ಪುತ್ತೂರು: ವೈಯುಕ್ತಿಕ ಭಿನ್ನಾಭಿಪ್ರಾಯದಿಂದ ನಡೆದಿರುವ ಘಟನೆಯಲ್ಲಿ ಬಿಜೆಪಿಯ ಹೆಸರನ್ನು ಎಳೆದು ತರುವುದು ಸರಿಯಲ್ಲ. ಕೆಲವೊಂದು ವೆವ್ ಚಾನೆಲ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಅವರು ತಿಳಿಸಿದ್ದಾರೆ.
ದಿನಾಂಕ 11-09-2025 ನೇ ಗುರುವಾರ ರಾತ್ರಿ ಪುತ್ತೂರಿನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ವಿಷಯ ಮಾಧ್ಯಮಗಳ ಮೂಲಕ ತಿಳಿದು ಬಂದಿದ್ದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಸುಭಾಷ್ ಮುಕ್ವೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಘಟನೆಯ ಕುರಿತು ವಿವರ ಪಡೆದುಕೊಂಡಾಗ ಹಲ್ಲೆ ನಡೆಸಿದ ವ್ಯಕ್ತಿ ಹಿಂದೂ ಜಾಗರಣ ವೇದಿಕೆಯ ಮಾಜಿ ಅಧ್ಯಕ್ಷರಾದ ಅಶೋಕ್ ತ್ಯಾಗರಾಜ ನಗರ ಅವರು ಬೇರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಅನ್ನುವ ಮಾಹಿತಿ ತಿಳಿದು ಅವರನ್ನು ಭೇಟಿಯಾಗಲು ತೆರಳುವಾಗ ಅವರು ಚಿಕಿತ್ಸೆ ಪಡೆದು ತೆರಳಿರುವುದಾಗಿ ತಿಳಿಯಿತು. ಈ ವಿಚಾರವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಂಘಟನೆಯ ಪ್ರಮುಖರಲ್ಲಿ ವಿನಂತಿಸಿಕೊಂಡಿದ್ದೆ.
ಈ ಇಬ್ಬರೂ ಕಾರ್ಯಕರ್ತರು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯ ಪರ ಕೆಲಸ ಮಾಡಿರುತ್ತಾರೆ ಅನ್ನುವ ಮಾಹಿತಿ ಇದೆ. ಆ ನಂತರದ ಲೋಕಸಭಾ ಚುನಾವಣೆಯಲ್ಲಿ ಇಬ್ಬರೂ ಭಾರತೀಯ ಜನತಾ ಪಾರ್ಟಿ ಪರವಾಗಿ ಕೆಲಸ ಮಾಡಿದ್ದಾರೆ ಅನ್ನುವ ಮಾಹಿತಿಯೂ ಇದೆ. ಇದು ಒಳ್ಳೆಯ ಬೆಳವಣಿಗೆಯೂ ಹೌದು. ಈ ಹಲ್ಲೆಯ ಪ್ರಕರಣ ಇಬ್ಬರ ವೈಯಕ್ತಿಕ ವಿಚಾರವಾಗಿ ನಡೆದಿರುವ ರೀತಿ ಕಂಡು ಬರುತ್ತಿದೆ , ಹೊರತು ಭಾರತೀಯ ಜನತಾ ಪಾರ್ಟಿ ಅಥವಾ ನಮ್ಮ ಪರಿವಾರ ಸಂಘಟನೆಯ ವಿಚಾರವಾಗಿ ನಡೆದಂತೆ ಕಾಣುವುದಿಲ್ಲ. ಇದು ವೈಯುಕ್ತಿಕ ಭಿನ್ನಾಭಿಪ್ರಾಯದಿಂದ ನಡೆದಿರುವ ಘಟನೆಯಾದ್ದರಿಂದ “ನಿಮ್ಮ ನಿಮ್ಮಲ್ಲೇ ಸರಿ ಮಾಡಿಕೊಳ್ಳಿ” ಎಂದು ವಿನಂತಿಸಿದ್ದೆ. ಆದರೆ ನಂತರದ ಬೆಳವಣಿಗೆಯಲ್ಲಿ , ಕೆಲವೊಂದು ವೆಬ್ ಚಾನೆಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಹೆಸರನ್ನು ಎಳೆದು ತಂದಿರುವುದು ಸರಿಯಲ್ಲ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಪಕ್ಕಕಿಟ್ಟು ಒಟ್ಟಾಗಿ ಒಂದಾಗಿ ರಾಷ್ಟ್ರಹಿತದ ಚಿಂತನೆಯನ್ನು ಇಟ್ಟುಕೊಂಡು ಪಾರ್ಟಿಯ ಮತ್ತು ಸಂಘಟನೆಯ ಕಾರ್ಯವನ್ನು ಮಾಡೋಣ ಎಂಬ ಆಶಯ ನಮ್ಮದು ಎಂದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.