ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆ 

0

1,16,020.20 ರೂ, ನಿವ್ವಳ , ಶೇ.8.5% ಡಿವಿಡೆಂಡ್,ಲೀಟರ್‌ಗೆ 44 ಪೈಸೆ ಬೋನಸ್‌

ಪುತ್ತೂರು: ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ 2024-2025ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸೆ.22ರಂದು ಸಂಘದ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಡಿ.ಯವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

 ಸಂಘವು 2024-25ನೇ ಸಾಲಿನಲ್ಲಿ 1,16,020.20 ರೂ, ನಿವ್ವಳ ಲಾಭ ಗಳಿಸಿದ್ದು, ಲಾಭದಲ್ಲಿ ಶೇ.8.5% ಡಿವಿಡೆಂಡ್, ಹಾಲು ಉತ್ಪಾದಕರಿಗೆ ಲೀಟ‌ರ್ ಹಾಲಿಗೆ 44 ಪೈಸೆ ಬೋನಸ್‌ ನೀಡಲಾಗುವುದು ಎಂದು ಸಂಘದ ಅಧ್ಯಕ್ಷರು ಸಭೆಯಲ್ಲಿ ಘೋಷಿಸಿದರು.

ಸಂಘದಲ್ಲಿ ಒಟ್ಟು 397 ಸದಸ್ಯರಿದ್ದು ರೂ.62,470 ಪಾಲು ಬಂಡವಾಳ ಇದ್ದು ವರದಿ ಸಾಲಿನಲ್ಲಿ ಒಟ್ಟು 1,37,225  ಲೀ ಹಾಲು ಸಂಗ್ರಹವಾಗಿದೆ.ಹಾಲು ವ್ಯಾಪಾರದಿಂದ 5,59,066 ರೂ ಆದಾಯಗಳಿಸಿದೆ.ಪಶು ಆಹಾರ ಇತರ ವ್ಯವಹಾರ ಮಾಡಲಾಗಿ ಒಟ್ಟು 5,85,826.50 ಲಾಭಗಳಿಸಿದ್ದು,ಆಡಳಿತಾತ್ಮಕ ವೆಚ್ಚ ಕಳೆದು 1,16,020.20 ನಿವ್ವಳ ಲಾಭಗಳಿಸಿದೆ ಎಂದರು.

ಮುಖ್ಯ ಅತಿಥಿ ದ.ಕ.ಹಾಲು ಒಕ್ಕೂಟದ ನಿರ್ದೇಶಕ ಎಸ್.ಬಿ.ಜಯರಾಮ ರೈ ಮಾತನಾಡಿ, ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ರಾಸು ಖರೀದಿಗೆ ಪ್ರೋತ್ಸಾಹ ನೀಡುತ್ತಿದ್ದು, ವಿಮೆಯನ್ನು ಒಕ್ಕೂಟದ ವತಿಯಿಂದ ಮಾಡಲಾಗುತ್ತದೆ. ಅಲ್ಲದೇ ಹೈನುಗಾರಿಕೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದಲೂ ರಿಯಾಯತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರಕುತ್ತದೆ.ಒಕ್ಕೂಟದ ರೈತರ ಕಲ್ಯಾಣ ಟ್ರಸ್ಟ್ ವತಿಯಿಂದ ಈ ಹಿಂದೆ 5 ವರ್ಷ ಹಾಲು ಹಾಕಿದ ರೈತ ನಿಧನರಾದರೆ ಮಾತ್ರ 50,000 ಸಾಂತ್ವನ ಧನ ನೀಡಲಾಗುತ್ತಿದ್ದು, ಇದೀಗ 1ರಿಂದ 2 ವರ್ಷ ಹಾಲು ಹಾಕಿದವರು ನಿಧನರಾದರೆ 25,000 ಸಾಂತ್ವನ ಧನ ನೀಡಲು ಒಕ್ಕೂಟ ನಿರ್ಧರಿಸಿದೆ ಎಂದರು.

ದ.ಕ.ಜಿಲ್ಲಾ ಹಾಲು ಒಕ್ಕೂಟದಲ್ಲಿ ಪ್ರತಿದಿನ 3.92ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ರಾಜ್ಯದ 3 ಹಾಲು ಒಕ್ಕೂಟಗಳಲ್ಲಿ ಗುಣಮಟ್ಟದ ಹಾಲು ಪೂರೈಕೆಯಲ್ಲಿ ದ.ಕ, ಜಿಲ್ಲಾ ಹಾಲು ಒಕ್ಕೂಟಕ್ಕೆ ಮೊದಲ ಸ್ಥಾನ ಇದೆ ಎಂದರು.

ವಿಸ್ತರಣಾಧಿಕಾರಿ ಮಾಲತಿ ಅವರು ಮಾತನಾಡಿ, ಪ್ರತಿಯೊಬ್ಬರು ತಮ್ಮ ಹಸುವಿನ ದಪ್ಪ ಹಾಲನ್ನೇ ಸಂಘಕ್ಕೆ ಹಾಕಬೇಕು ಅದಕ್ಕೆ ನೀರು ಬೆರೆಸಿ ಹೆಚ್ಚು ಹಾಲು ಮಾಡಿ ಹಾಕಿದರೆ ಹೆಚ್ಚು ಹಣ ಸಿಗುತ್ತದೆ ಎಂದು ತಿಳಿದುಕೊಂಡಿದ್ದರೆ ಅದು ತಪ್ಪು ಗ್ರಹಿಕೆ, ದಪ್ಪ ಹಾಲಿಗೆ ಮಾತ್ರ ಸಂಘ ಹೆಚ್ಚು ಹಣವನ್ನು ಕೊಡುತ್ತದೆ ಎಂದರು. ಒಕ್ಕೂಟದಿಂದ ರೈತರಿಗೆ ಹಸಿರು ಹುಲ್ಲು, ರಬ್ಬರ್ ಮ್ಯಾಟ್, ಹುಲ್ಲು ಕತ್ತರಿಸುವ ಯಂತ್ರ, ಹಟ್ಟಿ ತೊಳೆಯುವ ಯಂತ್ರ ಇತ್ಯಾದಿಗಳಿಗೆ ಒಕ್ಕೂಟದಿಂದ ಸಹಾಯಧನ ದೊರೆಯುತ್ತಿದೆ.

ದಿನಕ್ಕೆ 50 ಲೀಟರ್ ಹಾಲು ಹಾಕುವ ಸದಸ್ಯರಿಗೆ ಸಾಗಾಟ ವೆಚ್ಚ ಪ್ರತೀ ಲೀಟರ್ ಗೆ 50 ಪೈಸೆ ನೀಡಲಾಗುತ್ತದೆ ಇವುಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಯೋಜನೆಗಳ ಬಗ್ಗೆ ವಿವರಿಸಿದರು.

25 ಲೀಟರ್‌ಗೂ ಸಾಗಾಟ ವೆಚ್ಚ ನೀಡಿ
50 ಲೀಟರ್ ಹಾಲು ಹಾಕುವ ಸದಸ್ಯರಿಗೆ ನೀಡುವ 50 ಪೈಸೆ ಸಾಗಾಟ ವೆಚ್ಚವನ್ನು 25 ಲೀಟರ್ ಹಾಕುವವರಿಗೂ ನೀಡುವಂತೆ ಸದಸ್ಯ ಶಿವಪ್ರಸಾದ್ ಮಾಫಲಮಜಲು ಹೇಳಿದರು.

ಸೋಲಾರ್ ಅಳವಡಿಸಿ
ಸಂಘಕ್ಕೆ ಸೋಲಾರ್ ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಮಾಡಬಹುದು ಎಂದು ಗ್ರಾ.ಪಂ.ಉಪಾಧ್ಯಕ್ಷ ಪ್ರಮೋದ್ ಕೆ.ಎಸ್ ಸಲಹೆ ನೀಡಿದರು.

ಹಸಿರು ಮೇವಿನ ತೋಟ ಅನುದಾನ
ಸಂಘದ ಮಾಜಿ ಅಧ್ಯಕ್ಷ ಶ್ರೀಧರ ಪೂಜಾರಿ ಚಾಲೆಪಡ್ಪು ಮಾತನಾಡಿ,ಸಂಘದ ಹಸಿರು ಮೇವಿನ ತೋಟದ ಅಭಿವೃದ್ದಿ ಮಾಡಿದ ಅನುದಾನ ದ.ಕ.ಹಾಲು ಒಕ್ಕೂಟದಿಂದ ಬಂದಿದೇಯಾ ಎಂದು ಕೇಳಿದರು. ಉತ್ತರಿಸಿದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಅವರು,ಅಭಿವೃದ್ಧಿ ಮಾಡಲಾದ ವಿವರಗಳೊಂದಿಗೆ 1 ಲಕ್ಷ ಅನುದಾನಕ್ಕಾಗಿ ಬಿಲ್ ಮಾಡಲಾಗುತ್ತಿದೆ ಎಂದರು.ಶ್ರೀಧರ ಪೂಜಾರಿ ಅವರು ಮಾತನಾಡಿ,ಎಲ್ಲಾ ಕೆಲಸಗಳಿಗೆ ಒಂದೇ ಬಾರಿ ಬಿಲ್ ಮಾಡುವ ಬದಲು ಮೊದಲಿಗೆ ಮಾಡಿದ ಕೆಲಸಕ್ಕಾಗಿ 50,000 ಅನುದಾನ ಪಡೆದುಕೊಂಡ ಬಳಿಕ ಉಳಿಕೆ ಕೆಲಸ ಮಾಡಿ ಬಳಿಕ ಉಳಿದ ಅನುದಾನ ಪಡೆಯುವಂತೆ ಸಲಹೆ ನೀಡಿದರು.

ಶಿವರಾಮ ಭಟ್ ಮಾತನಾಡಿ, ಸಂಘದ ಕಾರ್ಯದರ್ಶಿ ಅವರು ಕಾರ್ಯ ನಿರ್ವಹಣೆಗೆ ಸಮಯ ಎಷ್ಟು ಎಂದು ಪ್ರಶ್ನಿಸಿದರು. ಉತ್ತರಿಸಿದ ಅಧ್ಯಕ್ಷರು ಸಿಬ್ಬಂದಿ ಕಾರ್ಯ ನಿರ್ವಹಣೆಗೆ ಸಮಯದ ಮಿತಿ ನಿಗದಿಯಿಲ್ಲ. ಬೆಳಿಗ್ಗೆ ಮತ್ತು ಸಂಜೆ ಹಾಲು ಖರೀದಿ ಸಮಯ ಹಾಗೂ ಉಳಿದ ಲಭ್ಯ ಸಮಯದಲ್ಲಿ ಅವರು ಸಂಘದ ಇತರ ಕೆಲಸ ನಿರ್ವಹಿಸುತ್ತಾರೆ. ಸಂಘದಿಂದ ಸಿಬ್ಬಂದಿಗಳಿಗೆ ಸಣ್ಣ ಮಟ್ಟಿನ ವೇತನ ನೀಡುತ್ತಿದ್ದು, ಅವರ ಜೀವನ ನಿರ್ವಹಣೆಗೆ ಅವರು ಬೇರೆ ಕೆಲಸ ಮಾಡುತ್ತಾರೆ ಎಂದರು.

ಶಿವರಾಮ ಭಟ್ ಅವರು ಪ್ರತಿಕ್ರಿಯಿಸಿ ರಾತ್ರಿ 9.30ವರೆಗೂ ಅವರು ಕಚೇರಿಯಲ್ಲಿ ಇರುತ್ತಾರೆ. ಬೇಗ ಹೋಗಬಹುದಲ್ವಾ ಎಂದಾಗ ಇತರ ಸದಸ್ಯರು ಸಂಘದಲ್ಲಿ ರಾತ್ರಿ ಹೊತ್ತು ಇದ್ದಷ್ಟೂ ರೈತರಿಗೆ ಅನುಕೂಲವಾಗುತ್ತದೆ. ಪಶು ಆಹಾರ ಪಡೆಯಲು,ಕೃತಕ ಗರ್ಭಧಾರಣೆ ಸೇರಿದಂತೆ ಇತರ ಅವಶ್ಯಕತೆಗಳಿಗನುಗುಣವಾಗಿ ಕಾರ್ಯದರ್ಶಿಯವರು ಸ್ಪಂದಿಸುತ್ತಿದ್ದಾರೆ ಎಂದರು.

ಗ್ರಾ.ಪಂ.ಉಪಾಧ್ಯಕ್ಷ ಪ್ರಮೋದ್ ಕೆ.ಎಸ್.ಮಾತನಾಡಿ, ಸಂಘದ ಕಾರ್ಯದರ್ಶಿಯವರು ಸಾಮಾಜಿಕವಾಗಿಯೂ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಯುವಕ ಮಂಡಲದ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಅವರು ಸಂಘದ ಕೆಲಸ ಮಾಡುವ ನಿಟ್ಟಿನಲ್ಲಿ ರಾತ್ರಿ ಹೊತ್ತು ಇರುತ್ತಾರೆ ಎಂದರು. ಇದರಿಂದ ಯಾರಿಗಾದರೂ ಸಮಸ್ಯೆಯಾಗಿದ್ದಾರೆ ಆಡಳಿತ ಮಂಡಳಿಯ ಗಮನಕ್ಕೆ ತರಬಹುದು ಎಂದರು.

ಉತ್ತರಿಸಿದ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಅವರು, ಈವರೆಗೂ ಕಾರ್ಯದರ್ಶಿಯವರ ಬಗ್ಗೆ ಯಾವುದೇ ದೂರು ಬಂದಿಲ್ಲ. ಅವರ ಲಭ್ಯ ಸಮಯದಲ್ಲಿ ಸಂಘದ ಬೆಳವಣಿಗೆಗೆ ಶ್ರಮವಹಿಸುತ್ತಿದ್ದಾರೆ ಎಂದರು. ಇತರ ಸದಸ್ಯರು ಧನಿಗೂಡಿಸಿದರು.

ಮಾಹಿತಿ ಶಿಬಿರಕ್ಕೆ ಅನುದಾನ ಹೆಚ್ಚಿಸಿ

ಸಂಘದ ವತಿಯಿಂದ ಹೈನುಮಾಹಿತಿ ಶಿಬಿರಕ್ಕೆ ಈ ವರ್ಷದ ಬಜೆಟ್‌ನಲ್ಲಿ 5000 ಇಡಲಾಗಿದ್ದು, ಕಳೆದ ವರ್ಷದ ಬಜೆಟ್‌ನಲ್ಲೂ 5000 ಇಡಲಾಗಿದ್ದು, ಖರ್ಚು 11,406 ಆಗಿದ್ದು, ಇದಕ್ಕಾಗಿ ಬಜೆಟ್‌ನಲ್ಲಿಯೇ ಅನುದಾನ ಹೆಚ್ಚುವರಿ ಇಡಬೇಕು. ಪ್ರತೀ ವರ್ಷ ಬಜೆಟ್ ಮೀರಿದ ವೆಚ್ಚಗಳ ಮಂಜೂರಾತಿಗಾಗಿ ಮಹಾಸಭೆಗೆ ಇಡುವುದೂ ತಪ್ಪುತ್ತದೆ ಎಂದರು. ಈ ಕುರಿತು ಕ್ರಮವಹಿಸುವುದಾಗಿ ಅಧ್ಯಕ್ಷರು ಹೇಳಿದರು.

ಪಾಂಬಾರಿನಲ್ಲಿ ಮಹಿಳಾ ಸಂಘಕ್ಕೆ ಅವಕಾಶ ನೀಡಿ
ಸಂಘದ ಸದಸ್ಯರಾದ ಸಂಧ್ಯಾ ಹಾಗೂ ಇತರರು ಮಾತನಾಡಿ, ಪಾಂಬಾರಿನಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ರಚನೆಗೆ ಅವಕಾಶ ನೀಡಬೇಕು ಎಂದರು.

ಉತ್ತರಿಸಿದ ಅಧ್ಯಕ್ಷರು ಈಗಾಗಲೇ ಅಮಳದಲ್ಲಿ ಹಾಲು ಸಂಗ್ರಹಣಾ ಕೇಂದ್ರವಿದ್ದು, ಹಾಲು ಖರೀದಿ ಮಾಡಲಾಗುತ್ತಿದೆ. ಪಾಂಬಾರಿನಲ್ಲಿ ಪ್ರತ್ಯೇಕ ಸಂಘ ಸ್ಥಾಪನೆಯಾದರೆ ನಮ್ಮ ಸಂಘಕ್ಕೆ ಬರುವ ಹಾಲು ಕಡಿಮೆಯಾಗುವ ಸಂಭವ ಇದೆ ಎಂದರು.

ಗ್ರಾ.ಪಂ.ಉಪಾಧ್ಯಕ್ಷ ಪ್ರಮೋದ್ ಕೆ.ಎಸ್.ಮಾತನಾಡಿ, ಪಾಂಬಾರಿನಲ್ಲಿ ಹೊಸದಾಗಿ ಹಾಲಿನ ಡೈರಿ ಆರಂಭವಾದರೆ ಕೊಳ್ತಿಗೆ ಸಂಘಕ್ಕೆ ಹಾಲಿನ ಪೂರೈಕೆ ಕಡಿಮೆಯಾಗಲಿದೆ. ಈಗಾಗಲೇ ಹಾಲಿನ ಉತ್ಪಾದನೆಯಲ್ಲಿ ಇಳಿಕೆಯಾಗುತ್ತಿರುವ ಸಮಯದಲ್ಲಿ ಒಂದೇ ಗ್ರಾಮದಲ್ಲಿ ಎರಡು ಸಂಘಕ್ಕೆ ಹಾಲು ಪೂರೈಕೆ ಕಷ್ಟವಾಗಬಹುದು ಎಂದು ಅಭಿಪ್ರಾಯಿಸಿದರು.

ಸಂಘದ ಅಧ್ಯಕ್ಷರು ನಮ್ಮ ಸಂಘದ ಸುತ್ತಲೂ ಬೇರೆ ಬೇರೆ ಗ್ರಾಮದ ಹಾಲು ಉತ್ಪಾದಕರ ಸಂಘಗಳು ಇವೆ. ಇವೆಲ್ಲದರ ನಡುವೆಯೂ ನಮ್ಮ ಸಂಘದಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗಿರುವುದು ರೈತ ಸದಸ್ಯರ ಶ್ರಮದಿಂದ ಹೊಸದಾಗಿ ಸಂಘ ಆರಂಭವಾದರೆ ಎರಡೂ ಸಂಘಗಳಿಗೂ ಸಮಸ್ಯೆಯಾಗಬಹುದು. ಹಿರಿಯರು ಕಟ್ಟಿದ ಸಂಸ್ಥೆ ಇನ್ನೂ ಮುಂದುವರಿಯಬೇಕು ಎಂಬ ಅಪೇಕ್ಷೆ ನಮ್ಮದು ಎಂದರು. ಸದಸ್ಯರಾದ ಗಿರಿಧರ ಗೌಡ,ಗಣೇಶ್ ಭಟ್, ದಾಮೋದರ, ಸುಬ್ರಹ್ಮಣ್ಯ ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಕೊಳ್ತಿಗೆ ಸಿಎ ಬ್ಯಾಂಕ್ ಅಧ್ಯಕ್ಷ ತೀರ್ಥಾನಂದ ದುಗ್ಗಳ, ನಿರ್ದೇಶಕರಾದ ಪವನ್ ಡಿ.ಜಿ.ದೊಡ್ಡಮನೆ, ಸತೀಶ್ ಪಾಂಬಾರು, ಮಾಜಿ ಅಧ್ಯಕ್ಷರಾದ ಕೆಮ್ಮಾರ ಗಂಗಾಧರ ಗೌಡ,ವಸಂತ ಕುಮಾರ್ ರೈ ದುಗ್ಗಳ,ವೆಂಕಟರಮಣ ಕೆ.ಎಸ್ ಮೊದಲಾದವರಿದ್ದರು.

ಹಾಲಿನ ಉತ್ಪಾದನೆ ಹೆಚ್ಚಳ
ಕಳೆದ ಬಾರಿ ಸಂಘದ ಸದಸ್ಯರ ಮನೆ ಮನೆ ಭೇಟಿ ಮಾಡಿ ಹಾಲು ಉತ್ಪಾದನೆ ಕುರಿತಂತೆ ಮಾಡಿದ ಮನವಿಯಂತೆ ಸಂಘದ ಸದಸ್ಯರ ಬೆಂಬಲದಿಂದ ದಿನವಹೀ 325ಲೀಟರ್‌ನಿಂದ 540 ಲೀಟರ್‌ಗೆ ತಲುಪಿದೆ ಎಂದು ವಿಶ್ವನಾಥ ಶೆಟ್ಟಿ ಹೇಳಿದರು.

ಹಿರಿಯ ಸದಸ್ಯರಿಗೆ ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಶೇಷಪ್ಪ ಗೌಡ ದುಗ್ಗಳ,ಗುಡ್ಡಪ್ಪ ಗೌಡ ಕಟ್ಟಪುಣಿ,ಕೊರಗಪ್ಪ ಗೌಡ ಕುಂಟಿಕಾನ,ಸುಶೀಲಾ ಜಿ.ಭಟ್ ಮಾಫಲಮಜಲು,ಭಾಗೀರಥಿ ಕುಂಟಿಕಾನ,ಬೆಳ್ಯಪ್ಪ ಗೌಡ ಪಾದೆಕಲ್ಲು ಅವರನ್ನು ಸನ್ಮಾನಿಸಿ ಗೌರವಾರ್ಪಣೆ ಮಾಡಲಾಯಿತು.

ಶೈಕ್ಷಣಿಕ ,ಕ್ರೀಡಾ ಸಾಧಕರಿಗೆ ಸನ್ಮಾನ 
ಎಸ್ಸೆಸೆಲ್ಸಿ ಸಾಧಕರಾದ ವರ್ಣಾ ಕೆ. ಪಾಂಬಾರು,ಸಮೃದ್ದಿ ಬಾಯಂಬಾಡಿ,ಪಿಯುಸಿ ಸಾಧಕರಾದ ಸುಖೇಶ್ ಪುರುಷರಕೋಡಿ,ಪೂರ್ವಿ ಆನಡ್ಕ,ಕ್ರೀಡಾ ಕ್ಷೇತ್ರದಲ್ಲಿ ದೀಕ್ಷಾ ಮೈರಗುಡ್ಡೆ ( ಕಬಡ್ಡಿ) ,ಧರಣಿ ಕೆ.ಟಿ  (ಕರಾಟೆ),ಭವಿತ್ ಕೆ.ಹೆಚ್.ಕುಂಟಿಕಾನ ( ಯೋಗಾಸನ) ,ಸಾಕ್ಷಿ ಕೆ.ಆರ್. ಕೊಡಿಮಜಲು (ಚೆಸ್) ಅವರನ್ನು ಸನ್ಮಾನಿಸಲಾಯಿತು.

ಹೆಚ್ಚು ಹಾಲು ಪೂರೈಸಿದವರಿಗೆ ಅಭಿನಂದನೆ
ಸಂಘಕ್ಕೆ ವರದಿ ಸಾಲಿನಲ್ಲಿ ಹೆಚ್ಚು ಹಾಲು ಪೂರೈಕೆ ಮಾಡಿ ಪ್ರಥಮ ವಾಡ್ಯಪ್ಪ ಗೌಡ ಚಾಮೇತಕುಮೇರು, ದ್ವಿತೀಯ ಸಂಧ್ಯಾ, ತೃತೀಯ ಚಂದ್ರಾವತಿ ಕೆ.ವಿ.ಅವರನ್ನು ಉಡುಗೊರೆ ನೀಡಿ ಅಭಿನಂದಿಸಲಾಯಿತು. ವರದಿ ಸಾಲಿನಲ್ಲಿ ಹಾಲು ಹಾಕಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬೆಳ್ಯಪ್ಪ ಗೌಡ,ನಿರ್ದೇಶಕರಾದ ಎಸ್.ಮುರಳೀಕೃಷ್ಣ,ಸಿ.ಆರ್.ಸುಬ್ರಹ್ಮಣ್ಯ ಗೌಡ,ಧನಂಜಯ ಪೂಜಾರಿ,ಬಿ.ವಾಡ್ಯಪ್ಪ ಗೌಡ,ಶಿವರಾಮ ಕೆ.,ಧನಂಜಯ ಪೂಜಾರಿ, ಗಣಪಯ್ಯ ನಾಯ್ಕ,ಚಂದ್ರಾವತಿ ಕೆ.ವಿ.,ಜಲಜಾಕ್ಷಿ ಎಂ. ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾದ ಕೆ.ತಿರುಮಲೇಶ್ವರ ಗೌಡ ಸ್ವಾಗತಿಸಿದರು. ಕರುಣಾಕರ ಕೆ.ವಂದಿಸಿದರು. ಸದಸ್ಯರಾದ ತಿಮ್ಮಪ್ಪ ಗೌಡ, ಶೀಲಾ ಅವರು ಅತಿಥಿಗಳನ್ನು ಗೌರವಿಸಿದರು.ಸಂಘದ ಸಹಾಯಕಿ ಸುಮಾ ಕೆ.ಪ್ರಾರ್ಥಿಸಿದರು.ಸಂಘದ ಕಾರ್ಯದರ್ಶಿ ಹರ್ಷಿತ್ ಕೆ. ವಾರ್ಷಿಕ ವರದಿ ಮಂಡಿಸಿದರು. ಹಾಲು ಪರೀಕ್ಷಕಿ ವಿಜಯ ಕುಮಾರಿ ಹಿಂದಿನ ಸಭೆಯ ನಡವಳಿಕೆಗಳನ್ನು ಓದಿ ಸ್ಥಿರೀಕರಿಸಿದರು.ಸಹಾಯಕಿ ಸವಿತಾ ಸಹಕರಿಸಿದರು.

LEAVE A REPLY

Please enter your comment!
Please enter your name here