ಪುತ್ತೂರು: ಸ್ಪೋರ್ಟ್ಸ್ ಕೋಟಾದಲ್ಲಿ ಭಾರತೀಯ ರೈಲ್ವೇಯಲ್ಲಿ ಉದ್ಯೋಗವನ್ನು ಗಳಿಸಿಕೊಂಡಿರುವ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಹಿರಿಯ ವಿದ್ಯಾರ್ಥಿನಿ ಪವಿತ್ರಾ.ಜಿ ಇವರನ್ನು ಕಾಲೇಜಿನಲ್ಲಿ ಸನ್ಮಾನಿಸಲಾಯಿತು. ಟ್ರಿಪಲ್ ಜಂಪ್ ಮತ್ತು ಲಾಂಗ್ ಜಂಪ್ನಲ್ಲಿ ರಾಷ್ಟ್ರ ಮಟ್ಟದ ಸಾಧನೆಯನ್ನು ಮಾಡಿರುವ ಇವರು ಕಾಲೇಜಿನ ಎಂಬಿಎ ವಿಭಾಗದ ಹಿರಿಯ ವಿದ್ಯಾರ್ಥಿನಿಯಾಗಿದ್ದು, ಬೆಂಗಳೂರಿನ ನೈರುತ್ಯ ರೈಲ್ವೇ ಕೇಂದ್ರ ಕಛೇರಿಯಲ್ಲಿ ನೇಮಕಾತಿಯನ್ನು ಹೊಂದಿದ್ದಾರೆ.
ಉಡುಪಿಯ ಆರ್ಯಬೆಟ್ಟುವಿನ ಗೋಪಾಲ ಕುಲಾಲ್ ಮತ್ತು ಸುನಂದ ದಂಪತಿಯ ಪುತ್ರಿಯಾಗಿರುವ ಈಕೆ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣವನ್ನು ಪೆರ್ಡೂರಿನಲ್ಲಿ, ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ನಿಟ್ಟೆಯಲ್ಲಿ ಪೂರೈಸಿದ್ದು, ಎಂಬಿಎ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆಸಿದ್ದಾರೆ.
ಎಂಬಿಎ ಪದವಿಯನ್ನು ಪಡೆಯುವ ಸಂದರ್ಭದಲ್ಲಿ ಕಾಲೇಜಿನಿಂದ ದೊರೆತ ಪೂರಕ ಬೆಂಬಲವನ್ನು ಸಂಪೂರ್ಣವಾಗಿ ಬಳಸಿಕೊಂಡ ಇವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಂತರ್ಕಾಲೇಜು ಕ್ರೀಡಾಕೂಟದಲ್ಲಿ ಹೊಸ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ, ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ನೂತನ ದಾಖಲೆಯೊಂದಿಗೆ ಚಿನ್ನದ ಪದಕ, ಒಡಿಶಾದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರಿಡಾಕೂಟದಲ್ಲಿ ಕಂಚಿನ ಪದಕ, ಚೆನ್ನೈನಲ್ಲಿ ನಡೆದ ಇಂಡಿಯನ್ ಗ್ರಾಂಡ್ಪ್ರಿಕ್ಸ್ನಲ್ಲಿ ಚಿನ್ನದ ಪದಕ, ಹರ್ಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕವನ್ನು ಗಳಿಸಿಕೊಂಡಿದ್ದರು. ನೇಮಕಾತಿಯ ನಂತರ ನಡೆದ ಅಖಿಲ ಭಾರತ ರೈಲ್ವೇ ಕ್ರೀಡಾಕೂಟದಲ್ಲಿ ಕಂಚಿನ ಪದಕದ ಸಾಧನೆಯನ್ನು ಮಾಡಿದ್ದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.
ಕಾಲೇಜಿನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಸಂತೋಷ್ ಕುತ್ತಮೊಟ್ಟೆ, ಡಾ.ಯಶೋಧಾ ರಾಮಚಂದ್ರ, ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ, ಎಂಬಿಎ ವಿಭಾಗದ ನಿರ್ದೇಶಕ ಡಾ.ರಾಬಿನ್ ಮನೋಹರ್ ಶಿಂಧೆ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಉಪಸ್ಥಿತರಿದ್ದರು