ಹೋರಾಟದ ಇತಿಹಾಸದಲ್ಲಿ ಹೆಣ್ಣುಮಕ್ಕಳಿಗೆ ಮನ್ನಣೆ ದೊರೆತಿಲ್ಲ: ಲತೇಶ್ ಬಾಕ್ರಬೈಲ್
ಪುತ್ತೂರು: ಭಾರತದ ಸ್ವಾತಂತ್ರ್ಯ ಹೋರಾಟದ ಬಗೆಗಿನ ಇತಿಹಾಸದಲ್ಲಿ ಹೆಣ್ಣುಮಕ್ಕಳ ಕ್ರಾಂತಿಗೆ ಸರಿಯಾದ ಮನ್ನಣೆ ದೊರೆತಿಲ್ಲ. ಹಾಗಾಗಿ ಈ ದೇಶಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡ ಅವೆಷ್ಟೋ ನಾರಿಯರ ಕಥಾನಕಗಳು ಪ್ರಚಾರವೇ ಇಲ್ಲದೆ ಮೂಲೆಗುಂಪಾಗಿದೆ. ಈ ದೇಶಕ್ಕಾಗಿ ಮೊತ್ತಮೊದಲ ಹೋರಾಟ ನಡೆಸಿದ್ದು ಒಬ್ಬಾಕೆ ಹೆಣ್ಣುಮಗಳು ಮತ್ತು ಆಕೆಯ ಹೆಸರು ರಾಣಿ ಅಬ್ಬಕ್ಕ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಜಿಲ್ಲಾ ಸಹ ಕಾರ್ಯದರ್ಶೀ ಲತೇಶ್ ಬಾಕ್ರಬೈಲ್ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯದ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ರಾಣಿ ಅಬ್ಬಕ್ಕ ಅವರ ಐನೂರನೇ ಜನ್ಮಜಯಂತಿಯ ಹಿನ್ನೆಲೆಯ ಪ್ರೇರಣಾದಾಯಿ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
ರಾಣಿ ಅಬ್ಬಕ್ಕ ಆಳ್ವಿಕೆ ನಡೆಸಿದ್ದು ಉಳ್ಳಾಲ ಭಾಗದ ಅತ್ಯಂತ ಸಣ್ಣ ಪ್ರದೇಶದಲ್ಲಿ. ಸುತ್ತ ಮುತ್ತಲಿನ ಪ್ರದೇಶದ ಚುಕ್ಕಾಣಿ ಹಿಡಿದಿದ್ದವರೆಲ್ಲ ಗಂಡು ಮಕ್ಕಳೇ ಆಗಿದ್ದರು. ಆದರೆ ಪೋರ್ಚುಗೀಸರ ವಿರುದ್ಧ ಕತ್ತಿ ಎತ್ತಿದ ಹಿರಿಮೆ ಮಾತ್ರ ಅಬ್ಬಕ್ಕನದ್ದು. ಆಕೆ ವೀರಾವೇಶದ ಹೋರಾಟ ನಡೆಸದೇ ಇದ್ದಿದ್ದರೆ ದಕ್ಷಿಣ ಕನ್ನಡದಲ್ಲಿನ ಮೂಲಸಂಸ್ಕೃತಿ ಆಚಾರ ವಿಚಾರಗಳು ಮರೆಯಾಗಿ, ಪಕ್ಕದ ಗೋವಾದಂತಾಗುತ್ತಿತ್ತು. ಐದುನೂರು ವರ್ಷಗಳ ನಂತರವೂ ನಾವು ಆಕೆಯನ್ನು ನೆನಪಿಸಿಕೊಳ್ಳುತ್ತಿರುವುದಕ್ಕೆ ಅಬ್ಬಕ್ಕನ ಸಾಧನೆಯೇ ಕಾರಣ ಎಂದರು.
ನಮ್ಮ ಪ್ರತಿನಿತ್ಯದ ಬದುಕಿನಲ್ಲಿ ರಾಣಿ ಅಬ್ಬಕ್ಕನ ಬಗೆಗಿನ ಅಧ್ಯಯನವೂ ಒಳಗೊಂಡಿರಬೇಕು. ಆಕೆಯ ಅಸಾಧಾರಣ ಸಾಮರ್ಥ್ಯವಿಶೇಷತೆಗಳನ್ನು ನಾವು ಅರಿತುಕೊಳ್ಳುವುದೇ ಆಕೆಗೆ ನೀಡುವ ಗೌರವ. ನಮ್ಮ ಭಾಗದಲ್ಲಿ ಇಂತಹ ವೀರವನಿತೆಯೋರ್ವಳು ಇದ್ದದ್ದು ನಮಗೆ ಹೆಮ್ಮೆಯ ಸಂಗತಿ. ಪ್ರತಿನಿತ್ಯವೂ ಸ್ವಲ್ಪ ಸ್ವಲ್ಪ ಮಾಹಿತಿಯನ್ನು ಆಕೆಯ ಬಗೆಗೆ ಅರಿಯುತ್ತಾ ಸಾಗಬೇಕು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಭಾರತದ ಸ್ವಾತಂತ್ರ್ಯ ಸಂಗ್ರಾಮ 1857ರಿಂದ ತೊಡಗಿತು ಎಂಬ ಸುಳ್ಳನ್ನು ನಮ್ಮ ಪಠ್ಯಪುಸ್ತಕಗಳು ಎಳೆಯ ಮಕ್ಕಳಲ್ಲಿ ತುಂಬುತ್ತಲೇ ಬರುತ್ತಿದೆ. ಅದಕ್ಕಿಂತಲೂ ಪೂರ್ವದಲ್ಲಿ ರಾಣಿ ಅಬ್ಬಕ್ಕ ನಡೆಸಿದ ಸಂಗ್ರಾಮವನ್ನು ನಾವು ಮರೆಮಾಚುತ್ತಾ ಬರುತ್ತಿದ್ದೇವೆ. ಸ್ತ್ರೀಯೊಬ್ಬಳು ಕತ್ತಿ ಎತ್ತಿದರೆ ಭದ್ರಾಕಾಳಿಯಾಗುತ್ತಾಳೆ ಎಂಬುದಕ್ಕೆ ರಾಣಿ ಅಬ್ಬಕ್ಕ ಉದಾಹರಣೆ ಎಂದರು.
ನಮ್ಮ ಹಿರಿಯರ ತ್ಯಾಗ, ಸಮರ್ಪಣೆಯನ್ನು ಅರಿಯದಿರುವುದು ನಾವು ಅವರಿಗೆ ಮಾಡುವ ಅವಮಾನವೆನಿಸುತ್ತದೆ. ಪೋರ್ಚುಗೀಸರು ಗೋವಾದಲ್ಲಿ ನಡೆಸಿದ ವಿಕೃತ ಘೋರ ಕೃತ್ಯಗಳನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ. ಮತಾಂತರಕ್ಕೆ ಒಪ್ಪದ ಹಿಂದೂಗಳನ್ನು ಕುದಿಯುವ ಎಣ್ಣೆಯಲ್ಲಿ ಮುಳುಗಿಸಿದ ಕ್ರೌರ್ಯ ಅಲ್ಲಿ ನಡೆದಿದೆ. ರಾಣಿ ಅಬ್ಬಕ್ಕ ಇಲ್ಲದಿರುತ್ತಿದ್ದರೆ ನಾವು ಕೂಡ ಇಂದು ಹಿಂದೂಗಳಾಗಿ ಉಳಿಯುವುದಕ್ಕೆ ಸಾಧ್ಯವಿರಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನುಡಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಕಾರ್ಯಕ್ರಮ ಸಂಯೋಜಕ ಡಾ.ಪ್ರಮೋದ್ ಎಂ.ಜಿ. ಉಪಸ್ಥಿತರಿದ್ದರು. ಅಂಬಿಕಾ ಪದವಿ ಮಹಾವಿದ್ಯಾಲಯದ ವಿದ್ಯಾಥಿ ಸಂಘದ ಅಧ್ಯಕ್ಷ ಅನ್ವಿತ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅಕ್ಷಿತಾ ಕಲ್ಲಡ್ಕ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು.