ಸಂಚಲನ ಸೃಷ್ಟಿಸಿದ ಕುಂಬ್ರದ ಮಾರ್ನೆಮಿದ ಗೌಜಿ

0

ಮನರಂಜಿಸಿದ ಸ್ಥಳೀಯ ವೇಷಧಾರಿಗಳ ಗುಂಪು ಸ್ಪರ್ಧೆ
ತುಳುನಾಡಿನ ಮೂಲ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸ ಆಗಿದೆ: ಭರತ್ ಮುಂಡೋಡಿ

ಪುತ್ತೂರು: ತುಳುನಾಡಿನಲ್ಲಿ ನವರಾತ್ರಿಗೆ ತನ್ನದೇ ಆದ ವಿಶೇಷತೆ ಇದೆ. ನವರಾತ್ರಿಯಲ್ಲಿ ವೇಷ ಹಾಕುವುದು ಇಲ್ಲಿನ ಮೂಲ ಸಂಸ್ಕೃತಿಯಾಗಿದ್ದು, ಇಂತಹ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸ ಬಾಂತಲಪ್ಪು ಜನಸೇವಾ ಸಮಿತಿಯಿಂದ ಆಗುತ್ತಿದೆ. ಇದು ಅತ್ಯಂತ ಒಳ್ಳೆಯ ಕಾರ್ಯವಾಗಿದೆ ಎಂದು ಪಂಚ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದರು.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ಬಾಂತಲಪ್ಪು ಜನಸೇವಾ ಸಮಿತಿ ಕುಂಬ್ರ ಇದರ ಜಂಟಿ ಆಶ್ರಯದಲ್ಲಿ ಸೆ.30 ರಂದು ಕುಂಬ್ರ ಚೆನ್ನಪ್ಪ ರೈ ಮತ್ತು ಕುಂಬ್ರ ಜತ್ತಪ್ಪ ರೈ ಸ್ಮಾರಕ ಅಶ್ವತ್ಥ ಕಟ್ಟೆಯ ಬಳಿ ನಡೆದ ‘ಕುಂಬ್ರದ ಮಾರ್ನೆಮಿದ ಗೌಜಿ’ ಸ್ಥಳೀಯ ವೇಷಧಾರಿಗಳ ಗುಂಪು ಸ್ಪರ್ಧೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ತುಳುನಾಡಿನ ಹುಲಿ ವೇಷ, ಕಂಬಳ, ದೈವರಾಧನೆ ಇತ್ಯಾದಿಗಳನ್ನು ರಾಷ್ಟ್ರಮಟ್ಟದಲ್ಲಿ ಪಸರಿಸಿದ ಕೀರ್ತಿ ಅದು ಬಂಟ ಸಮುದಾಯದವರಿಗೆ ಸಲ್ಲಬೇಕು ಎಂದು ಭರತ್ ಮುಂಡೋಡಿಯವರು ಕುಡ್ಲದಲ್ಲಿ ಮಿಥುನ್ ರೈ, ಪುತ್ತೂರು ಸಹಜ್ ರೈ ಹಾಗೇ ಕುಂಬ್ರದಲ್ಲಿ ದುರ್ಗಾಪ್ರಸಾದ್ ರೈಯವರು ಪಿಲಿ ನಲಿಕೆಯ ಮೂಲಕ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ ಹಾಗೇ ತುಳುನಾಡಿನ ದೈವರಾಧನೆಯನ್ನು ರಿಷಬ್ ಶೆಟ್ಟಿಯವರು ಈಗಾಗಲೇ ದೇಶವಿದೇಶಗಳಲ್ಲಿ ಕಾಂತಾರದ ಮೂಲಕ ಪಸರಿಸುವ ಕೆಲಸ ಮಾಡಿದ್ದಾರೆ. ಇಂತಹ ಕೆಲಸಗಳು ಮುಂದೆಯೂ ನಡೆಯುತ್ತಾ ಬರಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಪ್ರಯತ್ನ ಪಡೋಣ ಎಂದು ಹೇಳಿ ಶುಭ ಹಾರೈಸಿದರು.


ಸ್ಥಳೀಯ ಕಲಾವಿದರಿಗೆ ವೇದಿಕೆ ಕೊಟ್ಟ ಒಳ್ಳೆಯ ಕಾರ್ಯಕ್ರಮ: ಕಾವು ಹೇಮನಾಥ ಶೆಟ್ಟಿ
ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ತಮ್ಮ ಆಶಯ ಮಾತುಗಳೊಂದಿಗೆ, ಬಾಂತಲಪ್ಪು ಜನಸೇವಾ ಸಮಿತಿ ಆಯೋಜಿಸಿದ್ದ ೩ ನೇ ವರ್ಷದ ಮಾರ್ನೆಮಿದ ಗೌಜಿ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಕಳೆ ಪಡೆದುಕೊಳ್ಳುತ್ತಿರುವುದನ್ನು ನೋಡಿದರೆ ಇಂತಹ ಕಾರ್ಯಕ್ರಮ ಜನರಿಗೆ ಅವಶ್ಯಕತೆ ಇತ್ತು ಎಂಬುದನ್ನು ತೋರಿಸುತ್ತದೆ. ಸ್ಥಳೀಯ ಕಲಾವಿದರಿಗೆ ವೇದಿಕೆ ಕೊಟ್ಟ ಅವರಲ್ಲಿನ ಪ್ರತಿಭೆಗಳ ಅನಾವರಣಕ್ಕೆ ಬಾಂತಲಪ್ಪು ಜನಸೇವಾ ಸಮಿತಿ 3 ವರ್ಷಗಳಿಂದ ಮಾರ್ನೆಮಿದ ಗೌಜಿಯ ಮೂಲಕ ಅವಕಾಶ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು ಇದೊಂದು ಜಾತಿ,ಧರ್ಮ, ರಾಜಕೀಯ , ಬಡವ,ಶ್ರೀಮಂತ ಎನ್ನುವ ಯಾವುದೇ ಬೇಧಭಾವ ಇಲ್ಲದೆ ನಡೆಯುವ ಕಾರ್ಯಕ್ರಮವಾಗಿದೆ. ಆದ್ದರಿಂದ ಬಾಂತಲಪ್ಪು ಸಮಿತಿಯವರ ಈ ಕಾರ್ಯಕ್ರಮ ಜಿಲ್ಲೆಯಲ್ಲೇ ಸಂಚಲನ ಸೃಷ್ಟಿಸಿದೆ.ಮುಂದಿನ ದಿನಗಳಲ್ಲೂ ಸಮಿತಿಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆದುಕೊಂಡು ಬರಲಿ ಎಂದು ಹೇಳಿ ಶುಭ ಹಾರೈಸಿದರು.


ತುಳುನಾಡಿನ ಪರಂಪರೆಯೇ ಸೌಹಾರ್ದತೆ, ಸಮಾನತೆ ಆಗಿದೆ: ತಾರಾನಾಥ ಗಟ್ಟಿ ಕಾಪಿಕಾಡ್
ಸಭಾಧ್ಯಕ್ಷತೆ ವಹಿಸಿದ್ದ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರರ್ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳುನಾಡಿನ ಮೂಲ ಪರಂಪರೆಯೇ ಸೌಹಾರ್ದತೆ, ಸಮಾನತೆ ಆಗಿದೆ ಅದನ್ನು ಇಲ್ಲಿ ತೋರಿಸಲಾಗಿದೆ. ಎಲ್ಲರನ್ನು ಒಟ್ಟುಗೂಡಿಸಿ ಮಾಡಿದ ಒಂದು ಒಳ್ಳೆಯ ಸಮಾಜಕ್ಕೆ ಮಾದರಿಯಾಗುವ ಕಾರ್ಯಕ್ರಮ ಇದಾಗಿದೆ ಅಲ್ಲದೆ ಸೌಹಾರ್ದತೆ ಪರಂಪರೆಯನ್ನು ಉಳಿಸಿ,ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಬಾಂತಲಪ್ಪುವಿನ ಮಾರ್ನೆಮಿದ ಗೌಜಿ ಒಂದು ಮಾದರಿ ಕಾರ್ಯಕ್ರಮವಾಗಿದೆ ಎಂದು ಹೇಳಿ ಶುಭ ಹಾರೈಸಿದರು.


ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬುದನ್ನು ಬಾಂತಲಪ್ಪು ಸಮಿತಿ ತೋರಿಸಿದೆ: ಶಕುಂತಳಾ ಟಿ.ಶೆಟ್ಟಿ
ತೆಂಗಿನ ಕಾಯಿ ಒಡೆಯುವ ಮೂಲಕ ಮಾರ್ನೆಮಿದ ಗೌಜಿಯ ಗಂತ್‌ದ ಉದ್ಘಾಟನೆಯನ್ನು ನೆರವೇರಿಸಿದ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ, ತುಳುನಾಡಿನ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸುವ ಕೆಲಸ ಬಾಂತಲಪ್ಪು ಸಮಿತಿಯಿಂದ ಆಗುತ್ತಿದೆ. ಇದಲ್ಲದೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬುದನ್ನು ಸಮಿತಿ ತೋರಿಸಿದೆ ಇಲ್ಲಿ ರಾಜಕೀಯ ಇಲ್ಲ ಜಾತಿ, ಧರ್ಮದ ಮಿತಿ ಇಲ್ಲ, ಎಲ್ಲರನ್ನು ಒಟ್ಟಿಗೆ ಸೇರಿಸಿಕೊಂಡು ಒಗ್ಗಟ್ಟಿನಲ್ಲಿ ಮಾರ್ನೆಮಿ ಗೌಜಿಯನ್ನು ಆನಂದಿಸುವ ಕೆಲಸ ಆಗಿದೆ ಎಂದು ಹೇಳಿ ಶುಭ ಹಾರೈಸಿದರು.


ಮಾಜಿ ಸಂಸದರು ಸೇರಿದಂತೆ ಸಾಧಕರಿಗೆ ಸನ್ಮಾನ
ಪ್ರತಿವರ್ಷದಂತೆ ಈ ವರ್ಷವೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಪರ್ಪುಂಜ ಶಿವಕೃಪಾ ಆಡಿಟೋರಿಯಂ ಮಾಲಕ ಗಣೇಶ್ ಕೋಡಿಬೈಲು, ದರ್ಬೆತ್ತಡ್ಕ ಕುಕ್ಕುತ್ತಡಿ ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಮೊಕ್ತೇಸರ ಜಯರಾಮ ಪೂಜಾರಿ ಕುಕ್ಕುತ್ತಡಿ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲುರನ್ನು ಪೇಟಾ ತೊಡಿಸಿ, ಶಾಲು, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಸಂಪ್ಯ ಅಮ್ಮ ವುಡ್ ಇಂಡಸ್ಟ್ರೀ ಮಾಲಕ ಉದಯ ಭಟ್ ಪೆರ್ಲಂಪಾಡಿ, ತಾಪಂ ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಎನ್‌ಎಸ್‌ಯುಐ ರಾಜ್ಯ ಘಟಕ್ ಉಪಾಧ್ಯಕ್ಷ ಫಾರೂಕ್ ಬಾಯಬೆ, ಮಂಗಳೂರು ಎಂಆರ್‌ಪಿಎಲ್ ಉದ್ಯೋಗಿ ಸೀತಾರಾಮ ರೈ ಕೈಕಾರ, ಕುಂಬ್ರದ ಉದ್ಯಮಿ ಕುಂಬ್ರ ಮೋಹನದಾಸ ರೈ(ಅಮ್ಮಿಯಣ್ಣ), ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ, ಕುಕ್ಕುಮುಗೇರು ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರ ಎ.ಜಿ ವಿಜಯ ಕುಮಾರ್ ರೈ ಮುಗೇರು, ತ್ಯಾಂಪಣ್ಣ ಆಳ್ವ ಕಲ್ಲಡ್ಕ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಉದ್ಯಮಿ ಎಂ.ಎಂ.ಸರ್ಫುದ್ಧೀನ್, ಕುಂಬ್ರ ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಶ್ರಫ್ ಸಾರೆಪುಣಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ವಸಂತ ಶೆಟ್ಟಿ ಕಲ್ಲಡ್ಕ ಪ್ರಾರ್ಥಿಸಿದರು. ಬಾಂತಲಪ್ಪು ಜನಸೇವಾ ಸಮಿತಿ ಗೌರವ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ರಕ್ಷಿತ್ ರೈ ಮುಗೇರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೊಳ್ಳಾಡಿ ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಮತ್ತು ಹರೀಶ್ ರೈ ಮುಗೇರು ಕಾರ್ಯಕ್ರಮ ನಿರೂಪಿಸಿದರು. ಬಾಂತಲಪ್ಪು ಜನಸೇವಾ ಸಮಿತಿಯ ಉಪಾಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ, ಸಂಚಾಲಕ ಶಶಿಕಿರಣ ರೈ ನೂಜಿಬೈಲು, ಕೋಶಾಧಿಕಾರಿ ಅಶ್ರಫ್ ಉಜಿರೋಡಿ, ಸಂಘಟನಾ ಕಾರ್ಯದರ್ಶಿ ಶೀನಪ್ಪ ನಾಯ್ಕ ಬೊಳ್ಳಾಡಿ, ಮಹಮ್ಮದ್ ಬೊಳ್ಳಾಡಿ, ಜತೆ ಕಾರ್ಯದರ್ಶಿ ಶಾರದಾ ಚಿನ್ನಯ ಆಚಾರ್ಯ, ಸಹ ಕಾರ್ಯದರ್ಶಿ ಸುಂದರಿ ಪರ್ಪುಂಜ, ಚಿತ್ರಾ ಬಿ.ಸಿ, ಕಾರ್ಯಕಾರಿ ಸಮಿತಿಯ ಶೇಖರ ರೈ ಕುರಿಕ್ಕಾರ, ಬಶೀರ್ ಕೌಡಿಚ್ಚಾರ್, ಮಾಧವ ಅಜಲಡ್ಕ, ಶಮಿತ್ ರೈ ಕುಂಬ್ರ, ಹರ್ಷಿತ್ ಬೈರಮೂಲೆ, ಬದ್ರುನ್ನೀಸಾ ಪರ್ಪುಂಜ ಹಾಗೇ ಸಮಿತಿಯ ಸರ್ವ ಸದಸ್ಯರುಗಳು ಸಹಕರಿಸಿದ್ದರು.



ದುರ್ಗಾಪ್ರಸಾದ್ ರೈ ಕುಂಬ್ರದ ಪಿಲಿ…!
ಪಿಲಿ ನಲಿಕೆಯ ಮೂಲಕ ತುಳುನಾಡಿನ ಮೂಲ ಸಂಸ್ಕೃತಿಯನ್ನು ಉಳಿಸಲು ಹೊರಟಿರುವ ಬಾಂತಲಪ್ಪು ಜನ ಸೇವಾ ಸಮಿತಿಯ ಗೌರವ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈಯವರು ‘ಕುಂಬ್ರದ ಪಿಲಿ’ ಯೂ ಹಾಗೇ ಪುತ್ತೂರಿನ ಪಿಲಿಯೂ ಆಗಿದ್ದಾರೆ ಎಂದು ಭರತ್ ಮುಂಡೋಡಿ ಹೇಳಿದರು.

ಜಿಲ್ಲೆಯಲ್ಲೇ ಸಂಚಲನ ಸೃಷ್ಟಿಸಿದೆ
ಪ್ರಾಸ್ತಾವಿಕ ಮಾತುಗಳನ್ನಾಡಿದ ಬಾಂತಲಪ್ಪು ಜನಸೇವಾ ಸಮಿತಿಯ ಗೌರವ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈಯವರು, ಮಾರ್ನೆಮಿಯ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ವೇಷ ಹಾಕಿಕೊಂಡು ತೆರಳುವ ಸ್ಥಳೀಯ ಕಲಾವಿದರಿಗೆ ಒಂದು ವೇದಿಕೆಯನ್ನು ಕೊಡಬೇಕು, ತುಳುನಾಡಿನ ಸಂಸ್ಕೃತಿಯನ್ನು ಉಳಿಸುವಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಎಂಬ ನಿಟ್ಟಿನಲ್ಲಿ ಆರಂಭಿಸಿದ ಮಾರ್ನೆಮಿದ ಗೌಜಿ ಇಂದು 3ನೇ ವರ್ಷಕ್ಕೆ ಕಾಲಿಟ್ಟಿದೆ ಎಲ್ಲರ ಸಹಕಾರದೊಂದಿಗೆ ಇದೀಗ ಜಿಲ್ಲೆಯಲ್ಲೇ ಸಂಚಲನ ಸೃಷ್ಟಿಸುವ ಕೆಲಸ ಆಗಿದೆ ಎಂದರು. ಮೊದಲ ವರ್ಷ 20, ದ್ವಿತೀಯ ವರ್ಷ 42 ಈ ವರ್ಷ 54 ತಂಡಗಳು ಭಾಗವಹಿಸಿವೆ ಇದಕ್ಕಾಗಿ ಎಲ್ಲಾ ಕಲಾವಿದರ ತಂಡಗಳಿಗೆ ಹಾಗೇ ಸಹಕಾರ ನೀಡುತ್ತಿರುವ ಸಮಸ್ತ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.



ದಾಖಲೆಯ 54 ತಂಡಗಳು ಭಾಗಿ
ಸ್ಥಳೀಯ ವೇಷಧಾರಿಗಳ ಗುಂಪು ಸ್ಪರ್ಧೆಯಲ್ಲಿ ವಿಶೇಷವಾಗಿ ಬಂಟ್ವಾಳ, ಸುಳ್ಯ, ಕಡಬ, ಪುತ್ತೂರು ಸೇರಿದಂತೆ ಜಿಲ್ಲೆಯಾದ್ಯಂತ ದಾಖಲೆಯ 54 ತಂಡಗಳ ಭಾಗವಹಿಸಿದ್ದವು. ಪೂವರಿ ಪತ್ರಿಕೆಯ ಸಂಪಾದಕ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು, ಶಿಕ್ಷಕ ಚಂದ್ರಶೇಖರ್ ಸುಳ್ಯಪದವು, ಮೋಹನ್ ಅಜಲಾಯ ಕೆಯ್ಯೂರು ತೀರ್ಪುಗಾರರಾಗಿದ್ದರು. ಸ್ಫರ್ಧೆಯಲ್ಲಿ ಆದಿ ಮುಗೇರ ಫ್ರೆಂಡ್ಸ್ ಬಂಬಿಲ ಪ್ರಥಮ ಸ್ಥಾನ ಪಡೆದುಕೊಂಡರೆ, ರನ್ನರ್ ಪ್ರಥಮ ಶ್ರೀಧರ ಬಳಗ ಪೆರ್ಲಂಪಾಡಿ, ರನ್ನರ್ ದ್ವಿತೀಯ ಲೀಯೋ ಬ್ರದರ‍್ಸ್ ಕಡೇಶಿವಾಲಯ ಪಡೆದುಕೊಂಡಿತು. ಪ್ರಥಮ 2 ಮುಡಿ ಅಕ್ಕಿ, ರನ್ನರ‍್ಸ್‌ಗೆ ತಲಾ 1 ಮುಡಿ ಅಕ್ಕಿ, ಟ್ರೋಫಿ ಹಾಗೇ ಭಾಗವಹಿಸಿದ ಎಲ್ಲಾ ತಂಡಗಳಿಗೂ ತಲಾ 2 ಸಾವಿರ ರೂ. ನಗದು ನೀಡಿ ಪ್ರೋತ್ಸಾಹಿಸಲಾಯಿತು. ನೇಮಾಕ್ಷ ಸುವರ್ಣ ನಿರೂಪಕರಾಗಿ, ನಾರಾಯಣ ಡಿ.ದರ್ಬೆತ್ತಡ್ಕ ಗಂತ್‌ದ ಗುರಿಕ್ಕಾರರಾಗಿದ್ದರು. ಚೆನ್ನ ಬಿಜಲ, ಹುಕ್ರಪ್ಪ ಬೊಳ್ಳಾಡಿ ಮತ್ತು ಮುನೀರ್ ಉಜರೋಡಿ ಸಹಕರಿಸಿದ್ದರು.


“ಈ ವರ್ಷ 54 ತಂಡಗಳು ಭಾಗವಹಿಸಿವೆ. ಭಾಗವಹಿಸಿದ ಪ್ರತಿ ತಂಡಕ್ಕೆ 2 ಸಾವಿರ ನಗದು ನೀಡಿ ಪ್ರೋತ್ಸಾಹ ನೀಡುವ ಕೆಲಸ ಆಗಿದೆ. ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಸಂಸ್ಕೃತಿ ಉಳಿಸುವಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ. ಸಹಕರಿಸುತ್ತಿರುವ ಸಮಸ್ತ ಜನತೆಗೆ, ಕಲಾವಿದರಿಗೆ, ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.”
ರಕ್ಷಿತ್ ರೈ ಮುಗೇರು, ಅಧ್ಯಕ್ಷರು ಬಾಂತಲಪ್ಪು ಜನಸೇವಾ ಸಮಿತಿ ಕುಂಬ್ರ

LEAVE A REPLY

Please enter your comment!
Please enter your name here