ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ರವರ ದಿವ್ಯ ಉಪಸ್ಥಿತಿಯಲ್ಲಿ ಸೆ.27ರಂದು ಶ್ರೀ ಲಲಿತಾಪಂಚಮಿ ಮಹೋತ್ಸವ – ಶ್ರೀ ಚಂಡಿಕಾಯಾಗ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಬೆಳಗ್ಗೆ ಘಂಟೆ 9 ರಿಂದ ಶ್ರೀ ಗಣಪತಿ ಹವನ, ನಾಗತಂಬಿಲ ನಡೆದು ಶ್ರೀ ಚಂಡಿಕಾ ಯಾಗ ಆರಂಭಗೊಳ್ಳಲಿದೆ. ಬಳಿಕ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯೋಪಸ್ಥಿತಿಯಲ್ಲಿ ಧರ್ಮಸಭೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದೆ.

ನಿವೃತ್ತ ಶಿಕ್ಷಕ ದಾಸಪ್ಪ ಶೆಟ್ಟಿ ಎಸ್., ಪಂತಡ್ಕ, ಖ್ಯಾತ ಯಕ್ಷಗಾನ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಹಿರಿಯ ಪರ್ತಕರ್ತ ಅಚ್ಯುತ ಚೇವಾರು, ಮಂಗಳೂರು ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್, ಚಿತ್ರನಟ ಹಾಗೂ ತುಳು ರಂಗಭೂಮಿ ಕಲಾವಿದ ಮಂದಾರ ಸುಂದರ ರೈ ಇವರುಗಳು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಯುವ ಪ್ರತಿಭೆ ನಟಿ ಕು. ದೀಕ್ಷಾ ಡಿ. ರೈ, ಬಾಲ ಪ್ರತಿಭೆಗಳಾದ ಯಕ್ಷಗಾನ ಚೆಂಡೆ ವಾದಕ ಮಾ. ಅದ್ವೈತ್ ಕನ್ಯಾನ ಹಾಗೂ ಭರತನಾಟ್ಯ ಕಲಾವಿದೆ, ಇತ್ತೀಚೆಗೆ ಜರಗಿದ ಭರತನಾಟ್ಯ ಜ್ಯೂನಿಯರ್ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ತೇರ್ಗಡೆಯಾದ ಕು. ಪ್ರತೀಕ್ಷಾ ಶೆಟ್ಟಿ ಇವರು ಪ್ರತಿಭಾ ಪುರಸ್ಕಾರ ಸ್ವೀಕರಿಸಲಿದ್ದಾರೆ.
ಮಧ್ಯಾಹ್ನ ಘಂಟೆ 12 ರಿಂದ ಶ್ರೀ ಚಂಡಿಕಾ ಯಾಗದ ಪೂರ್ಣಾಹುತಿ, ಶ್ರೀ ವಜ್ರಮಾತೆಗೆ ಕಲ್ಪೋಕ್ತ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಹಾಸಂತರ್ಪಣೆ ನಡೆಯಲಿದೆ. ಅಪರಾಹ್ಣ ಘಂ.2.30ರಿಂದ ನೃತ್ಯಾಂಜಲಿ ನಾಟ್ಯಶಾಲೆ, ವಾಮದಪದವು ಇವರಿಂದ ವಿದುಷಿ ವಿನುತಾ ಪ್ರವೀಣ್ ಗಟ್ಟಿ ಇವರ ನಿರ್ದೇಶನದಲ್ಲಿ ‘ನೃತ್ಯಾಮೃತಮ್’, ಸಾಯಂಕಾಲ 6ರಿಂದ ಸಾಮೂಹಿಕ ಸ್ವಯಂವರ ಪಾರ್ವತೀಪೂಜೆ, ಅಷ್ಟಾವಧಾನ ಸೇವೆ, ರಂಗಪೂಜೆ, ಭದ್ರಕಾಳಿಗೆ ವಿಶೇಷಪೂಜೆ ಜರಗಲಿರುವುದು ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ.