*ಪರಿಶ್ರಮ, ಆದರ್ಶ ಬದುಕಿಗೆ ಅತೀ ಮುಖ್ಯ: ಒಡಿಯೂರುಶ್ರೀ
*ಮಕ್ಕಳನ್ನು ಪ್ರೋತ್ಸಾಹಿಸುವುದು ಸಮಾಜವನ್ನು ಪ್ರೋತ್ಸಾಹಿಸಿದಂತೆ: ಪಿ. ನಿತ್ಯಾನಂದ ರಾವ
*ಕಲೆ – ಕಲಾವಿದರಿಗೆ ರಾಜಾಶ್ರಯ ನೀಡಿದ ಕ್ಷೇತ್ರ ಒಡಿಯೂರು: ಸುಂದರ ರೈ ಮಂದಾರ

ವಿಟ್ಲ: ಬಂಧನದಿಂದ ಬಿಡುಗಡೆ ಮಾಡುವ ವಿದ್ಯೆ ಆಧ್ಯಾತ್ಮ ವಿದ್ಯೆ. ಬದುಕಿನಲ್ಲಿ ಸಂಸ್ಕಾರ ಅಗತ್ಯ. ಪರಿಶ್ರಮ, ಆದರ್ಶ ಬದುಕಿಗೆ ಅತೀ ಮುಖ್ಯ. ಅಂತರಂಗದ ಪ್ರವೇಶದಿಂದ ಶಾಂತಿ, ನೆಮ್ಮದಿ ಸಾಧ್ಯ. ಜಗತ್ತಿನ ಜಾಗೃತಿಗೆ ಕ್ರೀಯಾಶೋಲತೆ ಮುಖ್ಯ. ಮಕ್ಕಳ ಬೆಳವಣಿಗೆಗೆ ಪೂಷಕರ ಪಾತ್ರ ಅಪಾರ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿರವರು ಹೇಳಿದರು.
ಅವರು ಸೆ.27ರಂದು ಶ್ರೀ ಸಂಸ್ಥಾನದಲ್ಲಿ ನಡೆದ ಶ್ರೀ ಲಲಿತಾಪಂಚಮಿ ಮಹೋತ್ಸವ – ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಪರಿವರ್ತನೆ ಅಗತ್ಯ. ಬದುಕು ನಿಂತ ನೀರಾಗಬಾರದು. ಕಲೆ, ಸಾಹಿತ್ಯ, ಸಂಗೀತ, ದೇಶದ ಮೌಲ್ಯ. ಭಾರತ ಆದ್ಯಾತ್ಮಿಕತೆಯಿಂದ ಸಂಪತ್ ಭರಿತವಾಗಿದೆ. ಬಾಷೆಗೂ ಸಂಸ್ಕಾರಕ್ಕೂ ಹತ್ತಿರವಾದ ಸಂಬಂಧವಿದೆ. ಧರ್ಮ ಸಂಸ್ಕೃತಿ ಬಹಳ ಶ್ರೇಷ್ಟವಾದುದು. ಅವುಗಳು ಜೊತೆಜೊತೆಯಾಗಿ ಸಾಗಿದಾಗ ಬದುಕು ಹಸನಾಗುತ್ತದೆ. ಸಂಸ್ಕಾರ ಪೂರ್ಣ ಬದುಕು ನಮ್ಮದಾಗಬೇಕು ಎಂದರು.
ಸನ್ಮಾನ:
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ದಾಸಪ್ಪ ಶೆಟ್ಟಿ ಎಸ್. ಪಂತಡ್ಕ, ಮಂಗಳೂರು ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್,
ಖ್ಯಾತ ಯಕ್ಷಗಾನ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಹಿರಿಯ ಪರ್ತಕರ್ತ ಅಚ್ಯುತ ಚೇವಾರು, ಚಿತ್ರನಟ ಹಾಗೂ ತುಳು ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ರವರಿಗೆ ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರತಿಭಾ ಪುರಸ್ಕಾರ:
ಯುವ ಪ್ರತಿಭೆಗಳಾದ ಯಕ್ಷಗಾನ ಚೆಂಡೆ ವಾದಕ ಮಾ. ಅದ್ವೈತ್ ಕನ್ಯಾನ, ಭರತನಾಟ್ಯ ಕಲಾವಿದೆ ಕು. ಪ್ರತೀಕ್ಷಾ ಶೆಟ್ಟಿ ವಾಮದಪದವು, ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಕ್ಕಳನ್ನು ಪ್ರೋತ್ಸಾಹಿಸುವುದು ಸಮಾಜವನ್ನು ಪ್ರೋತ್ಸಾಹಿಸಿದಂತೆ:
ಮಂಗಳೂರು ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ರವರು ಸನ್ಮಾನ ಸ್ವೀಕರಿಸಿ ಮಾತನಾಡಿ ಸಮಾಜದ ಸ್ವಾಸ್ತ್ಯ ಕಾಪಾಡುವ ಕೆಲಸ ಇಂತಹ ಶ್ರೀಗಳ ಪಾತ್ರ ಮಹತ್ತರವಾದುದು. ಮಠಗಳೆ ನಮಗೆ ಆಸರೆ. ಶ್ರೀಗಳ ಆಶಯಗಳನ್ನು ಈಡೇರಿಸುವ ಕೆಲಸ ಮಾಡೋಣ. ಮಕ್ಕಳನ್ನು ಪ್ರೋತ್ಸಾಹಿಸುವುದು ಸಮಾಜವನ್ನು ಪ್ರೋತ್ಸಾಹಿಸಿದಂತೆ. ಇಂತಹ ಸನ್ಮಾನ, ಪ್ರೋತ್ಸಹ ಮಕ್ಕಳಿಗೆ ದಾರಿದೀವಿಗೆಯಾಗಿದೆ ಎಂದರು.
ಕಲೆ – ಕಲಾವಿದರಿಗೆ ರಾಜಾಶ್ರಯ ನೀಡಿದ ಕ್ಷೇತ್ರ ಒಡಿಯೂರು:
ಚಿತ್ರನಟ ಹಾಗೂ ತುಳು ರಂಗಭೂಮಿ ಕಲಾವಿದ ಸುಂದರ ರೈ ಮಂದಾರರವರು ಸನ್ಮಾನ ಸ್ವೀಕರಿಸಿ ಮಾತನಾಡಿ ಇದೊಂದು ಪರಮಶ್ರೇಷ್ಟ ಸನ್ಮಾನ. ಜೀವನದ ಪರಮ ಶ್ರೇಷ್ಟ ದಿನ. ಶ್ರೀ ಕ್ಷೇತ್ರದಿಂದ ನಿತ್ಯ ನಿರಂತರವಾಗಿ ಕಲಾವಿದರಿಗೆ ಸನ್ಮಾನ ನಡೆಯುತ್ತಿದೆ. ಸಂಸ್ಥಾನ ನಿರಂತರ ಕಲೆಗೆ ಪ್ರೋತ್ಸಹ ನೀಡುತ್ತಾ ಬಂದಿದೆ. ಕಲೆ – ಕಲಾವಿದರಿಗೆ ರಾಜಾಶ್ರಯ ನೀಡಿದ ಕ್ಷೇತ್ರ ಒಡಿಯೂರು ಎಂದರು.
ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ವೇದಿಕೆಯಲ್ಲಿ ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಎ. ಸುರೇಶ್ ರೈ, ಮುಂಬೈಯ ಉದ್ಯಮಿ ವಾಮಯ್ಯ ಬಿ.ಶೆಟ್ಟಿ ಚೆಂಬೂರು, ರೇವತೀ ವಾಮಯ್ಯ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಅನಿತಾ, ಶಿಕ್ಷಕರಾದ ಶೇಖರ ಶೆಟ್ಟಿ ಬಾಯಾರು, ಒಡಿಯೂರು ಶ್ರೀ ಗುರುದೇವ ಐಟಿಐ ನ ಪ್ರಾಂಶುಪಾಲರಾದ ಪ್ರವೀಣ್, ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಗ್ರಾಮ ವಿಕಾಸ ಯೋಜನೆಯ ಕಡಬ ಮೇಲ್ವಿಚಾರಕಿ ಕಾವ್ಯಾಮಧುರವರು ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು.
ಇದೇ ಸಂದರ್ಭದಲ್ಲಿ ಶ್ರೀಗಳು ಸಂಸ್ಥಾನದ ಮಾಹಿತಿ, ಚಟುವಟಿಕೆಯನ್ನೊಳಗೊಂಡ ಪರಿಚಯ ದರ್ಪಣ -2025 ಪುಸ್ತಕವನ್ನು ಬಿಡುಗಡೆ ಮಾಡಿದರು. ಬಳಿಕ ಗ್ರಾಮವಿಕಾಸ ಯೋಜನೇಯ ಬಂಟ್ವಾಳ ತಾಲೂಕಿನ ಸ್ವಸಹಾಯ ಸಂಘಗಳಿಗೆ ಲಾಭಾಂಶವನ್ನು ವಿತರಣೆ ಮಾಡಲಾಯಿತು.
ರೇಣುಕಾ ಎಸ್.ರೈ ಪ್ರಾರ್ಥಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕರಾದ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಭಂಡಾರಿ ವಂದಿಸಿದರು.
ವೈದ್ಧಿಕ ಕಾರ್ಯಕ್ರಮ:
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ರವರ ದಿವ್ಯ ಉಪಸ್ಥಿತಿಯಲ್ಲಿ ಸೆ.27ರಂದು ಶ್ರೀ ಲಲಿತಾಪಂಚಮಿ ಮಹೋತ್ಸವ – ಶ್ರೀ ಚಂಡಿಕಾಯಾಗ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಬೆಳಗ್ಗೆ ಘಂಟೆ 9 ರಿಂದ ಶ್ರೀ ಗಣಪತಿ ಹವನ, ನಾಗತಂಬಿಲ ನಡೆದು ಶ್ರೀ ಚಂಡಿಕಾ ಯಾಗ ಆರಂಭಗೊಂಡಿತು. ಮಧ್ಯಾಹ್ನ ಘಂಟೆ 12 ರಿಂದ ಶ್ರೀ ಚಂಡಿಕಾ ಯಾಗದ ಪೂರ್ಣಾಹುತಿ, ಶ್ರೀ ವಜ್ರಮಾತೆಗೆ ಕಲ್ಪೋಕ್ತ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಮಹಾಸಂತರ್ಪಣೆ ನಡೆಯಿತು. ಅಪರಾಹ್ಣ ಘಂ.2.30ರಿಂದ ನೃತ್ಯಾಂಜಲಿ ನಾಟ್ಯಶಾಲೆ, ವಾಮದಪದವು ಇವರಿಂದ ವಿದುಷಿ ವಿನುತಾ ಪ್ರವೀಣ್ ಗಟ್ಟಿ ಇವರ ನಿರ್ದೇಶನದಲ್ಲಿ ‘ನೃತ್ಯಾಮೃತಮ್’, ನಡೆಯಿತು.