ಪುತ್ತೂರು: ರಸ್ತೆ ಅಭಿವೃದ್ಧಿಯ ಕುರಿತು ಮನವಿ ನೀಡಲು ಹೋದ ವೇಳೆ ಕಾಂಗ್ರೆಸ್ ಪಕ್ಷದ ಶಲ್ಯವನ್ನು ಹಾಕಿ ಫೋಟೋ ತೆಗೆದು ಪತ್ರಿಕೆಗೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಎಂದು ಬಿಂಬಿಸಿದ್ದಾರೆ ಹೊರತು ನಾವು ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ ಎಂದು ಒಳಮೊಗ್ರು ಗ್ರಾಮದ ಮುಡಾಲಮೂಲೆಯ ಬಿಜೆಪಿ ಕಾರ್ಯಕರ್ತರು ಸೆ.20ರಂದು ಸಂಜೆ ಬಿಜೆಪಿ ಕಚೇರಿಗೆ ಆಗಮಿಸಿ ಮಾಜಿ ಶಾಸಕ ಸಂಜೀವ ಮಠಂದೂರುರವರಲ್ಲಿ ವಿಷಯ ತಿಳಿಸಿ ನಾವು ಎಂದೆಂದೂ ಬಿಜೆಪಿಗರೇ ಎಂದು ಸ್ಪಷ್ಟಪಡಿಸಿದ್ದಾರೆ.
ಒಳಮೊಗ್ರು ಗ್ರಾಮದ ಮುಡಾಲಮೂಲೆ ಬಿಜೆಪಿ ಕಾರ್ಯಕರ್ತರಾದ ಬಾಳಪ್ಪ ನಾಯ್ಕ ಮುಡಾಲಮೂಲೆ, ಜಯಂತಿ ಮುಡಾಲಮೂಲೆ, ದೇವಪ್ಪ ನಾಯ್ಕ ಮುಡಾಲಮೂಲೆ, ಜಯಂತಿ ಮುಡಾಲಮೂಲೆ, ಶಿವಪ್ಪ ನಾಯ್ಕ ಮುಡಾಲಮೂಲೆ, ಶಿವಪ್ಪ ನಾಯ್ಕ ಎಂ. ಮುಡಾಲಮೂಲೆ, ವೇದಾವತಿ, ಗಾಯತ್ರಿ ಅವರು ಒಳಮೊಗ್ರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಆಗಮಿಸಲಿದ್ದಾರೆ ಎನ್ನುವ ಮಾಹಿತಿ ದೊರೆತು ಒಳಮೊಗ್ರು ಗ್ರಾಮದ ಮುಡಾಲಮೂಲೆ ಎಂಬಲ್ಲಿ ನಾವೆಲ್ಲ ಮನವಿ ನೀಡಲು ಹೋಗಿದ್ದೆವು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ನಮ್ಮನ್ನು ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡುವ ಸಲುವಾಗಿ ಕಾಂಗ್ರೆಸ್ ಪಕ್ಷದ ಶಲ್ಯವನ್ನು ಹಾಕಿ ಫೋಟೋ ತೆಗೆದು ಪತ್ರಿಕೆಗೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಎಂಬ ತಡೆಬರಹದಡಿ ವರದಿಯನ್ನು ನೀಡಿದ್ದಾರೆ. ನಾವು ಇದುವರೆಗೂ ಬಿಜೆಪಿ, ಮುಂದೆಯೂ ಬಿಜೆಪಿ ಎಂದು ಪಕ್ಷದ ಕಚೇರಿಯಲ್ಲಿ ಹೇಳಿದರು. ಈ ಸಂದರ್ಭ ಮಾಜಿ ಶಾಸಕರು ಅವರೆಲ್ಲರಿಗೂ ಮತ್ತೊಮ್ಮೆ ಬಿಜೆಪಿ ಶಲ್ಯ ತೊಡಿಸಿ ಗೌರವಿಸಿದರು.
ಚುನಾವಣೆಯಲ್ಲಿ ಗೆದ್ದ ಬಳಿಕ ರಾಜಧರ್ಮ ಪಾಲಿಸಬೇಕು:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಹಿಂದುತ್ವ ರಾಜಕೀಯ ಮತ್ತು ಧಾರ್ಮಿಕ ಕಾರ್ಯ ಮಾಡುವಾಗ ಸಂಸ್ಕೃತಿಯನ್ನು ಮುಂದಿಟ್ಟು ಮಾಡುತ್ತೇವೆ. ರಾಜಕಾರಣ ಅಂದ ಮೇಲೆ ಅಭಿವೃದ್ಧಿ ಕೂಡಾ ಆಗಬೇಕು. ಚುನಾವಣೆಯಲ್ಲಿ ಗೆದ್ದ ಬಳಿಕ ರಾಜಧರ್ಮ ಪಾಲಿಸಬೇಕು. ಶಾಸಕರಾದರೆ ಅವರು ಎಲ್ಲರಿಗೂ ಶಾಸಕರು. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಯಾದವರು ಕಾಂಗ್ರೆಸ್, ಬಿಜೆಪಿ ನೋಡದೆ ಕೆಲಸ ಮಾಡಬೇಕು. ರಾಜಧರ್ಮ ಪಾಲನೆಯಾಗದಿದ್ದಾಗ ಸಮಸ್ಯೆ ಉದ್ಭವವಾಗುತ್ತದೆ. ಊರಿನ ಅಭಿವೃದ್ಧಿಗೆ ಯಾರ ಕಿಸೆಯಿಂದಲೂ ಹಣ ಕೊಡುವುದಿಲ್ಲ. ಹಾಗಾಗಿ ಶಾಸಕರು ರಾಜಧರ್ಮ ಪಾಲಿಸಲಿ ಎಂದರು.
ಶಾಸಕರಿಂದ ಅಮಾಯಕ ಜನರಿಗೆ ವಂಚನೆ:
ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಹರೀಶ್ ಬಿಜತ್ರೆ ಮಾತನಾಡಿ ಶಾಸಕರ ಬಳಿ ಸಮಸ್ಯೆಗಳು ಹೇಳಿಕೊಂಡು ಹೋಗುವುದು ಸಹಜ. ಆದರೆ ಅಮಾಯಕ ಜನರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡುವುದು ಮತ್ತು ಸುಳ್ಳು ಹೇಳಿಕೊಂಡು ಜನರನ್ನು ವಂಚಿಸುವ ಕಾರ್ಯದಲ್ಲಿ ಪುತ್ತೂರಿನ ಶಾಸಕರು ತೊಡಗಿಸಿಕೊಂಡಿದ್ದಾರೆ. ಅವರು ರಸ್ತೆಯ ಗುಂಡಿ ಮುಚ್ಚುವ ಕೆಲಸ ಮಾಡುವುದು ಬಿಟ್ಟು ಅಮಾಯಕ ಜನರನ್ನು ಕಾಂಗ್ರೆಸ್ ಸೇರ್ಪಡೆ ಮಾಡುತ್ತಿದ್ದಾರೆ. ಇದು ಶಾಸಕರಿಗೆ ನಾಚಿಗೇಡಿನ ಸಂಗತಿ. ಶಾಸಕರೇ ಅಧರ್ಮದ ರಾಜಕಾರಣ ಮಾಡಬೇಡಿ. ಬಿಜೆಪಿಯ ಪರಿಶಿಷ್ಟ ಪಂಗಡದಲ್ಲಿ ಇರುವ ಮರಾಟಿ ಸಮಾಜದವರ ರಕ್ತದಲ್ಲಿಯೇ ಹಿಂದುತ್ವದ ರಕ್ತ ಹರಿಯುತ್ತಿದೆ ಎಂದರು.
ಜನಪ್ರತಿನಿಧಿಗೆ ಶೋಭೆಯಲ್ಲ:
ಒಳಮೊಗ್ರು ಶಕ್ತಿ ಕೇಂದ್ರದ ಪ್ರಮುಖ್ ಮಹೇಶ್ ಕೇರಿ ಮಾತನಾಡಿ ನಮ್ಮ ಬೂತ್ನ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಕುರಿತು ಪತ್ರಿಕೆಯಲ್ಲಿ ಬಂದಿತ್ತು. 162ನೇ ಬೂತ್ನಲ್ಲಿ ಒಂದಷ್ಟು ರಸ್ತೆ ಸಮಸ್ಯೆಗಳಿದ್ದು, ಆ ಸಮಸ್ಯೆಗಳನ್ನು ಒಬ್ಬ ಕ್ಷೇತ್ರದ ಶಾಸಕರಾಗಿರುವ ಅಶೋಕ್ ರೈ ಅವರಿಗೆ ಮನವಿ ಕೊಡಲು ಆ ಭಾಗದ ಮತದಾರರು ಹೋಗಿದ್ದರು. ಆ ಸಂದರ್ಭದಲ್ಲಿ ಓರ್ವ ಜನಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ಧಿ ಮಾಡಬೇಕಾದ ಕರ್ತವ್ಯ ಇರುವ ಶಾಸಕರು ಮನವಿ ನೀಡಲು ಬಂದವರಿಗೆ ಕಾಂಗ್ರೆಸ್ನ ಶಲ್ಯ ಹಾಕಿ ಮರುದಿನ ಪತ್ರಿಕೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆ ಅನ್ನುವ ತಲೆಬರಹದಡಿ ವರದಿ ಪ್ರಕಟಿಸಲಾಯಿತು. ಒಬ್ಬ ಜನಪ್ರತಿನಿಧಿಯಾಗಿರುವವರಿಗೆ ಇದು ಶೋಭೆಯಲ್ಲ. ರಾಜಧರ್ಮ ಪಾಲನೆ ಮಾಡುವುದು ಒಬ್ಬ ಜವಾಬ್ದಾರ ಜನಪ್ರತಿನಿಽಯ ಕರ್ತವ್ಯ. ಅಭಿವೃದ್ದಿಯಲ್ಲಿ ರಾಜಕಾರಣ ಮಾಡಬಾರದು ಎಂದು ಶಾಸಕರು ಹೇಳುತ್ತಾರೆ. ಆದರೆ ಅವರೇ ಅದನ್ನು ತಳ್ಳಿ ಹಾಕಿದಂತಾಗಿದೆ ಎಂದರು.
ಸಭೆಯಲ್ಲಿ ದೀಕ್ಷಿತ್, ಬೂತ್ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಬೊಳ್ಳಾಡಿ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಶ್ರೀನಿವಾಸ ನಾಯ್ಕ ಮುಡಾಲ ಜೊತೆಯಲ್ಲಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ. ಬಿ ಶಿವಕುಮಾರ್, ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಯತೀಂದ್ರ ಕೊಚ್ಚಿ, ವಿದ್ಯಾಧರ್ ಜೈನ್, ದಕ್ಷಿಣ ಕನ್ನಡ ಜಿಲ್ಲಾ ಟೆಲಿಕಾಂ ಸಲಹಾ ಮಂಡಳಿ ಸದಸ್ಯ ನಿತೀಶ್ ಕುಮಾರ್ ಶಾಂತಿವನ, ನೆಟ್ಟಣಿಗೆ ಮುಡ್ನೂರು ಮಹಾಶಕ್ತಿಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಒಳಮೊಗ್ರು ಶಕ್ತಿಕೇಂದ್ರ ಪ್ರಮುಖ್ ಮಹೇಶ್ ರೈ ಕೇರಿ, ಬೂತ್ ಸಮಿತಿ ಮಾಜಿ ಅಧ್ಯಕ್ಷ ಪ್ರವೀಣ್ ಪಲ್ಲತ್ತಾರು ಉಪಸ್ಥಿತರಿದ್ದರು.