ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನ ಆದರ್ಶನಗರ ಟ್ಯಾಂಕ್ಗೆ ಬರುವ ಪುತ್ತೂರು ನಗರಸಭೆಯ ಜಲಸಿರಿ ಕುಡಿಯುವ ನೀರು ಪೋಲಾಗುತ್ತಿದ್ದು, ಇದರಿಂದ ಗ್ರಾ.ಪಂ.ಗೆ ಹೆಚ್ಚಿನ ನೀರಿನ ಬಿಲ್ ಬರುವಂತಾಗುತ್ತದೆ. ಆದ್ದರಿಂದ ಇದನ್ನು ತಡೆಯಬೇಕೆಂದು ಜಲಸಿರಿ ನೀರಿಗಾಗಿ ಹೋರಾಟ ನಡೆಸಿದ ಯು. ಶಬೀರ್ ಅಹಮ್ಮದ್ ಅವರು ದ.ಕ. ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.

34 ನೆಕ್ಕಿಲಾಡಿಯ ಎರಡು ಕೊಳವೆ ಬಾವಿಯ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದಾಗ ಈ ನೀರು ಕುಡಿಯಲು ಯೋಗ್ಯವಿಲ್ಲ ಎಂದು ವರದಿ ಬಂದಿತ್ತು. 34 ನೆಕ್ಕಿಲಾಡಿಯಿಂದ ಪುತ್ತೂರು ನಗರಸಭಾ ವ್ಯಾಪ್ತಿಗೆ ಸರಬರಾಜಾಗುವ ಜಲಸಿರಿ ಯೋಜನೆಯ ಶುದ್ಧ ಕುಡಿಯುವ ನೀರನ್ನು 34 ನೆಕ್ಕಿಲಾಡಿ ಗ್ರಾಮಕ್ಕೆ ನೀಡಬೇಕೆಂದು ಸತತ ಎಂಟು ತಿಂಗಳು ನಾವು ಹೋರಾಟ ನಡೆಸಿದ್ದು, ಬಳಿಕ ಬಲ್ಕ್ ಮೀಟರ್ ಅಳವಡಿಸಿ 34 ನೆಕ್ಕಿಲಾಡಿಗೆ ಜಲಸಿರಿಯ ಶುದ್ಧ ಕುಡಿಯುವ ನೀರನ್ನು ನೀಡಲಾಯಿತು. ಆದರೆ ಈಗ ಆದರ್ಶನಗರ ಟ್ಯಾಂಕಿನಲ್ಲಿ ನೀರು ತುಂಬಿದ ಬಳಿಕ ಅದರ ಗೇಟ್ವಾಲ್ ಅನ್ನು ಬಂದ್ ಮಾಡದೇ ಇರುವುದರಿಂದ ಟ್ಯಾಂಕ್ಗೆ ತುಂಬಿ ಹೆಚ್ಚುವರಿಯಾದ ನೀರು ಪೋಲಾಗುತ್ತಿದೆ. ಇದರಿಂದ 34 ನೆಕ್ಕಿಲಾಡಿ ಗ್ರಾ.ಪಂ.ಗೂ ನಗರಸಭೆಯಿಂದ ಹೆಚ್ಚುವರಿ ಬಿಲ್ ಬರುವಂತಾಗಿದೆ. ಇಲ್ಲಿ ಒಂದು ಕಡೆ ಅಮೂಲ್ಯ ಜೀವಜಲ ಪೋಲಾದರೆ, ಇನ್ನೊಂದು ಕಡೆ ಹೆಚ್ಚುವರಿ ಬಿಲ್ ಬರುವುದರಿಂದ ಗ್ರಾಮಸ್ಥರ ತೆರಿಗೆ ಹಣವೂ ಪೋಲಾಗುವಂತಾಗಿದೆ. ಆದ್ದರಿಂದ ನೀರು ಪೋಲಾಗುವುದನ್ನು ತಡೆಗಟ್ಟಲು ಗ್ರಾ.ಪಂ.ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.