ಸೆ.21: ವಿಜಯಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ನುಳಿಯಾಲು ಜಯರಾಮ್ ರೈರವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ನಿಧನರಾದ “ಜಯಣ್ಣ” ಎಂದೇ ಚಿರಪರಿಚಿತರಾಗಿರುವ ವಿಜಯಾ ಬ್ಯಾಂಕ್‌ ನಿವೃತ್ತ ಮ್ಯಾನೇಜರ್ ಜಯರಾಮ್ ರೈ ನುಳಿಯಾಲುರವರ ಶ್ರದ್ಧಾಂಜಲಿ ಸಭೆಯು ಸೆ.21ರಂದು ಕೊಂಬೆಟ್ಟು ಬಂಟರ ಭವನದಲ್ಲಿ ಮಧ್ಯಾಹ್ನ ಜರಗಲಿದೆ.

ಪುತ್ತೂರಿನ ನುಳಿಯಾಲು ಮನೆತನದಲ್ಲಿ ಅಪ್ಪಯ್ಯ ರೈ ಮತ್ತು ಕಮಲಾ ರೈ ದಂಪತಿ ಪುತ್ರನಾಗಿ ಜನಿಸಿದ ನುಳಿಯಾಲು ಜಯರಾಮ ರೈರವರು ತಮ್ಮ ವಿದ್ಯಾಭ್ಯಾಸವನ್ನು ಆರ್ಲಪದವು ಹಾಗೂ ಬೆಟ್ಟಂಪಾಡಿ, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಿಂದ ಬಿಎ ಪದವಿ, ಬೆಂಗಳೂರಿನಲ್ಲಿ ಎಂ.ಬಿ.ಎ. ಪದವಿಯನ್ನು ಪೂರೈಸಿರುತ್ತಾರೆ.

1976ರ ಜನವರಿಯಲ್ಲಿ ವಿಜಯಾ ಬ್ಯಾಂಕ್ ಕೆ.ಜಿ.ರೋಡ್ ಶಾಖೆಯಲ್ಲಿ ಸೇವೆ ಪ್ರಾರಂಭಿಸಿ ಬಳಿಕ ಅಮೃತಸರ, ಸಕಲೇಶಪುರ, ಹಾಸನ, ಮುಂಬೈ, ನೀವರ್ಗಿ (ಬಿಜಾಪುರ), ಗೌಹಾಟಿ, ಪುತ್ತೂರು ದರ್ಬೆ ಮತ್ತು ಸುಳ್ಯ ಸೇರಿ ಅನೇಕ ಸ್ಥಳಗಳಲ್ಲಿ ಸೇವೆ ಸಲ್ಲಿಸಿ, ಜಬ್ಬಲ್ಪುರ(ಮಧ್ಯಪ್ರದೇಶ)ದಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ವರ್ಗಾವಣೆಯಾಗಿ 2009ರಲ್ಲಿ ಸ್ವಯಂ ನಿವೃತ್ತಿ ಪಡೆದು ನಿವೃತ್ತರಾದರು. ನಿವೃತ್ತಿ ಬಳಿಕ ಪುತ್ತೂರು(ಸಂಪ್ಯ)ದಲ್ಲಿ ಕೃಷಿ ಕ್ಷೇತ್ರವನ್ನು ಆರಂಭಿಸಿ ಪತ್ನಿ ಶ್ರೀಮತಿ ಗಾಯತ್ರಿಯವರೊಂದಿಗೆ ‘ನುಳಿಯಾಲು ಫಾರ್ಮ್ಸ್’ ಸ್ಥಾಪಿಸಿ ಅಡಿಕೆ, ಕಾಳು ಮೆಣಸು, ತೆಂಗಿನಕಾಯಿ ಸಮೃದ್ಧಿಯಾಗಿಸಿ ಬೆಳೆಸಿದರು ಮಾತ್ರವಲ್ಲ ಕೃಷಿಯ ಕುರಿತ ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿರುತ್ತಾರೆ. 2013–14ರಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ನ  ಅಧ್ಯಕ್ಷರಾಗಿ ಗೌರವಯುತ ಪಿ.ಎಚ್.ಎಫ್ ಪದವಿಗೆ ಭಾಜನ, ಪಾಲಿಂಜೆ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪ್ರಥಮ ಅಧ್ಯಕ್ಷರಾಗಿ, ಬಂಟಸಿರಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಶ್ರೀ ರಾಮಕೃಷ್ಣ ಕ್ರೆಡಿಟ್ ಸಹಕಾರಿ ಸೊಸೈಟಿ ಲಿಮಿಟೆಡ್ ಪುತ್ತೂರು ಇದರ ಸಲಹೆಗಾರರಾಗಿ, ನುಳಿಯಾಲು ತರವಾಡು ಬಾರಿಕೆ ಟ್ರಸ್ಟ್‌ನ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.

ಅಗಲಿದ ಜಯರಾಮ ರೈ ನುಳಿಯಾಲುರವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವಂತೆ ಶ್ರದ್ಧಾಂಜಲಿ ಸಭೆಗೆ ಹಾಗೂ ವೈಕುಂಠ ಸಮಾರಾಧನೆಗೆ ಹಾಜರಾಗಬೇಕಾಗಿ ಮೃತರ ಪುತ್ರ ಹರ್ಷಿತ್ ರೈ, ಸೊಸೆ ದೀಪಾಲಿ ರೈ, ಮೊಮ್ಮಗಳು ನವಮಿ ರೈ, ನುಳಿಯಾಲು ಹಾಗೂ ಎಡಮೊಗರುಗುತ್ತು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here