ನೆಲ್ಯಾಡಿ: ಬಜತ್ತೂರು ಗ್ರಾಮದ ಹೊಸಗದ್ದೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಆರ್‌ಪಿಎಲ್‌ನ ಸಿಎಸ್‌ಆರ್‌ನ 10 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣವಾದ ಶೌಚಾಲಯದ ಉದ್ಘಾಟನೆ ಸೆ.13ರಂದು ನಡೆಯಿತು.
ಉದ್ಘಾಟಿಸಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು, ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣದ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ಕೆಪಿಎಸ್ ಮಾದರಿ ಶಾಲೆಗಳು ಆರಂಭಗೊಳ್ಳಲಿವೆ. ಎರಡು ಗ್ರಾ.ಪಂ.ಗಳಿಗೆ ಒಂದು ಕೆಪಿಎಸ್ ಮಾದರಿ ಶಾಲೆಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಆರಂಭಿಸುವುದು ಸರ್ಕಾರದ ಚಿಂತನೆಯಾಗಿದೆ ಎಂದು ಹೇಳಿದರು. ಎಂಆರ್‌ಪಿಎಲ್‌ಗೆ ಈ ವರ್ಷ ಸುಮಾರು 10 ಕೋಟಿ ರೂ.ಬೇಡಿಕೆ ಇಡಲಾಗಿದೆ. ಸರ್ಕಾರವೂ ಮುಂದಿನ ವರ್ಷದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕೆಪಿಎಸ್ ಮಾದರಿ ಶಾಲೆಗಳಿಗಾಗಿ ರೂ.250ಕೋಟಿ ಅನುದಾನ ಇಟ್ಟಿದೆ. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾದ್ಯಮ-ಕನ್ನಡ ಮಾಧ್ಯಮ ಶಾಲೆಗಳು ಒಟ್ಟಾಗಿ ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷೆ ವಸಂತಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಪ್ರದೀಪ್ ಅವರನ್ನು ಶಾಸಕರು ಸನ್ಮಾನಿಸಿದರು. ಶಾಲಾ ಪರವಾಗಿ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಸನ್ಮಾನಿಸಲಾಯಿತು. ಉಪ್ಪಿನಂಗಡಿಯ ದಂತವೈದ್ಯ ಡಾ.ರಾಜಾರಾಮ್, ಬಜತ್ತೂರು ಗ್ರಾ.ಪಂ.ಸದಸ್ಯರಾದ ಸಂತೋಷ್ ಪಂರ್ದಾಜೆ, ಭಾಗೀರಥಿ, ಪ್ರೇಮಾ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್, ವಲಯಾಧ್ಯಕ್ಷ ವಿನೋದ್ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ವಿದ್ಯಾ ಕೆ ಸ್ವಾಗತಿಸಿದರು. ಸಿಆರ್‌ಪಿ ಮಂಜುನಾಥ್ ಕೆ.ಪಿ ವಂದಿಸಿದರು. ಶಿಕ್ಷಕಿ ಮಾಲತಿ ಓಡ್ಲ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಚಿತ್ರಾವತಿ, ಪವಿತ್ರ, ಪೋಷಕರಾದ ರುಕ್ಮಯ್ಯ ಗೌಡ ಓಮಂದೂರು, ಪೂವಣಿ ಗೌಡ, ಮಮತಾ, ಈಸುಬು, ಸವಿತಾ ಮತ್ತಿತರು ಸಹಕರಿಸಿದರು.