ಪುತ್ತೂರು:‘ಕೇಂದ್ರ ಸರ್ಕಾರವು ಮತಗಳ್ಳತನದ ಮೂಲಕ ಅಧಿಕಾರ ಹಿಡಿದಿರುವುದು ಇದೀಗ ಸಾಬೀತಾಗುತ್ತಿದೆ’ ಎಂದು ಆರೋಪಿಸಿ ಪುತ್ತೂರಿನಲ್ಲಿ ಯುವ ಕಾಂಗ್ರೆಸ್ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ಜನಜಾಗೃತಿ ಹೋರಾಟಕ್ಕೆ ಬೆಂಬಲವಾಗಿ ಬೃಹತ್ ಪಂಜಿನ ಮೆರವಣಿಗೆ ಸೆ.13ರಂದು ದರ್ಬೆಯಿಂದ ಗಾಂಧಿಕಟ್ಟೆಯ ತನಕ ನಡೆಯಿತು.

ದರ್ಬೆಯಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ದೊಂದಿಯನ್ನು ಬೆಳಗಿಸಿ ಕೇಂದ್ರ ಸರಕಾರದ ವಿರುದ್ಧ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಬಳಿಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ದೊಂದಿಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ ಮತ್ತು ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಖಿಲ್ ಕಲ್ಲಾರೆ ಅವರಿಗೆ ಹಸ್ತಾಂತರಿಸುವ ಮೂಲಕ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು.ಶಾಸಕ ಅಶೋಕ್ ಕುಮಾರ್ ರೈ ಅವರೂ ಪಂಜಿನ ಮೆರವಣಿಗೆಯಲ್ಲಿ ಜೊತೆಯಾಗಿ ಗಾಂಧಿಕಟ್ಟೆಯ ತನಕ ಹೆಜ್ಜೆ ಹಾಕಿದರು.ಗಾಂಧಿಕಟ್ಟೆಯ ಬಳಿ ಸಮಾರೋಪಗೊಳಿಸಲಾಯಿತು.
ಜನರ ಧ್ವನಿ ಅಡಗಿಸಲು ಸಾಧ್ಯವಿಲ್ಲ-ತಕ್ಷಣ ರಾಜೀನಾಮೆ ನೀಡಿ:
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರು ಈ ಸಂದರ್ಭ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಂದು ಕಾಲದಲ್ಲಿ ಲೋಕಸಭೆಯ ಒಳಗೆ ಪ್ರವೇಶಿಸುತ್ತಿದ್ದಾಗ ಮೋದಿ ಮೋದಿ ಎಂಬ ಧ್ವನಿ ಪ್ರತಿಧ್ವನಿಸುತ್ತಿತ್ತು.ಮೊನ್ನೆ ಮೊನ್ನೆ ಅವರು ಲೋಕಸಭೆ ಒಳಗೆ ಪ್ರವೇಶಿಸುತ್ತಿದ್ದಂತೆ ಓಟ್ ಚೋರ್ ಮೋದಿ ಚೋರ್ ಎಂಬ ಕೂಗು ಮೊಳಗಿದೆ.ಆದರೆ ಮೋದಿಯವರು ಮುಖಕ್ಕೆ ರಟ್ಟಿದ ಕೆಸರನ್ನು ಒರೆಸಿಕೊಂಡು ಆರಾಮವಾಗಿದ್ದಾರೆ.ಚುನಾವಣೆ ಸಂದರ್ಭದಲ್ಲಿ ‘ಅಬ್ ಕಿ ಬಾರ್ 400 ಸೀಟ್’ ಘೋಷಣೆ ಮಾಡಿದ್ದರು.ಆದರೆ ಚುನಾವಣೆ ನಡೆಯುವ ಮೊದಲೇ ಯಾವ ಆಧಾರದಲ್ಲಿ ಅವರು ಫಲಿತಾಂಶ ಘೋಷಣೆ ಮಾಡಿದ್ದರೆಂಬುದು ಈಗ ಸಂಶಯಕ್ಕೆ ಎಡೆ ಮಾಡಿದೆ.ಚುನಾವಣೆಯಲ್ಲಿ ಮತದಾರರ ಪಟ್ಟಿ ತಿರುಚಿ ಷಡ್ಯಂತ್ರ ಮಾಡುವ ಮೂಲಕ ಗೆಲವು ಸಾಧಿಸಿದ್ದಾರೆ.ಎಲ್ಲೆಲ್ಲಿ ಬಿಜೆಪಿ ಸೋಲುತ್ತದೆಯೋ ಅಲ್ಲಿನ ಬೂತ್‌ಗಳಲ್ಲಿ ಮತಗಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದರಲ್ಲದೆ,ಇವೆಲ್ಲ ರಾಹುಲ್ ಗಾಂಧಿಯವರ ಸಂಶೋಧನೆಯಿಂದ ಬೆಳಕಿಗೆ ಬಂದಿದೆ ಎಂದರು.ಚುನಾವಣಾ ಆಯೋಗವು ಆಳುವ ಪಕ್ಷದ ಜೊತೆ ಸೇರಿ ದೊಡ್ಡ ಷಡ್ಯಂತ್ರ ಮಾಡಿದೆ.ಈ ಕುರಿತು ರಾಹುಲ್ ಗಾಂಧಿಯವರು ದೂರು ನೀಡಿದರೆ ದಾಖಲೆ ಕೇಳುತ್ತಾರೆ.ದಾಖಲೆಗೆ ಸಿಸಿ ಕ್ಯಾಮರಾ ಫೂಟೇಜ್ ಕೇಳಿದರೆ,ಬಿಜೆಪಿಯವರ ಪ್ರಭಾವಕ್ಕೊಳಗಾಗಿ ಅದನ್ನೂ ಚುನಾವಣಾ ಆಯೋಗ ಕೊಡುತ್ತಿಲ್ಲ.ಇದನ್ನು ಮುಚ್ಚಿ ಹಾಕಲು ಬಿಜೆಪಿ ರಾಹುಲ್ ಗಾಂಽಯವರನ್ನು ‘ಪಪ್ಪು’ ಎಂದು ಬಿಂಬಿಸಲು ಹೊರಟಿದೆ.ಆದರೆ ಜನರ ಧ್ವನಿಯನ್ನು ಅಡಗಿಸಲು ಬಿಜೆಪಿಗೆ ಸಾಧ್ಯವಿಲ್ಲ ಎಂದ ಅಮಳ, ತಕ್ಷಣ ಬಿಜೆಪಿ ಸರಕಾರ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ನರೇಂದ್ರ ಮೋದಿಯವರು ಕ್ಷಮೆ ಕೇಳುವ ದಿನ ಹತ್ತಿರ ಬರುತ್ತಿದೆ:
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ಅವರು ಮಾತನಾಡಿ, ಯುವ ಶಕ್ತಿ ಹೋರಾಟದ ನಾಯಕ, ಬಡವರ ನಾಯಕ, ಸೌಹಾರ್ದತೆಯ ನಾಯಕ, ಪ್ರಜಾಪ್ರಭುತ್ವದ ರಕ್ಷಕ, ಸಂವಿಧಾನ ರಕ್ಷಕ ರಾಹುಲ್ ಗಾಂಧಿ ವಿರುದ್ದ ಚುನಾವಣೆ ಆಯೊಗದ ಮುಖ್ಯಸ್ಥರು ಪತ್ರಿಕಾಗೋಷ್ಠಿ ನಡೆಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು.ಆದರೆ ರಾಹುಲ್ ಗಾಂಧಿ ಕ್ಷಮೆ ಕೇಳುವ ಬದಲು, ಮತಗಳ್ಳತನ ಮಾಡಿ ಅಧಿಕಾರಕ್ಕೆ ಏರಿದ ನರೇಂದ್ರ ಮೋದಿಯವರು ದೇಶದ ಮುಂದೆ ಕ್ಷಮೆ ಕೇಳುವ ದಿನ ಹತ್ತಿರ ಬರುತ್ತಿದೆ ಎಂದು ಹೇಳಿದರು.
ರಾಹುಲ್ ಗಾಂಧಿಯವರಿಗೆ ಶಕ್ತಿಯನ್ನು ನೀಡುವ ಕೆಲಸ:
ದರ್ಬೆಯಲ್ಲಿ ಪಂಜಿನ ಮೆರವಣಿಗೆಯ ಆರಂಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ಅವರು ಮಾತನಾಡಿ,ದೇಶದಲ್ಲಿ ನಡೆದ ಮತಗಳ್ಳತನವನ್ನು ರಾಹುಲ್ ಗಾಂಧಿಯವರು ದಾಖಲೆ ಸಮೇತ ಚುನಾವಣೆ ಆಯೋಗದ ಮುಂದಿಟ್ಟಿದ್ದಾರೆ.ನಾನೇನಾದರೂ ಇದ್ದರೆ ಜನರ ಜೊತೆ ಇರಬೇಕು.ಯುವಕರ ಉದ್ಯೋಗದ ಪರವಾಗಿ ಇರಬೇಕು.ದೇಶದಲ್ಲಿರುವ ದೀನ ದುರ್ಬಲರ ಪರವಾಗಿ ಇರಬೇಕು ಹೊರತು ಬಂಡವಾಳಶಾಹಿಗಳ ಪರವಾಗಿ ಅಲ್ಲ ಎಂದು ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮಾಡಿದ್ದರು.ನಾವೆಲ್ಲ ರಾಹುಲ್ ಗಾಂಧಿಯವರ ಜೊತೆ ಹೆಜ್ಜೆ ಹಾಕಿದ್ದೇವೆ.ಇದೀಗ ಮತ್ತೊಂದು ಹೆಜ್ಜೆಯಾಗಿ, ದೇಶದಲ್ಲಿ ಬಿಜೆಪಿಯವರು ಅಧಿಕಾರದ ಗದ್ದುಗೆಯನ್ನು ಹೇಗೆ ಪಡೆದಿದ್ದಾರೆ ಎಂಬುದನ್ನು ರಾಹುಲ್ ಗಾಂಧಿಯವರು ಕೂಲಂಕುಶವಾಗಿ ಸಂಶೋಧಿಸಿದ್ದಾರೆ.ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.ಒಂದು ಮನೆಯಲ್ಲಿ 80ಕ್ಕಿಂತ ಹೆಚ್ಚು ಮತಗಳು, ವ್ಯಕ್ತಿ ಇಲ್ಲದಿದ್ದರೂ ಆತನ ಹೆಸರಿನಲ್ಲಿ ಮತಗಳು ಈ ರೀತಿಯಾಗಿ ಮತಗಳ್ಳತನದ ಮೂಲಕ ದೇಶದ ಗದ್ದುಗೆಯನ್ನು ಬಿಜೆಪಿ ಏರಿದೆ ಎಂಬುದನ್ನು ದಾಖಲೆ ಸಮೇತ ಅವರು ಬಿಡುಗಡೆ ಮಾಡಿದ್ದಾರೆ.ಈ ನಿಟ್ಟಿನಲ್ಲಿ ರಾಹುಲ್ ಗಾಂಧಿಯವರಿಗೆ ಶಕ್ತಿಯನ್ನು ತುಂಬುವ ಕೆಲಸ ಪುತ್ತೂರಿನಲ್ಲಿ ಪಂಜಿನ ಮೆರವಣಿಗೆ ಮೂಲಕ ನಡೆಯುತ್ತಿದೆ ಎಂದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ ವಂದಿಸಿದರು.ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು.ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಅಳಿಕೆ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ಕೆಪಿಎಸಿ ಕಾರ್ಯದರ್ಶಿ ಎಮ್.ಎಸ್ ಮಹಮ್ಮದ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನ್ಹಸ್, ಸರಕಾರಿ ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯ ಸುದೇಶ್ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ರಾಜಾರಾಮ್, ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜ, ಯುವ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಕಲ್ಯಾಣ್ ತೇಜಸ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಸಾಮಾಜಿಕ ಜಾಲತಾಣದ ಸುಪ್ರೀತ್ ಕಣ್ಣರಾಯ, ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ, ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಪ್ರಹ್ಲಾದ್ ಬೆಳ್ಳಿಪ್ಪಾಡಿ, ನಾರಾಯಣ್, ಎಸ್ಸಿ ಘಟಕದ ಅಧ್ಯಕ್ಷ ಬಾಬು ಮರಿಕೆ, ಕೆಪಿಸಿಸಿ ಸಂಯೋಜಕ ಪ್ರದೀಪ್ ಪಾಂಬಾರು, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ನಗರಸಭೆ ಸದಸ್ಯರಾದ ಯುಸೂಪ್, ರಾಬಿನ್ ತಾವ್ರೊ, ದಿನೇಶ್ ಶೇವಿರೆ, ನಾಮನಿರ್ದೇಶಿತ ಸದಸ್ಯರಾದ ಬಶೀರ್ ಪರ್ಲಡ್ಕ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಕಾಂಗ್ರೆಸ್ ಮಹಿಳಾ ಘಟಕದ ಸಾಯಿರಾ, ನೆಬಿಸಾ ಬಪ್ಪಳಿಗೆ, ಶಿವರಾಮ ಆಳ್ವ, ಬ್ಲಾಕ್ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಗಣೇಶ್ ನೆಲ್ಲಿಕಟ್ಟೆ, ನಗರಸಭೆ ಮಾಜಿ ಸದಸ್ಯರಾದ ಲ್ಯಾನ್ಸಿ ಮಸ್ಕರೇನ್ಹಸ್, ಮುಖೇಶ್ ಕೆಮ್ಮಿಂಜೆ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಪ್ರಸನ್ನ ಶೆಟ್ಟಿ ಸಿಝ್ಲರ್, ಶೇಷಪ್ಪ ನೆಕ್ಕಿಲು, ದಾಮೋದರ್ ಭಂಡಾರ್ಕರ್, ಶರುಣ್ ಸಿಕ್ವೇರ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹರ್ಷದ್ ದರ್ಬೆ, ಇಬ್ರಾಹಿಂ ಬೊಳುವಾರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪ್ರಾಮಾಣಿಕ ಚುನಾವಣೆ ನಡೆಯಲಿ
ಕೇಂದ್ರ ಸರ್ಕಾರವು ಮತಗಳ್ಳತನದ ಮೂಲಕ ಅಧಿಕಾರ ಹಿಡಿದಿರುವುದು ಇದೀಗ ಸಾಬೀತಾಗುತ್ತಿದೆ.ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನ ಬಹಿರಂಗಪಡಿಸಿದ ಬಳಿಕ ಒಂದೊಂದೇ ಪ್ರಕರಣ ಬಯಲಿಗೆ ಬರುತ್ತಿದೆ.ಪ್ರಾಮಾಣಿಕ ಚುನಾವಣೆ ನಡೆಯಬೇಕು.ಮತಗಳ್ಳತನದ ಕುರಿತು ಗ್ರಾಮ ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕು
| ಅಶೋಕ್ ಕುಮಾರ್ ರೈ
ಶಾಸಕರು ಪುತ್ತೂರು