ಪುತ್ತೂರು: ಗತಕಾಲದ ತುಳು ಪರಂಪರೆಯನ್ನು ಇಂದಿನ ಜನಾಂಗಕ್ಕೆ ತಿಳಿಸುವ ಕಾರ್ಯಕ್ರಮಗಳನ್ನು ಪುತ್ತೂರು ತುಳುಕೂಟವು ಸತತವಾಗಿ ಹಮ್ಮಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದು ಜಿ.ಎಲ್. ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಲರಾಮ ಆಚಾರ್ಯ ಹೇಳಿದರು. ಪುತ್ತೂರು ತುಳುಕೂಟವು ಚಿಗುರೆಲೆ ಸಾಹಿತ್ಯ ಬಳಗದ ಜತೆಗೂಡಿ ನಡೆಸಿದ ತುಳು ಕಬಿಕೂಟ -2025 ಅನ್ನು ವಿದ್ವಾಂಸ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ರಚನೆಯ ತುಳುಗೀತೆಯನ್ನು ಓದುವ ಮೂಲಕ ಬಲರಾಮ ಆಚಾರ್ಯ ಅವರು ಕವಿಗೋಷ್ಠಿಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿದ್ದ ಸಾಹಿತಿ, ಕವಯಿತ್ರಿ, ಸುದಾನ ಶಾಲಾ ಅಧ್ಯಾಪಕಿ ಕವಿತಾ ಅಡೂರು ಅವರು, ಉದಯೋನ್ಮುಖ ಕವಿಗಳು ಕವಿತೆ ಬರೆಯುವ ವಿಷಯದಲ್ಲಿ ಮಾರ್ಗದರ್ಶನ ನೀಡಿದರು.
ಕವಿಗೋಷ್ಠಿಯ ಜತೆಗೆ ಕವಿತೆ ರಚನೆಯ ಕಾರ್ಯಾಗಾರ ಹಮ್ಮಿಕೊಳ್ಳಿ – ಅಕ್ಷತಾರಾಜ್ ಪೆರ್ಲ
ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ಕವಯಿತ್ರಿ, ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿ ಅಕ್ಷತಾರಾಜ್ ಪೆರ್ಲ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಸಾಹಿತ್ಯ ರಚಿಸುವ ಉತ್ಸಾಹ ಇರುವ ಯುವಜನರಿಗೆ ಕವಿತೆ ರಚನೆಯ ಕಮ್ಮಟಗಳನ್ನು ಕೂಡಾ ಹಮ್ಮಿಕೊಳ್ಳಿ ಎಂದು ಸಲಹೆ ನೀಡಿದರು. 33 ಕವಿಗಳು ಸ್ವರಚಿತ ತುಳು ಕವನಗಳನ್ನು ವಾಚಿಸಿದರು.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತ ಪ್ರೊಫೆಸರ್ ದತ್ತಾತ್ರೇಯ ರಾವ್, ನಿವೃತ್ತ ಅಧ್ಯಾಪಕ ನಾರಾಯಣ ರೈ ಕುಕ್ಕುವಳ್ಳಿ ಸೇರಿದಂತೆ ಹಾಜರಿದ್ದ 20 ಅಧ್ಯಾಪಕರನ್ನು ಗುರುತಿಸಿ ಗೌರವಿಸಲಾಯಿತು.
ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತುಳುಕೂಟದ ಜತೆಕಾರ್ಯದರ್ಶಿ ನಯನಾ ರೈ ಹಾಗೂ ಚಿಗುರೆಲೆ ಸಾಹಿತ್ಯ ಬಳಗದ ಸಂಚಾಲಕ ನಾರಾಯಣ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ರವಿ ಪಾಂಬಾರ್ ತುಳುನಾಡ ಪೊರ್ಲು ಸುಗಿಪು ಗೀತೆ ಹಾಡಿದರು. ಜಗದೀಶ್ ಬಾರಿಕೆ, ಕಾವ್ಯಶ್ರೀ, ಶ್ರೀಶಾವಾಸವಿ ತುಳುನಾಡು ಮತ್ತು ರಶ್ಮಿತಾ ಸುರೇಶ್ ಜೋಗಿಬೆಟ್ಟು ಅವರುಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿ ಸುಪ್ರೀತಾ ಚರಣ್ ಪಾಲಪ್ಪೆ ವಂದಿಸಿದರು.