ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೋ ವೈರಲ್, ತಲೆಬಾಗಿದ ನೆಟ್ಟಿಗರು
ಪುತ್ತೂರು: ದಸರಾ ಹಬ್ಬದಲ್ಲಿ ಶಾರದಾ ದೇವಿಯ ಪಾತ್ರಧಾರಿಯಾಗಿ ಪುತ್ತೂರಿನ ಸುವರ್ಣ ಎಸ್ಟೇಟ್ನ ಉಜ್ವಲ ವಿ. ಸುವರ್ಣರವರು ಎಲ್ಲರ ಗಮನ ಸೆಳೆದಿದ್ದಾರೆ. ಶಾರದಾ ದೇವಿಯ ದಿವ್ಯ ರೂಪವನ್ನು ಧರಿಸಿದ ಉಜ್ವಲ, ತನ್ನ ಶಾಂತ ಸ್ವಭಾವ ಮತ್ತು ದೈವಿಕ ಮೋಹಕತೆಯಿಂದ ಭಕ್ತರನ್ನು ಮಂತ್ರಮುಗ್ಧಗೊಳಿಸಿದ್ದಾರೆ.

ವೇದನಾಥ್ ಸುವರ್ಣ ನರಿಮೊಗರು ಮತ್ತು ನಳಿನಾಕ್ಷಿ ವಿ. ಸುವರ್ಣರವರ ಪುತ್ರಿಯಾಗಿರುವ ಉಜ್ವಲ ವಿ ಸುವರ್ಣರವರ ದೇವತಾರೂಪದಲ್ಲಿನ ರೂಪಾಂತರ ತುಂಬಾ ದಿವ್ಯವಾಗಿತ್ತು. ಅವರ ಸ್ಥಿರವಾದ ಭಾವನೆ ಮತ್ತು ಶಿಸ್ತಿನ ಪ್ರದರ್ಶನವು ಹಬ್ಬದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸಿತು. ಜ್ಞಾನ, ಬುದ್ಧಿಮತ್ತೆ ಮತ್ತು ಪರಂಪರೆಯ ಪ್ರತಿಕೆಯಾಗಿರುವ ಶಾರದಾ ದೇವಿಯ ಸ್ವರೂಪವನ್ನು ಉಜ್ವಲ ಅತ್ಯಂತ ಶ್ರದ್ಧೆಯಿಂದ ಜೀವಂತಗೊಳಿಸಿದ್ದಾರೆ.
ಇನ್ಫಿನಿಟಿ ಬ್ಯೂಟಿ ಪಾರ್ಲರ್ನ ಮಾಲಕಿ ಶ್ರುತಿ ಕೊಟ್ಯಾನ್ ಮತ್ತು ಅವರ ತಂಡದವರ ಕೈಚಳಕದಿಂದ ಈ ಸುಂದರ ದೇವಿ ರೂಪ ಮೂಡಿಬಂದಿದ್ದು ಈ ಸುಂದರ ಕ್ಷಣಗಳನ್ನು ಧಾರೆ.ಇನ್ ತಂಡದ ಕೀರ್ತಿ ವಾಮಂಜೂರು ಅವರ ನೇತೃತ್ವದಲ್ಲಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಛಾಯಾಗ್ರಹಣ ನಡೆದಿದ್ದು, ಉಜ್ವಲ ಶಾರದಾ ಮಾತೆಯ ಜೀವಂತ ರೂಪವನ್ನೇ ತಳೆದಂತಿತ್ತು ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಉಜ್ವಲರವರ ವೀಡಿಯೋ ವೈರಲ್ ಆಗಿದ್ದು ಜನರು ಶಾರದಾ ದೇವಿಯ ರೂಪಕ್ಕೆ ತಲೆಬಾಗಿದ್ದಾರೆ. ಸುಳ್ಯ ಕೆವಿಜಿ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿಡಿಎಸ್ ವಿದ್ಯಾರ್ಥಿನಿಯಾಗಿರುವ ಉಜ್ವಲ ವಿ ಅವರು ಭರತನಾಟ್ಯ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ‘ನಂಬರ್ ಪ್ಲೇಟ್’ ಎನ್ನುವ ಚಿತ್ರದಲ್ಲಿ ನಟಿಸಿದ್ದರು.