ಉಪ್ಪಿನಂಗಡಿ: ರಾಜ್ಯ ಕಾಂಗ್ರೆಸ್ ಸರಕಾರದಿಂದ ಹಿಂದೂ ಧರ್ಮಾಚರಣೆಗೆ ವ್ಯವಸ್ಥಿತ ಅಡ್ಡಿ ಆತಂಕಗಳನ್ನು ಸೃಷ್ಟಿಸುವ ಕಾರ್ಯ ನಡೆಯುತ್ತಿದ್ದು, ಹಿಂದೂ ಸಮಾಜವು ತನ್ನೆಲ್ಲಾ ವೈರುಧ್ಯಗಳನ್ನು ಮೆಟ್ಟಿನಿಂತು ಸಂಘಟಿತ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ. ಹಿಂದೂ ಸಮಾಜದ ಬಲವರ್ಧನೆಗಾಗಿ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಹಿಂದವಿ ಸಾಮ್ರಾಜ್ಯೋತ್ಸವವನ್ನು ಮುಂಬರುವ ನವೆಂಬರ್ 29, 30ರಂದು ಆಯೋಜಿಸಲಾಗಿದೆ ಎಂದು ಹಿಂದೂ ಪರ ಸಂಘಟನೆಯ ನಾಯಕ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.

ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ – ಸಾಮೂಹಿಕ ವಿವಾಹ- ಹಿಂದವಿ ಸಾಮ್ರಾಜ್ಯೋತ್ಸವದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ತುಂಬಿದ ಈ ಸಮಯದಲ್ಲಿ ಸಂಘ ಕಾರ್ಯದ ಸತ್ಫಲವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಹೊಣೆಗಾರಿಕೆ ನಮ್ಮದಾಗಿದೆ. ಸಮಾಜದ ಮೇಲಿನ ಸರ್ವ ಬಗೆಯ ಆಕ್ರಮಣವನ್ನು ಮೆಟ್ಟಿ ನಿಲ್ಲುವ ಸಲುವಾಗಿ ಹನ್ನೆರಡು ಮಂದಿ ಯತಿಗಳ ಉಪಸ್ಥಿತಿಯಲ್ಲಿ ಧರ್ಮ ಸಭೆಯು ಆಯೋಜನೆಗೊಳ್ಳುತ್ತಿದೆ. ಸಂಘ ಶತಾಬ್ದಿಯ ಹಿನ್ನೆಲೆಯಲ್ಲಿ ಸಮಾಜದ ಕುಟುಂಬಗಳಿಗೆ ನೆರವಾಗುವ ಸಲುವಾಗಿ 100 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 2 ದಿನಗಳ ಕಾಲನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಅನ್ನ ಸಂತರ್ಪಣೆಯು ಜರಗಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಪ್ರತಿ ಮನೆಯೂ ಭಾಗಿಯಾಗುವ ನಿಟ್ಟಿನಲ್ಲಿ ಅಭಿಯಾನವನ್ನು ಯೋಜನಾಬದ್ದವಾಗಿ ಕೈಗೊಳ್ಳಬೇಕಾಗಿದೆ ಎಂದರು.
ಟ್ರಸ್ಟ್ ಮುಂದಾಳುವಾದ ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ ಮಾತನಾಡಿ, ಸಮಾಜದ ಒಳಿತಿಗಾಗಿ ನಡೆಸಲಾಗುವ ಈ ಕಾರ್ಯಕ್ರಮದಲ್ಲಿ ಪ್ರತಿ ಮನೆಯೂ ಭಾಗಿಯಾಗುವಂತೆ ಕಾರ್ಯಕರ್ತರು ಪ್ರಯತ್ನಶೀಲರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಧರ್ಮ ರತ್ನ ಪ್ರಶಸ್ತಿ ಪುರಸ್ಕೃತರಾದ ಅರುಣ್ ಕುಮಾರ್ ಪುತ್ತಿಲರವರನ್ನು ಹಿರಿಯ ವೈದ್ಯರಾದ ಡಾ. ಕೆ ಜಿ ಭಟ್ ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಉದ್ಯಮಿ ಸುಜೀರ್ ಗಣಪತಿ ನಾಯಕ್, ಪ್ರಮುಖರಾದ ಜಯಂತ ಪೊರೋಳಿ, ಪ್ರಾಣೇಶ್ ಕೆಮ್ಮಾಯಿ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹೇರಂಭ ಶಾಸ್ತ್ರಿ, ಕೈಲಾರ್ ರಾಜಗೋಪಾಲ ಭಟ್, ಗಣೇಶ್ ಕುಲಾಲ್, ಪ್ರಸನ್ನ ಪಾತಾಳ, ಈಶ್ವರ ಭಟ್, ರಾಜೇಶ್ ಶೆಟ್ಟಿ, ರೂಪೇಶ್ ನಾಯಕ್, ಪ್ರಶಾಂತ್ ಶಿವಾಜಿನಗರ, ಮಹೇಂದ್ರ ವರ್ಮ ಬಜತ್ತೂರು , ಸುಜಿತ್ ಪಾಣಾಜೆ, ಚಿದಾನಂದ ಪಂಚೇರು, ಲಕ್ಷ್ಮಣ ಗೌಡ ನೆಡ್ಚಿಲ್, ಗುರುರಾಜ ಭಟ್ ನೆಕ್ಕಿಲಾಡಿ, ಜನಾರ್ದನ ನೆಕ್ಕಿಲಾಡಿ, ಪ್ರವೀಣ್ ಆಚಾರ್ಯ, ರವೀಂದ್ರ ರೈ ಹಿರೆಬಂಡಾಡಿ, ರಾಜೇಶ್ ಕೋಡಂಗೆ, ಮೋಹನ್ ದಾಸ್ ಬಜತ್ತೂರು, ಹರೀಶ್ ನಾಯಕ್, ಜಯರಾಮ ಆಚಾರ್ಯ, ಕಿಶೋರ್ ಕೋಟೆ, ರಮೇಶ್ ಬಂಡಾರಿ, ಶೇಖರ್ ದುರ್ಗಾಗಿರಿ, ಕೇಶವ ನಾಯ್ಕ್ ಬೆತ್ತೋಡಿ, ಮೋಹನ ಗೌಡ ಪಲ್ಲದಕೋಡಿ, ವೆಂಕಟರಮಣ ಭಟ್ ಮುಂಚಿಕಾನ , ಕಿಶೋರ್ ಕುಮಾರ್ ಜೋಗಿ, ಗಂಗಾಧರ ಟೈಲರ್, ರಾಜಗೋಪಾಲ ಹೆಗ್ಡೆ, ಲೋಕೇಶ್ ಬೆತ್ತೋಡಿ, ಚಂದ್ರಶೇಖರ್ ಮಡಿವಾಳ ಮತ್ತಿತರರು ಭಾಗವಹಿಸಿದ್ದರು.