ಪೆರ್ನೆ: ದನ ಕದ್ದು ಮಾಂಸ ಮಾಡಿದ ಪ್ರಕರಣ: ಮೂವರು ಆರೋಪಿಗಳ ಬಂಧನ

0

ತುಂಬೆಯಲ್ಲಿ ಕೃತ್ಯ ನಡೆಸಿದ ಕಿರಾತಕರಿಂದ ಇಲ್ಲೂ ಹೀನ ಕೃತ್ಯ

ಉಪ್ಪಿನಂಗಡಿ: ಹಟ್ಟಿಯಿಂದ ದನವನ್ನು ಕದ್ದುಕೊಂಡು ಹೋಗಿ ದನದ ಮಾಲಕನ ತೋಟದಲ್ಲೇ ಅದನ್ನು ಕೊಂದು ಅದರ ಕರುಳು ಸಹಿತ ಹೊಟ್ಟೆಯೊಳಗಿನ ತ್ಯಾಜ್ಯವನ್ನು ಅಲ್ಲೇ ಬಿಸಾಡಿ ದನದೊಂದಿಗೆ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34), ಮಂಗಳೂರು ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48), ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಬಂಧಿತ ಆರೋಪಿಗಳು. ಇವರು ಸೆ.4ರಂದು ನಸುಕಿನ ಜಾವ ಪೆರ್ನೆಯ ಕಡಂಬು ನಿವಾಸಿ ದೇಜಪ್ಪ ಮೂಲ್ಯರವರ ಹಟ್ಟಿಯಿಂದ ಸುಮಾರು ಎರಡು ವರ್ಷ ಪ್ರಾಯದ ಗಬ್ಬದ ದನವನ್ನು ಕದ್ದು, ದೇಜಪ್ಪ ಮೂಲ್ಯರವರ ಜಾಗದಲ್ಲೇ ಅದನ್ನು ಕೊಂದು ಅದರ ಹೊಟ್ಟೆಯೊಳಗಿನ ಕರುಳು ಸೇರಿದಂತೆ ತ್ಯಾಜ್ಯವನ್ನು ಹೊರತೆಗೆದು, ಅದನ್ನು ಅಲ್ಲೇ ಬಿಸಾಡಿ ದನವನ್ನು ಹೊತ್ತೊಯ್ದಿದ್ದರು. ದುಷ್ಕರ್ಮಿಗಳ ಇಂತಹ ಹೀನ ಕೃತ್ಯವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತಲ್ಲದೇ, ಘಟನೆ ಬೆಳಕಿಗೆ ಬಂದ ದಿನವೇ ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಪರ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು 24 ಗಂಟೆಗಳೊಳಗೆ ಬಂಧಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದರು. ಸೆ.೫ರಂದು ಶಾಸಕರಾದ ಅಶೋಕ್ ಕುಮಾರ್ ರೈಯವರು ಕೂಡಾ ದೇಜಪ್ಪ ಮೂಲ್ಯರ ಮನೆಗೆ ಭೇಟಿ ನೀಡಿ ಈ ಹೀನ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಲ್ಲದೆ, ಮನೆ ಮಂದಿಗೆ ಸಾಂತ್ವಾನ ಹೇಳಿ, ಮನೆಯವರಿಗೆ ದನ ಖರೀದಿಸಲು 10 ಸಾವಿರ ರೂ. ನೀಡುವುದಾಗಿ ತಿಳಿಸಿದ್ದಲ್ಲದೆ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿದ್ದರು. ಈ ಕೃತ್ಯ ಪ್ರತಿಭಟಿಸಿ ಗೋ ಮಾತಾ ಸಂರಕ್ಷಣಾ ಚಳವಳಿ ಎಂಬ ಹೆಸರಿನಲ್ಲಿ ಸೆ.6ರಂದು ಹಿಂದೂಪರ ಸಂಘಟನೆಗಳು ಕಡಂಬು ಜಂಕ್ಷನ್‌ನಲ್ಲಿ ಪ್ರತಿಭಟನೆಗೂ ಕರೆ ಕೊಟ್ಟಿದ್ದರು. ಆದರೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪೊಲೀಸ್ ಇಲಾಖೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.


ತುಂಬೆ ಘಟನೆಯ ಆರೋಪಿಗಳು!:
ಕಳೆದ ಆ.15ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಬಳಿ ಜಾನುವಾರು ಕಳವು ಹಾಗೂ ಅದರ ಅಂಗಾಂಗಳು ಅಲ್ಲೇ ಸಮೀಪ ಪತ್ತೆಯಾಗಿತ್ತು. ಈ ಘಟನೆಗೆ ಸಂಬಂಧಿಸಿ ಬಂಟ್ವಾಳ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಕ್ರ:125/2025, ಕಲಂ: 303(2),BNS,, ಕಲಂ: 4,12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020 ಹಾಗೂ ಕಲಂ 11(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಈ ಕೃತ್ಯದಲ್ಲೂ ಕೂಡಾ ಇದೇ ಆರೋಪಿಗಳು ಭಾಗಿಯಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ನೆಯ ಕಡಂಬು ಬಳಿ ನಡೆಸಿದ ಕೃತ್ಯದ ಬಗ್ಗೆ ಇವರು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here