ಮಹಾನ್ ಶಿಷ್ಯರನ್ನು ರೂಪಿಸುವ ಗುರಿ ಶಿಕ್ಷಕರಿಗಿರಬೇಕು : ಸುಬ್ರಮಣ್ಯ ನಟ್ಟೋಜ
ಪುತ್ತೂರು: ಶಿಕ್ಷಕರಾದವರು ಮಹಾನ್ ಶಿಷ್ಯರನ್ನು ರೂಪಿಸುವ ಗುರಿ ಹೊಂದಿ ಕಾರ್ಯ ನಿರ್ವಹಿಸಬೇಕು. ಛತ್ರಪತಿ ಶಿವಾಜಿ, ಸ್ವಾಮಿ ವಿವೇಕಾನಂದರಂತಹ ವಿದ್ಯಾರ್ಥಿ ಸೃಷ್ಟಿ ಶಿಕ್ಷಕರ ಆದ್ಯತೆಯಾಗಬೇಕು. ಮಹಾ ಮಹಾ ಗುರುಗಳೆನಿಸಿದವರು ತಮ್ಮ ಶಿಷ್ಯಂದಿರ ಮೂಲಕ ಅಮೋಘವಾದದ್ದನ್ನು ಸಾಧಿಸಿದ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ. ಅಂತಹವುಗಳನ್ನು ಮಾದರಿಯಾಗಿಟ್ಟುಕೊಂಡು ವಿದ್ಯಾರ್ಥಿಗಳನ್ನು ರೂಪಿಸುವ ಕಾರ್ಯ ಆಗಬೇಕಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದಿಂದ ಆಯೋಜಿಸಲಾದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.
ಶಿಕ್ಷಕರನ್ನು ಗೌರವಿಸಬೇಕು ಎನ್ನುವ ಮನೋಭಾವವ ವಿದ್ಯಾರ್ಥಿಗಳಲ್ಲಿ ಮೂಡಿದ್ದರೆ ಅದಕ್ಕೆ ಶಿಕ್ಷಕರೇ ಕಾರಣ. ತಮ್ಮ ಪಾಠ ಪ್ರವಚನಗಳ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದ ಕಾರಣದಿಂದ ಅರ್ಹವಾಗಿಯೇ ಗೌರವಕ್ಕೆ ಪಾತ್ರರಾಗುತ್ತಾರೆ. ವಿದ್ಯಾರ್ಥಿ – ಶಿಕ್ಷಕರ ನಡುವಣ ಬಂಧ ಸದಾ ಜಾಗೃತಾವಸ್ಥೆಯಲ್ಲಿರಬೇಕು. ಕೇವಲ ವಿದ್ಯಾರ್ಥಿಯಾಗಿದ್ದಾಗ ವಿಧೇಯರಾಗಿದ್ದು ತದನಂತರ ಸಂಬಂಧ ಇಟ್ಟುಕೊಳ್ಳದಿದ್ದರೆ ಪ್ರಯೋಜನವಿಲ್ಲ. ಶಿಕ್ಷಕರು ಸರ್ವಪಳ್ಳಿ ರಾಧಾಕೃಷ್ಣನ್ ಅವರ ಮಾದರಿಯನ್ನು ಸ್ವೀಕರಿಸಿ ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಶಿಕ್ಷಕರ ದಿನಾಚರಣೆ ಅನ್ನುವುದು ಶಿಕ್ಷಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ದಿನ. ನಮ್ಮ ಪರಂಪರೆಯಲ್ಲಿ ಗುರುಪೂರ್ಣಿಮೆಯನ್ನೂ ಆಚರಿಸುತ್ತೇವೆ. ಯಾರು ಬೇಕಾದರೂ ಶಿಕ್ಷಕರಾಗಬಹುದು ಆದರೆ ಎಲ್ಲರೂ ಗುರು ಎನಿಸಿಕೊಳ್ಳುವುದು ಕಷ್ಟ ಸಾಧ್ಯ. ಬದುಕನ್ನು ಬದಲಾಯಿಸುವವನು ಗುರುವೆನಿಸುತ್ತಾನೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರೂ ಗುರು ಆಗುವೆಡೆಗೆ ಗುರಿ ಇಟ್ಟುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ವತಿಯಿಂದ ಎಲ್ಲಾ ಶಿಕ್ಷಕರನ್ನು ಗೌರವಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನ್ವಿತ್ ಸ್ವಾಗತಿಸಿ, ವಿದ್ಯಾರ್ಥಿನಿ ಮಾನ್ಯ ವಂದಿಸಿದರು. ವಿದ್ಯಾರ್ಥಿನಿಯರಾದ ಅಕ್ಷಿತಾ ಹಾಗೂ ಶ್ರೀದೇವಿ ಕಾರ್ಯಕ್ರಮ ನಿರ್ವಹಿಸಿದರು.