ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಪರಿಶೀಲಿಸಿ ತಕ್ಷಣ ದುರಸ್ಥಿಗೆ ಸೂಚನೆ
ಪುತ್ತೂರು: ವಾಡಿಕೆಗಿಂತ ಹೆಚ್ಚು ಹಾಗೂ ನಿರಂತರ ಮಳೆ ಸುರಿದ ಪರಿಣಾಮ ನಗರಸಭೆಯ ಬಹುಪಾಲು ರಸ್ತೆಗಳು ಹದಗೆಟ್ಟು ಗುಂಡಿಗಳಾಗಿ ಸಂಚಾರಕ್ಕೆ ಸಂಚಕಾರ ಎದುರಾಗಿರುವ ಹಿನ್ನಲೆಯಲ್ಲಿ ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಅಧಿಕಾರಿಗಳ ಜೊತೆ ನಗರಸಭೆ ಮುಖ್ಯರಸ್ತೆಯಲ್ಲಿ ಪರಿಶೀಲನೆ ನಡೆಸಿ ತಕ್ಷಣದ ಪರಿಹಾರ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೇ ತಿಂಗಳಿನಿಂದಲೇ ಮಳೆ ಬಿಡುವಿಲ್ಲದೆ ಸುರಿದಿದ್ದರಿಂದ ರಸ್ತೆಗಳು ಹದಗೆಟ್ಟಿದೆ. ಹೀಗಾಗಿ, ಹದಗೆಟ್ಟ ರಸ್ತೆಗಳು ಇನ್ನಷ್ಟು ಹಾಳಾಗಿ ಹೊಂಡ ಗುಂಡಿಗಳಾಗಿ ಸಂಚಾರಕ್ಕೆ ಅಡ್ಡಿಯಾಗಿವೆ. ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿದರೂ ಮತ್ತೆ ಗುಂಡಿಗಳು ಬಾಯಿ ತೆರೆಯುತ್ತಿವೆ. ಹಾಗಾಗಿ ದರ್ಬೆಯಲ್ಲಿ ಈಗಾಗಲೇ ಇಂಟರ್ಲಾಕ್ ಅಳವಡಿಸಿದ್ದರೂ ಅಲ್ಲಿ ಮತ್ತೆ ದುರಸ್ಥಿ ಕಾರ್ಯ ನಡೆಯುತ್ತಿದೆ. ಇದೆಲ್ಲವನ್ನು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ ಕೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರು ತಾಂತ್ರಿಕ ತಂಡವಾದ ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಬರೀನಾಥ ರೈ, ಇಂಜಿನಿಯರ್ ಕೃಷ್ಣಮೂರ್ತಿ ಮತ್ತು ಮನೋಜ್ ಜೊತೆಯಲ್ಲಿ ರಸ್ತೆಯನ್ನು ಪರಿಶೀಲನೆ ಮಾಡಿದರು. ತುರ್ತಾಗಿ ಆಯ್ದ ರಸ್ತೆಗಳ ದುರಸ್ಥಿಗೆ ಕ್ರಮಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಎರಡು ಕಡೆ ತಾತ್ಕಾಲಿಕ ದುರಸ್ಥಿ ಮಾಡಲಾಗಿದೆ:
ಮೇಜರ್ ಸಮಸ್ಯೆ ಇರುವ ಕೊಂಬೆಟ್ಟಿನ ಮಯೂರದ ಬಳಿ ಮತ್ತು ಬೊಳುವಾರಿನಲ್ಲಿ ರಾತ್ರಿಯೇ ತಾತ್ಕಾಲಿಕ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ. ಉಳಿದಂತೆ ಇನ್ನೂ ಹಲವು ಕಡೆ ಇಂಜಿನಿಯರ್ಗಳು ತಾಂತ್ರಿಕ ಪರಿಹಾರದೊಂದಿಗೆ ಕ್ರಮಕೈಗೊಳ್ಳಲಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರು ತಿಳಿಸಿದರು.
ಮೇಜರ್ ಕೆಲಸಕ್ಕೆ ಕ್ರಮ
ಈ ವರ್ಷದ ಮಳೆಯಿಂದಾಗಿ ಪುತ್ತೂರಿನಲ್ಲಿ ಮಾತ್ರವಲ್ಲ ಎಲ್ಲಾ ಕಡೆ ರಸ್ತೆಗಳು ಸಂಪೂರ್ಣ ಹದೆಗೆಟ್ಟಿದೆ. ಇದನ್ನು ದುರಸ್ಥಿ ಪಡಿಸುವ ನಿಟ್ಟಿನಲ್ಲಿ ಅಧ್ಯಕ್ಷರ ನಿರ್ದೇಶನದಂತೆ ನಗರಸಭೆ ತಾಂತ್ರಿಕ ತಂಡದೊಂದಿಗೆ ಬಂದಿದ್ದೇವೆ. ಬಿಸಿಲು ಬಂದಾಕ್ಷಣ ನಗರಸಭೆ ದುರಸ್ಥಿಗೆ ಮುತುವರ್ಜಿ ವಹಿಸಿಲ್ಲ ಎಂಬುದು ಸಾರ್ವಜನಿಕರಲ್ಲಿ ಅಭಿಪ್ರಾಯವಿದೆ. ಆದರೆ ತಕ್ಷಣಕ್ಕೆ ಡಾಮರು ಹಾಕಿದರೂ ನಿಲ್ಲುವದಿಲ್ಲ. ಯಾಕೆಂದರೆ ಮೇಲಿನ ಪದರ ಒಣಗಿರಬಹುದು. ಒಳಗಡೆ ತೇವಾಂಶ ಇರುತ್ತದೆ. ಹಾಗಾಗಿ ತಕ್ಷಣಕ್ಕೆ ತಾಂತ್ರಿಕವಾಗಿ ಹೇಗೆ ದುರಸ್ಥಿ ಮಾಡಬಹುದು ಎಂಬುದನ್ನು ತಾಂತ್ರಿಕ ಇಂಜಿನಿಯರ್ಗಳು ಸೂಚನೆಯಂತೆ ನಗರಸಭೆ ಮುಖ್ಯರಸ್ತೆ ಸಹಿತ ಒಳರಸ್ತೆಯ ಮೇಜರ್ ಕೆಲಸ ನಡೆಸಲಾಗುತ್ತದೆ.
ಬಾಲಚಂದ್ರ ಕೆ ಉಪಾಧ್ಯಕ್ಷರು ನಗರಸಭೆ ಪುತ್ತೂರು