-ಆಟಿ ತಿಂಗಳು ನಿಧಾನವಾಗಿ ಸಾಗಿದರೆ, ಸೋಣ ತಿಂಗಳು ಕುದುರೆ ವೇಗದಲ್ಲಿ ಓಡುತ್ತದೆ-ಹರಿಣಾಕ್ಷಿ ಶೆಟ್ಟಿ
-ಜಾತಿ-ಧರ್ಮ ಬದಿಗಿಟ್ಟು ಒಟ್ಟಾಗಿ ಹಬ್ಬಗಳನ್ನು ಆಚರಿಸುವುದು ರೋಟರಿ ಹೆಗ್ಗಳಿಕೆ-ಡಾ.ರಾಜಾರಾಂ
-ಆಟಿ ಕಷ್ಟದ ತಿಂಗಳು, ಸೋಣ ಧರ್ಮದ ತಿಂಗಳು-ಹರೀಶ್ ಸಿ.ಎಚ್
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ ಆಶ್ರಯದಲ್ಲಿ ಆಟಿ-ಸೋಣ ಹಾಗೂ ಓಣಂ ವಿಶೇಷದೊಂದಿಗೆ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಸೆ.4 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿತು.
ಆಟಿ ತಿಂಗಳು ನಿಧಾನವಾಗಿ ಸಾಗಿದರೆ, ಸೋಣ ತಿಂಗಳು ಕುದುರೆ ವೇಗದಲ್ಲಿ ಓಡುತ್ತದೆ-ಹರಿಣಾಕ್ಷಿ ಶೆಟ್ಟಿ:
ಮುಖ್ಯ ಅತಿಥಿ, ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿರವರು ದೀಪ ಉದ್ಘಾಟಿಸಿ ಮಾತನಾಡಿ, ಆಟಿ ತಿಂಗಳು ಮಳೆಗಾಲದ ತಿಂಗಳು ಮತ್ತು ತುಳುನಾಡಿನ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಈ ಸಮಯದಲ್ಲಿ ಹಿರಿಯರು ವಿವಿಧ ಬಗೆಯ ಔಷಧೀಯ ಮೂಲಿಕೆಗಳು, ಕಷಾಯಗಳು ಮತ್ತು ವಿಶೇಷ ಆಹಾರಗಳ ಮೂಲಕ ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಆಟಿ ತಿಂಗಳ ನಂತರ ಬರುವ ಸೋಣ ತಿಂಗಳು ತುಳುನಾಡಿನಲ್ಲಿ ಶೀಘ್ರವಾಗಿ ಕಳೆದುಹೋಗುವ ತಿಂಗಳಲ್ಲಿ ಒಂದಾಗಿದ್ದು, ಹಬ್ಬಗಳ ತಿಂಗಳು ಆಗಿದೆ. ಆಟಿ ಆನೆಡ್ ಪೋಪಿನಿ, ಸೋಣ ಕುದುರೆಡ್ ಪೋಪಿನಿ ಎಂಬ ಗಾದೆಯು ಆಟಿ ತಿಂಗಳು ನಿಧಾನವಾಗಿ ಸಾಗಿದರೆ, ಸೋಣ ತಿಂಗಳು ಕುದುರೆ ವೇಗದಲ್ಲಿ ಓಡುತ್ತದೆ ಎಂಬುದನ್ನು ಸೂಚಿಸುತ್ತದೆ ಎಂದರು.
ಜಾತಿ-ಧರ್ಮ ಬದಿಗಿಟ್ಟು ಒಟ್ಟಾಗಿ ಹಬ್ಬಗಳನ್ನು ಆಚರಿಸುವುದು ರೋಟರಿ ಹೆಗ್ಗಳಿಕೆ-ಡಾ.ರಾಜಾರಾಂ:
ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಂ ಕೆ.ಬಿ ಮಾತನಾಡಿ, ತುಳು ಭಾಷೆ, ಸಂಸ್ಕೃತಿ, ಆಚರಣೆಗಳನ್ನು ತುಳುವರು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ರೋಟರಿ ಸಂಸ್ಥೆಯಲ್ಲಿ ಜಾತಿ-ಧರ್ಮವನ್ನು ಬದಿಗಿಟ್ಟು ಆಯಾ ಸಮಾಜ ಬಾಂಧವರ ಹಬ್ಬಗಳನ್ನು ಎಲ್ಲರೂ ಒಗ್ಗೂಡಿ ಆಚರಿಸುವುದು ವೈಶಿಷ್ಟ್ಯತೆಯಾಗಿದೆ. ರೋಟರಿ ಸಂಸ್ಥೆಯ ಧ್ಯೇಯವಾಕ್ಯವಾದ ಒಳ್ಳೆಯ ಕಾರ್ಯಗಳಿಗೆ ಒಂದಾಗೋಣ ಎಂಬಂತೆ ನಾವೆಲ್ಲರೂ ನಗುಮುಖದಿಂದ ಬಾಳಿ ನಮ್ಮ ಬದುಕನ್ನು ಸಿಂಗಾರಗೊಳಿಸೋಣ, ಬಂಗಾರಗೊಳಿಸೋಣ ಎಂದರು.
ಆಟಿ ಕಷ್ಟದ ತಿಂಗಳು, ಸೋಣ ಧರ್ಮದ ತಿಂಗಳು-ಹರೀಶ್ ಸಿ.ಎಚ್:
ರೋಟರಿ ವಲಯ ಸೇನಾನಿ ಹರೀಶ್ ಸಿ.ಎಚ್ ಮಾತನಾಡಿ, ಹಿರಿಯರು ಬದುಕಿದ್ದ ಸಂದರ್ಭದಲ್ಲಿ ಆಟಿ ತಿಂಗಳು ಎಂದರೆ ಒಂದೊತ್ತು ಊಟಕ್ಕೂ ತತ್ವಾರ ಹೊಂದಬೇಕಾದ ತಿಂಗಳಾಗಿತ್ತು. ಇಂದಿನ ದಿನಗಳಲ್ಲಿ ಅಂದಿನ ಆಟಿಯ ಮಹತ್ವದ ಕುರಿತು ಇಂದಿನ ಪೀಳಿಗೆಗೆ ಆಚರಣೆ ಮಾಡುವ ಮೂಲಕ ತೋರಿಸುತ್ತಿರುವುದು ಶ್ಲಾಘನೀಯವಾಗಿದೆ. ಸೋಣ ಧರ್ಮದ ತಿಂಗಳಾಗಿದ್ದು ಭಕ್ತರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಸಂದರ್ಭವಾಗಿದೆ ಎಂದರು.
ಸದಸ್ಯ ಪ್ರೇಮ್ ಕುಮಾರ್ ಪ್ರಾರ್ಥಿಸಿದರು. ಅಧ್ಯಕ್ಷತೆ ವಹಿಸಿದ ಕ್ಲಬ್ ಅಧ್ಯಕ್ಷ ಉಲ್ಲಾಸ್ ಪೈರವರು ತುಳುನಾಡ ಸಂಸ್ಕೃತಿಯಂತೆ ಅತಿಥಿಗಳಿಗೆ ಬಚ್ಚಿರೆ, ಬಜ್ಜಯಿ ನೀಡಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಪೊಡಿಯರವರು ವಾರದ ಸಭೆಯ ವರದಿ ಮಂಡಿಸಿ, ವಂದಿಸಿದರು. ಸದಸ್ಯ ಕಾರ್ತೀಕ್ರವರು ಅತಿಥಿಗಳ ಪರಿಚಯ ಮಾಡಿದರು. ನಿಯೋಜಿತ ಅಧ್ಯಕ್ಷ ಉಮೇಶ್ಚಂದ್ರ, ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಸಾಬ್, ಅಧ್ಯಕ್ಷ ಉಲ್ಲಾಸ್ ಪೈರವರ ಪತ್ನಿ ಸವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಖಾದ್ಯಗಳನ್ನು ಮಾಡಿಕೊಂಡು ಬಂದಿದ್ದ ಕ್ಲಬ್ ಸದಸ್ಯರಿಗೆ, ಆನೆಟ್ಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಖಾದ್ಯ ತಂದವರ ಹೆಸರನ್ನು ಅಕ್ಷತಾ ಶೆಣೈ ಓದಿದರು. ಶ್ರೀಮತಿ ಶ್ಯಾಮಲಾ ಪಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿಶೇಷ ಆಕರ್ಷಣೆಯಾಗಿ ಕ್ಲಬ್ ಸದಸ್ಯರಿಂದ ಆಟೋಟ ಸ್ಪರ್ಧೆಗಳು, ಲಘು ಸಂಗೀತ, ನೃತ್ಯ ಕಾರ್ಯಕ್ರಮ ಮನಸೆಳೆದವು.
ಅಭಿನಂದನೆ..
ಕ್ಲಬ್ ಸದಸ್ಯರ ಮಕ್ಕಳಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಕ್ಲಬ್ ಕಾರ್ಯದರ್ಶಿ ಡಾ.ಪೊಡಿಯರವರ ಪುತ್ರ, ಬ್ಯಾಡ್ಮಿಂಟನ್ ಹಾಗೂ ವಾಲಿಬಾಲ್ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಗಗನ್, ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಅಧ್ಯಕ್ಷ ಉಲ್ಲಾಸ್ ಪೈರವರ ಪುತ್ರಿ ಅಶ್ವಿಜಾ ಪೈ, ಯೋಗಾಸನ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆಗೈದ ರವಿಕುಮಾರ್ ರವರ ಪುತ್ರಿ ರಮ್ಯಾ ಕೆ.ಆರ್ರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.