ಪುತ್ತೂರು:ರಾಜ್ಯಾದ್ಯಂತ ಅನರ್ಹ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳಿಸಿದ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪುತ್ತೂರು ತಾಲೂಕಿನಲ್ಲಿ ಸುಮಾರು 1884 ಬಿಪಿಎಲ್ ಕಾರ್ಡ್‌ಗಳನ್ನು ಶಂಕಾಸ್ಪದ ಎಂದು ಗುರುತಿಸಿದೆ.
ರಾಜ್ಯದಲ್ಲಿರುವ ಅನರ್ಹ ಬಿಪಿಎಲ್ ಕಾರ್ಡ್‌ದಾರರನ್ನು ಗುರುತಿಸಿ ಅಂಥವರ ಕಾರ್ಡ್ ರದ್ದುಪಡಿಸುವಂತೆ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರು. ಇದೀಗ ರಾಜ್ಯದಲ್ಲಿ 12 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಅನರ್ಹ ಎಂದು ಗುರುತಿಸಲಾಗಿದೆ.ಅದರಂತೆ ಆಯಾ ತಾಲೂಕಿನಲ್ಲಿ ತಾಲೂಕು ಮಟ್ಟದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಂಕಾಸ್ಪದ ಬಿಪಿಎಲ್ ಕಾರ್ಡ್‌ಗಳನ್ನು ಗುರುತಿಸಿದೆ.
ಪುತ್ತೂರು ತಾಲೂಕಿನಲ್ಲಿ 1884 ಕಾರ್ಡ್‌ಗಳು ಶಂಕಾಸ್ಪದ:
ಪುತ್ತೂರು ತಾಲೂಕಿನಾದ್ಯಂತ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಒಟ್ಟು ಸೇರಿ 27,843 ಕಾರ್ಡ್‌ದಾರರು ಇದ್ದಾರೆ.ಇದರಲ್ಲಿ 2437 ಅಂತ್ಯೋದಯ ಕಾರ್ಡ್‌ದಾರರು ಹಾಗೂ 25406 ಬಿಪಿಎಲ್ ಕಾರ್ಡ್‌ದಾರರು ಇದ್ದು ಪರಿಶೀಲನೆಯಲ್ಲಿ 1884 ಕಾರ್ಡ್‌ಗಳನ್ನು ಶಂಕಾಸ್ಪದ ಎಂದು ಗುರುತಿಸಲಾಗಿದೆ.ಇದರಲ್ಲಿ 1621 ಕಾರ್ಡ್‌ಗಳನ್ನು ಹೊಂದಿರುವವರು ವಾರ್ಷಿಕ ಒಂದು ಲಕ್ಷದ 20 ಸಾವಿರಕ್ಕಿಂತ ಹೆಚ್ಚು ಆದಾಯದಾರರು, 9 ಕಾರ್ಡ್‌ಗಳಲ್ಲಿ ಜಿಎಸ್‌ಟಿ ರಿಟರ್ನ್ ಫೈಲ್ ಮಾಡಿದವರು, 43 ಕಾರ್ಡ್‌ಗಳನ್ನು ವಿವಿಧ ಸಂಸ್ಥೆಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುವವರು ಹೊಂದಿದ್ದಾಗಿದೆ.ಅಂತರ್ರಾಜ್ಯದಲ್ಲಿ ನೆಲೆಸಿರುವ 97 ನಕಲಿ ಕಾರ್ಡ್‌ಗಳು ಹಾಗೂ 90 ಕಾರ್ಡ್‌ಗಳು ಸ್ತಬ್ಧವಾಗಿರುವುದು ಹಾಗೂ 25 ಕಾರ್ಡ್‌ಗಳಲ್ಲಿ 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿ ಪಿಎಮ್ ಕಿಸಾನ್ ಫಲಾನುಭವಿಗಳು ಎಂದು ಗುರುತಿಸಲಾಗಿದ್ದು ಇಂತಹ ಕಾರ್ಡ್‌ಗಳನ್ನು ಶಂಕಾಸ್ಪದವೆಂದು ಗುರುತಿಸಲಾಗಿದೆ.
ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪಟ್ಟಿ ರವಾನೆ:
ಶಂಕಾಸ್ಪದ ವರ್ಗಕ್ಕೆ ಸೇರಿಸಿರುವ ಪಡಿತರ ಚೀಟಿಗಳ ಪಟ್ಟಿಯನ್ನು ಈಗಾಗಲೇ ಆಹಾರ ನಾಗರಿಕ ಸರಬರಾಜು ಇಲಾಖೆಯು ಪುತ್ತೂರು ತಾಲೂಕು ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನ್ಯಾಯಬೆಲೆ ಅಂಗಡಿಗೆ ರವಾನಿಸಿದೆ.ಈ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿಯ ಮುಂಭಾಗ ಅಂಟಿಸಲಾಗುತ್ತಿದೆ.ಪಟ್ಟಿಯಲ್ಲಿ ಹೆಸರು, ಯಾವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುತ್ತಿರುವುದು, ಕಾರ್ಡ್ ಸಂಖ್ಯೆ, ಸದಸ್ಯರ ಸಂಖ್ಯೆ ಮತ್ತು ಯಾವ ಕಾರಣಕ್ಕೆ ಕಾರ್ಡ್ ರದ್ದುಪಡಿಸಲಾಗಿದೆ ಎಂಬ ವಿವರಗಳನ್ನು ನೀಡಲಾಗಿದೆ.
ಶಂಕಾಸ್ಪದ ಕಾರ್ಡ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಆಹಾರ ನಾಗರಿಕ ಸರಬರಾಜು ಇಲಾಖೆಯಿಂದ ಪರಿಶೀಲನೆ ಮಾಡಲಾಗುತ್ತದೆ.ಬಿಪಿಎಲ್ ಕಾರ್ಡ್‌ದಾರರಾಗಲು ಅನರ್ಹ ಇದ್ದಲ್ಲಿ ಅಂತಹ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳನ್ನಾಗಿ ಪರಿವರ್ತಿಸಲಾಗುತ್ತದೆ.ಬಿಪಿಎಲ್ ಕಾರ್ಡ್‌ನಲ್ಲೇ ಮುಂದುವರಿಯಲು ಸಂಬಂಽಸಿದ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಎಂದು ಇಲಾಖಾಽಕಾರಿಗಳು ತಿಳಿಸಿದ್ದಾರೆ.