ರೂ 2,81,526.73 ನಿವ್ವಳ ಲಾಭ, ಲೀಟರ್‌ಗೆ 59 ಪೈಸೆ ಬೋನಸ್, ಶೇ 25 ಡಿವಿಡೆಂಡ್
ಕಾಣಿಯೂರು: ಕುದ್ಮಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷೆ ಗೌರಿ ಕೆ.ಎಸ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ಸೆ.23ರಂದು ನಡೆಯಿತು.
ವರದಿ ವಾಚಿಸಿದ ಸಂಘದ ಕಾರ್ಯದರ್ಶಿ ಸೇಸಮ್ಮರವರು, 2024-25ನೇ ಸಾಲಿನಲ್ಲಿ ಸಂಘವು 3,84,89,723.16 ವ್ಯವಹಾರ ನಡೆಸಿದ್ದು, 81,47,421.74 ರೂಪಾಯಿಯ ಹಾಲು ಖರೀದಿಸಿ ಉತ್ಪಾದಕರಿಗೆ ಪಾವತಿಸಲಾಗಿದೆ. 84,41,153.68 ರೂಪಾಯಿಯ ಹಾಲನ್ನು ದ.ಕ ಒಕ್ಕೂಟಕ್ಕೂ, 4,57,919.20 ಪೈಸೆಯ ಹಾಲನ್ನು ಸ್ಥಳೀಯವಾಗಿಯೂ, 52,421.00 ರೂಪಾಯಿ ಮಾದರಿ ಹಾಲು ಮತ್ತು 25,15,555.00 ರೂಪಾಯಿಯ ಪಶು ಆಹಾರ ಮತ್ತು 83,765.00 ಮತ್ತು 76,245.00 ರೂಪಾಯಿಯ ಸೈಲೇಜ್ ಪಶು ಆಹಾರ ಮತ್ತು 21,250.00 ರೂಪಾಯಿಯ ಸಮೃದ್ಧಿ ಲವಣ ಮಿಶ್ರಣದಿಂದ ಮಾರಾಟ ಆಗಿ ಒಟ್ಟು ಲಾಭ 10,08,418.34 ಬಂದಿರುತ್ತದೆ. ಹಾಗೇಯೆ ಸಾದಿಲ್ವಾರು ಖರ್ಚು, ಸಿಬ್ಬಂದಿ ವೇತನ, ಸವಕಳಿ ಹಾಗೂ ಇತರ ಖರ್ಚುಗಳನ್ನು ಹೊರತು ಪಡಿಸಿ, ಸಂಘಕ್ಕೆ 2,81,526.73 ನಿವ್ವಳ ಲಾಭ ಬಂದಿದ್ದು, ಲೀಟರ್ 1ಕ್ಕೆ 59 ಪೈಸೆ ಬೋನಸ್ ಹಾಗೂ ಶೇ 25 ಡಿವಿಡೆಂಡ್ ನೀಡುವುದಾಗಿ ಹೇಳಿದರು.
ಸಂಘದ ಉಪಾಧ್ಯಕ್ಷೆ ವಾರಿಜ ಕೆ, ನಿರ್ದೇಶಕರುಗಳಾದ ಸುಧಾ ಕೆ.ಎಸ್, ಗೀತಾ ಎಸ್, ಶಶಿಕಲಾ ಪಿ, ಕುಸುಮಾವತಿ, ಗೀತಾ ಕೆ, ಸವಿತ, ಜಾನಕಿ ಎ, ವಾಣಿ, ಮೀನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸೇಸಮ್ಮರವರು ವರದಿ ಮಂಡಿಸಿದರು. ಅಧ್ಯಕ್ಷೆ ಗೌರಿ ಕೆ.ಎಸ್ ಪ್ರಾರ್ಥಿಸಿದರು. ನಿರ್ದೇಶಕರಾದ ಸುಧಾ ಕೆ. ಸ್ವಾಗತಿಸಿ, ಶಶಿಕಲಾ ಪಿ ವಂದಿಸಿದರು. ಸಿಬ್ಬಂದಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಪವಿತ್ರಾ, ಭವಾನಿ ಸಹಕರಿಸಿದರು. ಸಂಘದ ಸದಸ್ಯರಾದ ಪುಷ್ಪಲತಾ ಬರೆಪ್ಪಾಡಿ ಮಾತನಾಡಿ, ಸಂಘವು 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸಂಘವು ‘ಎ’ ಗ್ರೇಡ್ ಬರಬೇಕಿತ್ತು. ಮುಂದಿನ ವರ್ಷ ‘ಎ’ ಗ್ರೇಡ್ ಸಂಘವಾಗಿ ಮೂಡಿಬರಬೇಕು ಎಂದರು.
ಸದಸ್ಯೆ ಹರಿಣಾಕ್ಷಿ ಬನಾರಿ ಮಾತನಾಡಿ, ಬೆಳಂದೂರಿನಲ್ಲಿ ಹಾಲಿನ ಖರೀದಿ ಕೇಂದ್ರ ಮಾಡುವಂತೆ ಸಲಹೆ ನೀಡಿದರು. ಸದಸ್ಯೆ ಕುಸುಮಾವತಿ ಮಾತನಾಡಿ, ಒಕ್ಕೂಟದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳ ಮಾಹಿತಿಯನ್ನು ಸಂಘದ ಸದಸ್ಯರುಗಳಿಗೆ ನೀಡಬೇಕು ಎಂದರು. ಸದಸ್ಯೆ ಶಶಿಕಲಾ ಮಾತಮಾಡಿ, ಸಂಘದಲ್ಲಿ ಸದಸ್ಯರು ತುಂಬಾ ಮಂದಿ ಇದ್ದಾರೆ, ಆದರೆ ಹಾಲಿನ ಸಂಗ್ರಹ ಅತೀ ಕಡಿಮೆ ಇದೆ. ಈ ನಿಟ್ಟಿನಲ್ಲಿ ಪ್ರತಿ ಸದಸ್ಯರ ಮನೆ ಮನೆ ಭೇಟಿ ನೀಡಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಕೆಲಸ ಸಂಘದಿಂದ ಮಾಡಬೇಕು ಎಂದರು.
ಹೈನುಗಾರಿಕೆಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಬೇಕು- ಡಾ| ಸತೀಶ್ ರಾವ್:
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಡಾ| ಸತೀಶ್ ರಾವ್ ಮಾತನಾಡಿ, 25 ವರ್ಷದ ಇತಿಹಾಸವಿರುವ ಕುದ್ಮಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಸಂಘಕ್ಕೆ ಸದಸ್ಯರು ಗುಣಮಟ್ಟದ ಹಾಲನ್ನು ಪೂರೈಸುವುದರ ಮೂಲಕ ಸಂಘ ಅಭಿವೃದ್ಧಿಯಾಗಲು ಸಾಧ್ಯವಿದೆ. ಒಕ್ಕೂಟದಿಂದ ಸಿಗುವಂತಹ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಹೈನುಗಾರಿಕೆಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಬೇಕು ಎಂದರು. ಸಂಘಕ್ಕೆ ಹಾಲು ಪೂರೈಸುವ ಎಲ್ಲಾ ಮಾಹಿತಿಗಳನ್ನು ಸಾಫ್ಟ್ ವೇರ್ ಮೂಲಕ ಸದಸ್ಯರ ಮೊಬೈಲ್‌ಗೆ ಸಂದೇಶ ಕಳುಹಿಸಲಾಗುತ್ತಿದ್ದು, ಇನ್ನು ಮುಂದೆ ಚೀಟಿಯನ್ನು ನೀಡಲಾಗುವುದಿಲ್ಲ. ವ್ಯವಹಾರವನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹಾಕಿಕೊಳ್ಳಲಾಗುತ್ತಿದೆ ಎಂದರು.
ಹಾಲಿನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು- ಶ್ರೀದೇವಿ:
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿ ಮಾತನಾಡಿ, ಹೈನುಗಾರರು ಸಂಘದ ಬೆನ್ನೆಲುಬು. ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಒಕ್ಕೂಟದಿಂದ ಸಿಗುವಂತಹ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡಾಗ ಸಂಘವು ಲಾಭದಾಯವಾಗುತ್ತದೆ. ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದರೊಂದಿಗೆ ಸ್ವಚ್ಛ ಹಾಲನ್ನು ಸಂಘಕ್ಕೆ ಪೂರೈಕೆ ಮಾಡಬೇಕು. ಹಾಲಿನ ನಿರ್ವಹಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿಕೊಳ್ಳಬೇಕು ಎಂದರು.
ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ-:
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಂಘದ ಸದಸ್ಯರ ಮಕ್ಕಳಿಗೆ ನೀಡಲ್ಪಡುವ ಪ್ರತಿಭಾ ಪುರಸ್ಕಾರವನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದ ರಕ್ಷಾ ಅಗಳಿ, ದ್ವಿತೀಯ ಸ್ಥಾನದ ಪಡೆದ ತನ್ವಿತಾ ಡೆಬ್ಬೇಲಿ, ತೃತೀಯ ಸ್ಥಾನ ಪಡೆದ ದೀಪ್ತಿ ಏರ್ಕಮೆ ಮತ್ತು ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವರ್ಷಾ ಪಿ.ವಿ, ದ್ವಿತೀಯ ಸ್ಥಾನ ಪಡೆದ ತರುಣ್ ಕುಮಾರ್ ಏರ್ಕಮೆ, ತೃತೀಯ ಸ್ಥಾನ ಪಡೆದ ಯಶ್ವಿತಾ ಡೆಬ್ಬೇಲಿ ಇವರಿಗೆ ವಿತರಿಸಲಾಯಿತು.
ಅತೀ ಹೆಚ್ಚು ಸಂಘಕ್ಕೆ ಹಾಲು ಪೂರೈಸಿದವರಿಗೆ ಬಹುಮಾನ: 2024-25ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಸದಸ್ಯರಾದ ಪವಿತ್ರಾ ಕೆ, ಗೀತಾ ಕೆ, ಮಾಲಿನಿ ಇವರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಅಭಿವೃದ್ದಿಯಲ್ಲಿ ಎಲ್ಲರ ಸಹಕಾರ ಅಗತ್ಯ- ಗೌರಿ ಕೆ.ಎಸ್
ಕುದ್ಮಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಗೌರಿ ಕೆ.ಎಸ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಕ್ಕೆ ಸದಸ್ಯರಿಂದ ಉತ್ತಮ ಸಹಕಾರ, ಗುಣಮಟ್ಟದ ಹಾಲು ಪೂರೈಕೆಯಿಂದ ಸಂಘದ ಅಭೂತಪೂರ್ವ ಸಾಧನೆಗೆ ಕಾರಣವಾಗುತ್ತದೆ. ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಕೆ ಮಾಡಿದಾಗ ಸಂಸ್ಥೆಯು ಮತ್ತಷ್ಟು ಲಾಭಗಳಿಸಲು ಸಾಧ್ಯ. ಮುಂದಿನ ದಿನಗಳಲ್ಲಿ ಮನೆ ಮನೆಗೆ ಪಶು ಆಹಾರ ಸರಬರಾಜು ಮಾಡುವ ಉದ್ದೇಶವನ್ನು ಸಂಘ ಇಟ್ಟುಕೊಂಡಿದ್ದು, ಸಂಘದ ಅಭಿವೃದ್ದಿಯಲ್ಲಿ ಎಲ್ಲರೂ ಕೈಜೋಡಿಸಬೇಕು. ಸಂಘವು ಈಗಾಗಲೇ 25 ವರ್ಷಗಳನ್ನು ಪೂರೈಸಿ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು, ಜನವರಿ ತಿಂಗಳಿನಲ್ಲಿ ಬೆಳ್ಳಿಹಬ್ಬ ಕಾರ್ಯಕ್ರಮವನ್ನು ನಡೆಸಲಿದ್ದೇವೆ. ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು.