ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಘೋಷಣೆ
ಪುತ್ತೂರು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಮಾಡುವ 2024ನೇ ಸಾಲಿನ ಗೌರವ ಪ್ರಶಸ್ತಿಗೆ ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದ, ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್, ಅರೆಭಾಷೆ ಸಂಘಟಕ ಹಾಗೂ ಕೆ.ಎಸ್.ಎಫ್.ಸಿ. ಅಧಿಕಾರಿಯಾಗಿದ್ದ ದಂಬೆಕೋಡಿ ಸುಬ್ರಾಯ ಆನಂದರು ಭಾಜನರಾಗಿದ್ದು, ನ.30ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.
ನ.8 ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.
‘ಅಕಾಡೆಮಿಯಿಂದ ನೀಡಲಾಗುವ ಗೌರವ ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ’ ಎಂದವರು ಹೇಳಿದರು. ‘ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಐನ್ ಮನೆ ಕುರಿತ ಅರೆಭಾಷೆ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಇದರೊಂದಿಗೆ ಅರೆಭಾಷಾ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಹಾಗೂ ಅರೆಭಾಷೆ ನಾಟಕ ‘ಅಪ್ಪ’ ಪ್ರದರ್ಶನಗೊಳ್ಳಲಿದೆ’ ಎಂದು ಸದಾನಂದ ಮಾವಜಿ ಹೇಳಿದ್ದಾರೆ.
ಅಕಾಡೆಮಿ ನಿರ್ದೇಶಕರಾದ ಡಾ.ಎನ್.ಎ.ಜ್ಞಾನೇಶ್, ತೇಜಕುಮಾರ್ ಬಡ್ಡಡ್ಕ, ಚಂದ್ರಶೇಖರ ಪೇರಾಲು, ಚಂದ್ರಾವತಿ ಬಡ್ಡಡ್ಕ, ಲೋಕೇಶ್ ಊರುಬೈಲು ಉಪಸ್ಥಿತರಿದ್ದರು.
