ಕಡಬ: ಕುಂತೂರಿನ ಮಾರ್ ಇವಾನಿಯೋಸ್ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಓಣಂ ಹಬ್ಬವನ್ನು ಪಾರಂಪರಿಕವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಲಂಕರ ಕ್ಯಾಥೋಲಿಕ್ ಧರ್ಮಪ್ರ್ಯಾಂತ್ಯ ಪುತ್ತೂರು ಇಲ್ಲಿನ ಧರ್ಮಾಧ್ಯಕ್ಷರಾದ ರೆ|ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿ ಓಣಂ ಮುಖ್ಯವಾಗಿ ಕೇರಳದ ಸಾಂಪ್ರದಾಯಿಕ, ಸಾಂಸ್ಕೃತಿಕ ಮತ್ತು ಸುಗ್ಗಿಯ ಹಬ್ಬ, ಮಾತ್ರವಲ್ಲ ಪ್ರಕೃತಿಯ ಜೊತೆಗಿನ ಅನ್ಯೋನ್ಯ ಸಂಬಂಧವನ್ನು ಬೆಸೆಯುವ ಹಬ್ಬವಾಗಿದೆ- ಕೇರಳ ಮಾತ್ರವಲ್ಲದೆ ನಾನಾ ರಾಜ್ಯಗಳ ಜೊತೆಗೆ ದೇಶ-ವಿದೇಶಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬವಾಗಿದೆ. ಪ್ರಕೃತಿಯ ರಮಣೀಯತೆ, ಸಮೃದ್ಧ ಫಸಲಿನಿಂದ ಕಂಗೊಳಿಸುವ ಈ ಸಂದರ್ಭದಲ್ಲಿ ಜನರು ಐಕ್ಯತೆಯಿಂದ ಶಾಂತಿ ಸಾಮರಸ್ಯದೊಂದಿಗೆ ಮತ್ತು ಸಮೃದ್ಧಿಯ ಪ್ರತೀಕವಾಗಿ ಹಬ್ಬವನ್ನು ನಾಡಿನೆಲ್ಲೆಡೆ ಆಚರಿಸುತ್ತಾರೆ ಎಂದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಹರೀಶ್ ಕುಮಾರ್ ಟಿ, ದಿನದ ಶುಭಾಶಂಶನೆಗಳನ್ನು ನೀಡಿದರು. ಪ್ರಶಿಕ್ಷಣಾರ್ಥಿಗಳಾದ ಸಿ| ಸರಿತಾ ಹಾಗೂ ಕು| ಕೀರ್ತನಾ ಡಿ, ಅವರು ಓಣಂ ಹಾಗೂ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ವ್ಯವಸ್ಥಾಪಕಾದ ರೆ|ಡಾ|ಫಾ| ಎಲ್ದೊ ಪುತ್ತನ್ಕಂಡತ್ತಿಲ್ ಅವರು ಮಾತನಾಡಿ ಓಣಂ ಹಬ್ಬದ ವಿಶೇಷತೆಗಳನ್ನು ಕುರಿತು ವಿವರಿಸಿದರು.
ವೇದಿಕೆಯಲ್ಲಿ ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕಿ ಉಮಾಶ್ರೀ ಪಿ.ಬಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶಿಲ್ಪಾ ಕೆ. ಆರ್ ಹಾಗೂ ವಿಶೇಷ ಅತಿಥಿ ಮಹಾಬಲಿ ದೀಕ್ಷಾ ಪಿ ಕೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ಪ್ರಶಿಕ್ಷಣಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ನಡೆಸಿ, ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಓಣಂ ಹಬ್ಬದ ವಿಶೇಷವಾದ ತಿರುವಾದಿರ ನೃತ್ಯ, ಹಾಡುಗಳನ್ನು ಪ್ರಶಿಕ್ಷಣಾರ್ಥಿಗಳು ಪ್ರಸ್ತುತಪಡಿಸಿದರು.
ಪ್ರಶಿಕ್ಷಣಾರ್ಥಿಗಳು ಹಾಗೂ ಉಪನ್ಯಾಸಕರು ಸಾಂಪ್ರದಾಯಿಕ ಉಡುಪಿನೊಂದಿಗೆ ಆಕರ್ಷಕವಾದ ಪೂಕಳಂ ಚಿತ್ತಾರವನ್ನು ರಚಿಸಿ ಸಂಭ್ರಮಿಸದರು. ಓಣಂ ಸದ್ಯ ಭೋಜನ ಕೂಟವನ್ನು ವಿಶೇಷ ವೈವಿಧ್ಯಮಯ ಭಕ್ಷ್ಯಗಳೊಂದಿಗೆ ಏರ್ಪಡಿಸಲಾಯಿತು. ಪ್ರಶಿಕ್ಷಣಾರ್ಥಿಗಳಾದ ದೀಕ್ಷಾ ಪಿ.ಕೆ ಸ್ವಾಗತಿಸಿ, ವೀಕ್ಷಾ ವಂದಿಸಿದರು. ರಕ್ಷಿತಾ ಮತ್ತು ರಾಕೇಶ್ ಕಾರ್ಯಕ್ರಮ ನಿರೂಪಿಸಿದರು.