ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಹೊರಠಾಣೆಯ ಬಳಿ ಮಾಡ್ನೂರು ಗ್ರಾಮದ ಸಾರಕರೆ ಬ್ರಿಡ್ಜ್ನಲ್ಲಿ ಅಕ್ರಮವಾಗಿ ಗೂಡ್ಸ್ ಲಾರಿಯಲ್ಲಿ ಕೆಂಪು ಕಲ್ಲು ಸಾಗಾಟ ಮಾಡಿದ ಕುರಿತು ಪ್ರಕರಣ ಎದುರಿಸುತ್ತಿರುವ ಇಬ್ಬರು ಆರೋಪಿಗಳಿಗೆ ಪುತ್ತೂರು 5ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸೆ.6ರಂದು ಮಾಡನ್ನೂರು ಗ್ರಾಮದ ಡೆಂಬಾಳೆ ಸಾರಕರೆ ಬ್ರಿಡ್ಜ್ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ಸಂದರ್ಭ ಕೇರಳದ ಮಿಂಚಿಪದವಿನಿಂದ ಗೂಡ್ಸ್ ಲಾರಿಯಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿರುವ ಬಗ್ಗೆ ಸಂಶಯದ ಮೇರೆಗೆ ಲಾರಿಯನ್ನು ಪರಿಶೀಲನೆ ಮಾಡಿದಾಗ ದಾಖಲೆಗಳು ಮೇಲ್ನೋಟಕ್ಕೆ ನಕಲಿ ಎಂದು ಕಂಡು ಬಂದಿದ್ದು ಲಾರಿ ಮತ್ತು ಸೊತ್ತುಗಳನ್ನು ಪೊಲೀಸರ ವಶಕ್ಕೆ ಪಡೆದು ಕೊಂಡಿದ್ದರು.
ಘಟನೆಯಲ್ಲಿ ಲಾರಿ ಚಾಲಕ ಹಾವೇರಿ ತಾಲೂಕಿನ ಸವಣೂರು ಗ್ರಾಮದ ಪರಮೇಶಪ್ಪ ಡಿ ಲಮಾಣಿ (42ವ) ಮತ್ತು ಮಾಲಕ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರ್ ನಿವಾಸಿ ಪ್ರಕಾಶ್(54ವ.) ಅವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ವಕೀಲರಾದ ಅರಿಯಡ್ಕ ಉದಯಶಂಕರ ಶೆಟ್ಟಿ, ಕೃಷ್ಣವೇಣಿ, ರಾಕೇಶ್ ಮಸ್ಕರೇನ್ಹಸ್, ಸಂಧ್ಯಾಲತಾ ವಾದಿಸಿದ್ದರು.