ಪ್ರಥಮಂ ಶೈಲಪುತ್ರೀತಿ ದ್ವಿತೀಯಂ ಬ್ರಹ್ಮಚಾರಿಣಿ ।
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ॥
ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನಿ ತಥಾ ।
ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿಚಾಷ್ಟಮಮ್ ॥ ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ । ಉಕ್ತಾನ್ಯೇತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ ॥
ದೇವಿಯ ಆರಾಧನೆಗೆಂದೇ ಪ್ರಸಿದ್ದವಾದ ಆಶ್ವಯುಜ ಮಾಸದಲ್ಲಾಚರಿಸುವ ಶಾರದೀಯ ನವರಾತ್ರಿ ಅಥವಾ ಶರನ್ನವರಾತ್ರಿಯ ಬಗ್ಗೆ ತಿಳಿಯೋಣ.
ಸಂಪೂರ್ಣ ವರ್ಷದಲ್ಲಿ 5/6 ನವರಾತ್ರಿಗಳನ್ನು ಆಚರಿಸಲಾಗುತ್ತದೆ. ಕೆಲವು ದೇವೀ ಉಪಾಸನೆಯ ಸಾಧಕರಿಗಾಗಿ ಇರುವ ಗುಪ್ತ ನವರಾತ್ರಿಗಳಾದರೆ ಉಳಿದೆರಡು ಸಂಪೂರ್ಣ ಭಾರತದಲ್ಲಿ ಸಹಜವಾಗಿ ಆದರೆ ಪ್ರಮುಖವಾಗಿ ಆಚರಿಸುವ ಚೈತ್ರ ನವರಾತ್ರಿ ಹಾಗೂ ಶರನ್ನವರಾತ್ರಿ.
ಈ ಶರನ್ನವರಾತ್ರಿ ನಮ್ಮ ಸಂಪೂರ್ಣ ಭಾರತದಾದ್ಯಂತ ವಿವಿಧತೆಯಲ್ಲಿನ ಏಕತೆಯ ಕುರುಹಾಗಿ ನಾಲ್ಕೂ ದಿಕ್ಕುಗಳಲ್ಲಿ ವಿಭಿನ್ನವಾಗಿ ಆಚರಿಸುವುದು ನಿಜಕ್ಕೂ ಸಂಭ್ರಮದ ವಿಚಾರ. ದೇಶವಾಸಿಗಳೆಲ್ಲರೂ ಒಂದು ಹಬ್ಬವನ್ನು ಹೀಗೆ ಆಚರಿಸುವಿಕೆಯೇ ನಮ್ಮೊಳಗಿನ ದೈವೀ ಶಕ್ತಿಯನ್ನು ಜಾಗೃತಗೊಳಿಸುವುದು ನಮ್ಮ ಧಾರ್ಮಿಕ ಮನೋಭಾವನೆಯಿಂದಲಷ್ಟೇ ಸಾಧ್ಯವೆಂದರೆ ತಪ್ಪಾಗದು.
ಉತ್ತರ ಭಾರತದಲ್ಲಿ ಒಂಭತ್ತೂ ದಿನಗಳು ಸಾರ್ವಜನಿಕವಾಗಿ ಶ್ರೀ ರಾಮನ ಲೀಲೆಯನ್ನು ವಿವರಿಸುವ ರೂಪಕಗಳನ್ನು ತೋರಿಸುತ್ತಾ, ಮನೆಗಳಲ್ಲಿ ತಾಯಿ ದುರ್ಗೆಯನ್ನು ಪೂಜಿಸುತ್ತಾ, ಕಂಜಕ್ ಪೂಜನ್(ಕುಮಾರಿ ಪೂಜೆ)ಯನ್ನು ಶ್ರದ್ಧೆಯಿಂದ ಆಚರಿಸಿ ಹತ್ತನೆಯ ದಿನವಾದ ದಶಮಿಯಂದು ಸಾಮಾಪ್ತಿಗೊಳಿಸುತ್ತಾರೆ. ಹಿಮಾಚಲ ಪ್ರದೇಶದ ಕುಲ್ಲುವಿನ ನವರಾತ್ರಿ ಅತ್ಯಂತ ವಿಭಿನ್ನ ಹಾಗೂ ವಿಶೇಷ. ಶ್ರೀ ರಾಮನ ಆಗಮನದ ಕಾರಣವಾಗಿ ದಶಮಿಯ ತರುವಾಯ ನವರಾತ್ರಿ ಆಚರಿಸಲಾಗುತ್ತದೆ.
ಪಶ್ಚಿಮ ಭಾರತದ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ ,ರಾಜಸ್ಥಾನ ದಲ್ಲಿ ರಾತ್ರಿಯಿಡೀ ದಾಂಡಿಯಾ, ಗರ್ಭಾದಂತಹ ನೃತ್ಯದ ಮೂಲಕ ದೇವೀ ಶಕ್ತಿಯನ್ನು ಜಾಗೃತಗೊಳಿಸುತ್ತಾ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
ಪೂರ್ವ ಭಾರತದ ಅಸ್ಸಾಂ, ಒಡಿಸ್ಸಾ, ಪಶ್ಚಿಮ ಬಂಗಾಳದಲ್ಲಿ ದೊಡ್ಡ ದೊಡ್ಡ ಪೆಂಡಾಲ್ ಗಳನ್ನು ಹಾಕಿ ದೇವಿ ದುರ್ಗೆಯ ವಿವಿದ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಜನೆ,ಸಂಗೀತಗಳೊಂದಿಗೆ ಒಂಭತ್ತೂ ದಿನವೂ ಭಕ್ತಿಯಿಂದ ಪೂಜಿಸಿ ಹತ್ತನೆಯ ದಿನ ದೇವಿಯ ಮೂರ್ತಿಯ ವಿಸರ್ಜನೆಯೊಂದಿಗೆ ನವರಾತ್ರಿಯನ್ನು ಸಮಾಪ್ತಿಗೊಳಿಸುತ್ತಾರೆ.
ಇನ್ನು ದಕ್ಷಿಣಕ್ಕೆ ಬಂದರೆ ಕರ್ನಾಟಕದ ಗೋಲು ಅಥವಾ ಗೊಂಬೆ ನವರಾತ್ರಿ ಬಹಳ ಮನಮೋಹಕವಾದುದು. ಕರ್ನಾಟಕದ ಬಹು ಭಾಗಗಳಲ್ಲಿ ಮನೆ ಮನೆಯಲ್ಲೂ ಗೊಂಬೆಗಳನ್ನು ಕೂರಿಸಿ, ದೇವೀ ಭಾಗವತದ ಕಥೆಗಳನ್ನು ಸಾರುತ್ತಾ ಕಲಶದಲ್ಲಿ ತಾಯಿ ಚಾಮುಂಡಿಯನ್ನು ಆವಾಹಿಸಿ ಆರಾಧಿಸುವ ರೀತಿಯೇ ಬಹಳ ವಿಶೇಷವಾದುದು. ಹಲವರು ಒಂಭತ್ತೂ ದಿನವೂ ಗೊಂಬೆ ನವರಾತ್ರಿ ಆಚರಿಸಿದರೆ ಕೆಲವರು ಕೊನೆಯ ಮೂರು ದಿನದ ನವರಾತ್ರಿಯ ಆಚರಣೆಯನ್ನು ನಡೆಸುತ್ತಾರೆ. ಮೈಸೂರಿನ ರಾಜಮನೆತನದವರ ನವರಾತ್ರಿ, ಕರಾವಳಿಯ ನವರಾತ್ರಿ, ಕೊಡಗಿನ ನವರಾತ್ರಿಯೂ ವಿಶೇಷವಾದುದು.
ಕೇರಳದಲ್ಲಿ ಆಯುಧಪೂಜೆಯೆಂದೇ ಕರೆಯಲ್ಪಡುವ ನವರಾತ್ರಿಯು ದೇವಿ ಸರಸ್ವತಿಯ ಪೂಜೆ, ಆರಾಧನೆಗಾಗಿ ಮೀಸಲು. ಸರಸ್ವತಿಯ ಪೂಜೆಯಂದು ಮಕ್ಕಳಿಗೆ ವಿದ್ಯಾರಂಭದ ಸಂಸ್ಕಾರವೂ ನಡೆಯುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ, ನವರಾತ್ರಿಯನ್ನು ಬಟುಕಮ್ಮ ಎಂದು ಆಚರಿಸಲಾಗುತ್ತದೆ.ಇದು ಪ್ರಕೃತಿಯ ಜೀವ ನೀಡುವ ಶಕ್ತಿಯನ್ನು ಸಂಕೇತಿಸುವ ಗೌರಿ ದೇವಿಗೆ ಅರ್ಪಿಸಲಾದ ಹೂವುಗಳ ವಿಶಿಷ್ಟ ಹಬ್ಬವಾಗಿದೆ.
ವಂದೇ ವಾಂಛಿತ ಲಾಭಾಯ ಚಂದ್ರಾರ್ಧಕೃತಶೇಖರಂ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ।
ವೃಷಭ ವಾಹನೆ ಬಲಹಸ್ತದಲ್ಲಿ ತ್ರಿಶೂಲ ಎಡ ಹಸ್ತದಲ್ಲಿ ಕಮಲ ಪುಷ್ಪದಿಂದ ಶೋಭಿತಳಾಗಿರುವ ಶೈಲಪುತ್ರಿ ದುರ್ಗೆಯನ್ನು ಮೂಲಾಧಾರ ಚಕ್ರದಲ್ಲಿ ಆರಾಧಕರು ನೆಲೆಗೊಳಿಸುತ್ತಾರೆ .ಇಲ್ಲಿಂದಲೇ ಯೋಗ ಸಾಧನೆಯ ಆರಂಭ. ಜಗನ್ಮಾತೆಗೊಂದಿಸುತ್ತಾ ಈ ನವರಾತ್ರಿಯಲ್ಲಿ ತಾಯಿಯನ್ನು ಆರಾಧಿಸಿ ದೇವಿಯ ಕೃಪೆಗೆ ಪಾತ್ರರಾಗೋಣ.
ಸರ್ವರಿಗೂ ಶರನ್ನವರಾತ್ರಿಯ ಶುಭಾಶಯಗಳು..
✍️ ಸುಚಿತ್ರಾ ಸುದರ್ಶನ್