ನೆಲ್ಯಾಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಹಾಗೂ ಎಕ್ಸ್ಪ್ರೆಸ್ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಿರ್ವಾಹಕ ಸಹಿತ 9 ಮಂದಿ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಸೆ.28ರಂದು ಸಂಜೆ ನಡೆದಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ರಾಜಹಂಸ ಹಾಗೂ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಎಕ್ಸ್ಪ್ರೆಸ್ ಬಸ್ಸಿನ ನಡುವೆ ಗುಂಡ್ಯದಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ನಿರ್ವಾಹಕ ಹಾಸನ ಮೂಲದ ನಿಂಗರಾಜು (52ವ.) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಉಳಿದಂತೆ ಪ್ರಯಾಣಿಕರಾದ ಪಡಂಗಡಿ ಮೂಲದ ಗಿರಿಜಾ (62ವ.), ಅವರ ಪುತ್ರಿ ಪ್ರಮೀಳಾ (38ವ.), ಮೊಮ್ಮಗ ಮನೀಷ್ (14ವ.), ಧರ್ಮಸ್ಥಳದ ಪ್ರೇಮಲತಾ (48ವ.), ಚನ್ನಪಟ್ಟಣದ ಪ್ರಭಾ (53ವ.), ಉತ್ತರ ಕರ್ನಾಟಕ ಮೂಲದ ನಂದೀಶ್ (30ವ.), ಬೆಂಗಳೂರು ಮೂಲದ ಸಾವಿತ್ರಮ್ಮ (40ವ.), ಸಕಲೇಶಪುರದ ಅಚ್ಯುತ ಆಚಾರ್ಯ (56ವ.) ಎಂಬವರು ಗಾಯಗೊಂಡಿದ್ದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
3 ಗಂಟೆ ಸಂಚಾರಕ್ಕೆ ತಡೆ;
ಅಪಘಾತಗೊಂಡ ಬಸ್ಸುಗಳೆರೆಡು ರಸ್ತೆಗೆ ಅಡ್ಡವಾಗಿ ನಿಂತ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 3 ತಾಸು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದರಿಂದಾಗಿ ಪ್ರಯಾಣಿಕರು ರಸ್ತೆಯಲ್ಲೇ ಕಾಲ ಕಳೆಯುವಂತಾಯಿತು. ನೆಲ್ಯಾಡಿ ಹೊರಠಾಣೆ ಪೊಲೀಸರು ಹಾಗೂ ಹೆದ್ದಾರಿ ಗಸ್ತುವಾಹನದ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್ಸುಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.