಪಕ್ಕಳ:
ಅಕ್ಷಯ ಕಾಲೇಜು ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ ಮಾತನಾಡಿ, 2019ರಲ್ಲಿ ಅಕ್ಷಯ ಕಾಲೇಜಿನಲ್ಲಿ ಪಿಯುಸಿ ಫ್ಯಾಷನ್ ಡಿಸೈನ್ ಕೋರ್ಸ್ ಪರಿಚಯ ಮಾಡಿದ್ದು ಪ್ರಸ್ತುತ ಆರು ವೃತ್ತಿಪರ ಪದವಿ ಕೋರ್ಸ್ ಗಳಿವೆ. ಬಿಕಾಂ ವಿಭಾಗದಲ್ಲಿ ಏವಿಯೇಷನ್ ಕೋರ್ಸ್ ಅನ್ನು ಪ್ರಥಮವಾಗಿ ಪರಿಚಯಿಸಿದ ಹೆಮ್ಮೆ ಸಂಸ್ಥೆಯದ್ದು. ಸರಕಾರದ ಉದ್ಯೋಗ ಗಿಟ್ಟಿಸಬೇಕಾದರೆ ಕ್ರೀಡೆಯಲ್ಲಿ ಕೌಶಲ್ಯವನ್ನು ಪ್ರದರ್ಶಿಸಬೇಕು. ಶೈಕ್ಷಣಿಕ, ಕ್ರೀಡಾಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಕ್ಷಯ ಕಾಲೇಜು ಉತ್ತಮ ಸಾಧನೆ ಮಾಡಿದೆ ಎಂದರು.
ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ತಾಲೂಕು ಕ್ರೀಡಾ ಸಂಯೋಜಕರಾದ ಡಾ.ಜ್ಯೋತಿ, ರಾಜೇಶ್ ಮೂಲ್ಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕ್ಷಯ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಎಸ್. ಸ್ವಾಗತಿಸಿ, ಉಪನ್ಯಾಸಕಿ ದೀಪಶ್ರೀ ವಂದಿಸಿದರು. ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕರಾದ ರಕ್ಷಣ್ ಟಿ.ಆರ್, ರಶ್ಮಿ, ರಾಕೇಶ್ ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಉಪನ್ಯಾಸಕಿ ಕೀರ್ತಿಕಾ ಎಂ.ರವರು ಉದ್ಘಾಟಕರ ಪರಿಚಯ ಮಾಡಿದರು. ಉಪನ್ಯಾಸಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.
ಬಾಲಕರ ವಿಭಾಗ: ಇಂದ್ರಪ್ರಸ್ಥ ವಿನ್ನರ್ಸ್, ವಿವೇಕಾನಂದ ರನ್ನರ್ಸ್
ಬಾಲಕಿಯರ ವಿಭಾಗ: ವಿವೇಕಾನಂದ ವಿನ್ನರ್ಸ್, ಇಂದ್ರಪ್ರಸ್ಥ ರನ್ನರ್ಸ್ ಪಂದ್ಯಾಕೂಟದಲ್ಲಿ ಬಾಲಕರ ವಿಭಾಗದಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜು ವಿನ್ನರ್ಸ್ ಆಗಿ, ವಿವೇಕಾನಂದ ಪದವಿ ಪೂರ್ವ ಕಾಲೇಜು ರನ್ನರ್ಸ್ ಆಗಿ ಹೊರ ಹೊಮ್ಮಿತು. ಇಂದ್ರಪ್ರಸ್ಥ ಕಾಲೇಜಿನ ಅಕ್ಷಜ್ ಶೆಟ್ಟಿ ಬೆಸ್ಟ್ ತ್ರೋವರ್ ಆಗಿ, ಸ್ವಾತಿಕ್ ಬೆಸ್ಟ್ ರಿಸೀವರ್ ಆಗಿ, ವಿವೇಕಾನಂದದ ಕೌಶಿಕ್ ಅಲ್ರೌಂಡರ್ ಆಗಿ ಹೊರ ಹೊಮ್ಮಿದರು. ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ವಿನ್ನರ್ಸ್ ಆಗಿ, ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜು ರನ್ನರ್ಸ್ ಸ್ಥಾನ ಪಡೆಯಿತು. ವಿವೇಕಾನಂದದ ಅಶ್ವಿನ್ ಬೆಸ್ಟ್ ತ್ರೋವರ್ ಆಗಿ, ತನ್ವಿ ಬೆಸ್ಟ್ ರಿಸೀವರ್ ಆಗಿ, ಇಂದ್ರಪ್ರಸ್ಥದ ಅಮತೂರ್ ಸಲೀಮಾ ಅಲ್ರೌಂಡರ್ ಆಗಿ ಹೊರ ಹೊಮ್ಮಿದರು. ಬಾಲಕರ ವಿಭಾಗದಲ್ಲಿ ಆರು ತಂಡಗಳು, ಬಾಲಕಿಯರ ವಿಭಾಗದಲ್ಲಿ ಎಂಟು ತಂಡಗಳು ಭಾಗವಹಿಸಿತ್ತು.