ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದಿಂದ ಜಗದೀಶ್ ಕೋಡಿಯಡ್ಕ ಸ್ಮರಣಾರ್ಥ ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ, ವೀಲ್ ಚೆಯರ್ ಹಸ್ತಾಂತರ ಕಾರ್ಯಕ್ರಮ

0

ಸಂಘಟನೆಯ ಕಾರ್ಯಕರ್ತನ ನೆನಪನ್ನು ಶಾಶ್ವತವಾಗಿಸಿರುವುದು ಶ್ಲಾಘನೀಯ: ಅರುಣ್ ಪುತ್ತಿಲ

ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗ ಇದರ ಆಶ್ರಯದಲ್ಲಿ ವೆನ್‌ಲಾಕ್ ಆಸ್ಪತ್ರೆ ರಕ್ತನಿಧಿ ಮಂಗಳೂರು ಇದರ ಸಹಯೋಗದೊಂದಿಗೆ ದಿ.ಜಗದೀಶ್ ಕೋಡಿಯಡ್ಕ ಇವರ ಪ್ರಥಮ ವರ್ಷದ ಸವಿನೆನಪಿಗಾಗಿ ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ ದತ್ತಿನಿಧಿ ಹಸ್ತಾಂತರ ಮತ್ತು ವೀಲ್‌ಚೆಯರ್ ಹಾಗೂ ಬಾವಿಯ ನವೀಕರಣ ಹಸ್ತಾಂತರ ಕಾರ್ಯಕ್ರಮ ನ.16 ರಂದು ಮಜ್ಜಾರ್ ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳು ಮೂಲಕ ಜಿಲ್ಲೆಗೆ ಮಾದರಿಯಾಗುವ ಕೆಲಸವನ್ನು ಸಂಘಟನೆ ಮಾಡುತ್ತಿದ್ದು ತನ್ನ ಸಂಘಟನೆಯ ಕಾರ್ಯಕರ್ತನ ನೆನಪನ್ನು ಶಾಶ್ವತವಾಗಿಸುವ ಕೆಲಸವನ್ನು ಸಂಘಟನೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.ಮಂಗಳೂರು ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ಉಸ್ತುವಾರಿ ಆಂಟೋನಿ ಡಿ’ಸೋಜಾರವರು ರಕ್ತದಾನದ ಬಗ್ಗೆ ಮಾಹಿತಿ ನೀಡುತ್ತಾ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ಕೂಡ ರಕ್ತದಾನ ಮಾಡಬಹುದಾಗಿದೆ ಎಂದು ತಿಳಿಸಿ ರಕ್ತದಾನ ಮಾಡುವ ಬಗ್ಗೆ ಮಾಹಿತಿ ನೀಡಿದರು.


ಪ್ರತಿಭಾ ಪುರಸ್ಕಾರ/ ದತ್ತಿನಿಧಿ ವಿತರಣೆ
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ 8 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ನಡೆಯಿತು. ಪೃಥ್ವಿ ರೈ, ಕೃತ್ವರ್ಥ್ ರೈ, ಸೃಜನ್ ಶೆಟ್ಟಿ, ಪ್ರಣ್ಯ, ಕೃತಿಕಾ, ವಿಖ್ಯಾತ್, ಅಸ್ಮಿತಾ ಎಸ್, ರತಿನ್ ಕುಮಾರ್‌ರವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘಟನೆಯ ಕಾರ್ಯಕರ್ತ ದಿ.ಜಗದೀಶ್ ಕೋಡಿಯಡ್ಕರವರ ನೆನಪಿನಲ್ಲಿ ಆರಂಭಿಸಿದ ದತ್ತಿನಿಧಿ ರೂ.10 ಸಾವಿರದ ಚೆಕ್ ಅನ್ನು ತಿಂಗಳಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ವಿಜಯ ಕೆ.ರವರಿಗೆ ಈ ಸಂದರ್ಭದಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಕುತ್ಯಾಡಿ ಹಸ್ತಾಂತರಿಸಲಾಯಿತು. ದತ್ತಿನಿಧಿ ಸ್ವೀಕರಿಸಿ ಮಾತನಾಡಿದ ವಿಜಯ ಕೆ.ರವರು, ಕಳೆದ ಹಲವು ವರ್ಷಗಳಿಂದ ಸಂಘಟನೆಯ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಹತ್ತೂರಿಗೆ ಮಾದರಿಯಾಗಿದೆ. ದಿ.ಜಗದೀಶ್ ಕೋಡಿಯಡ್ಕರವರ ನೆನಪಿನಲ್ಲಿ ಆರಂಭಿಸಿದ ದತ್ತಿನಿಧಿಯನ್ನು ನಮ್ಮ ತಿಂಗಳಾಡಿ ಶಾಲೆಗೆ ನೀಡಿರುವುದಕ್ಕೆ ಸಂಘಟನೆಗೆ ಅಬಾರಿಯಾಗಿದ್ದೇವೆ ಎಂದು ಹೇಳಿ ಶುಭ ಹಾರೈಸಿದರು. ಚೆಕ್ ಹಸ್ತಾಂತರಿಸಿದ ಸಂತೋಷ್ ಕುಮಾರ್ ಕುತ್ಯಾಡಿಯವರು ಸಂಘಟನೆಯ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನಾಡಿ ಶುಭ ಹಾರೈಸಿದರು.


ಬಾವಿಯ ನವೀಕರಣ ಉದ್ಘಾಟನೆ/ ವೀಲ್ ಚೆಯರ್ ಹಸ್ತಾಂತರ
ದಿ.ಜಗದೀಶ್ ಕೋಡಿಯಡ್ಕರವರ ಮನೆಯ ಬಾವಿಗೆ ರಿಂಗ್ ಹಾಕುವ ಮೂಲಕ ನವೀಕರಣ ಮಾಡಲಾಗಿದ್ದು ಇದರ ಹಸ್ತಾಂತರವನ್ನು ಉದ್ಯಮಿ ಅಜಿತ್ ಕುಮಾರ್ ರೈ ದೇರ್ಲರವರು ಉದ್ಘಾಟಿಸಿ ಶುಭ ಹಾರೈಸಿದರು. ವಿಶೇಷ ಚೇತನರಾಗಿರುವ ಮೋಹನ್ ದರ್ಬೆತ್ತಡ್ಕರವರಿಗೆ ದಿ ಆಸೋಸಿಯೇಶನ್ ಆಫ್ ಪೀಪಲ್ ವಿದ್ ದಿಸೆಬ್ಲಿಟಿ ಹಾಗೂ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ವೀಲ್ ಚೆಯರ್ ಅನ್ನು ಹಸ್ತಾಂತರ ಮಾಡಲಾಯಿತು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ ಎಂಡೆಸಾಗುರವರು ಮೋಹನ್ ದರ್ಬೆತ್ತಡ್ಕರವರಿಗೆ ವೀಲ್ ಚೆಯರ್ ಹಸ್ತಾಂತರ ಮಾಡಿ ಶುಭ ಹಾರೈಸಿದರು.


ಸಭಾಧ್ಯಕ್ಷತೆ ವಹಿಸಿದ್ದ ಸಂಘಟನೆಯ ಗೌರವ ಸಲಹೆಗಾರ, ಬೆಂಗಳೂರಿನ ಉದ್ಯಮಿ ಲೋಕೇಶ್ ರೈ ಅಮೈರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಸಂಘಟನೆ ತುರ್ತು ಸಹಾಯನಿಧಿ ಘಟಕದಿಂದ ರಮ್ಯ ಮಜ್ಜಾರಡ್ಕರವರಿಗೆ ತುರ್ತು ಆರ್ಥಿಕ ಸಹಾಯ ಹಸ್ತಾಂತರಿಸಲಾಯಿತು. ಹಲವು ಮಂದಿಯಿಂದ ರಕ್ತದಾನ ನಡೆಯಿತು.


ವೇದಿಕೆಯಲ್ಲಿ ಪುತ್ತೂರು ಹಿಂದೂ ಜಾಗರಣ ವೇದಿಕೆಯ ಮಾಜಿ ಅಧ್ಯಕ್ಷ ಅಶೋಕ್ ತ್ಯಾಗರಾಜನಗರ, ದಿ.ಜಗದೀಶ್ ಕೋಡಿಯಡ್ಕರವರ ತಂದೆ ರಾಮಣ್ಣ ಪೂಜಾರಿ ಕೋಡಿಯಡ್ಕ, ಕುಂಬ್ರ ಸುಶಾ ಡ್ರೆಸ್ಸಸ್ ಮಾಲಕ, ಉದ್ಯಮಿ ಸುರೇಶ್ ಕುಮಾರ್ ತಿಂಗಳಾಡಿ, ಉದ್ಯಮಿ ದೀಪಕ್ ರೈ ಮಾಡಾವು, ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಸಾರ್ಥಕ್ ರೈ ಪಾಪೆಮಜಲು, ಲೋಕನಾಥ ಪೂಜಾರಿ ಮಜ್ಜಾರ್, ಶಾಂತಪ್ಪ ಮಡಿವಾಳ ಕೋಡಿಯಡ್ಕ, ಸುಶೀಲ ಕೋಡಿಯಡ್ಕ ಉಪಸ್ಥಿತರಿದ್ದರು. ಗಗನ್ ಕೋಡಿಯಡ್ಕ ಪ್ರಾರ್ಥಿಸಿದರು. ಸಂಘಟಕ, ರಾಜ್ಯ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ.ಮಯೂರ ಸ್ವಾಗತಿಸಿದರು.ಕೀರ್ತಿ ಮಾವಿಲಕೊಚ್ಚಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಸಹಕರಿಸಿದ್ದರು.

LEAVE A REPLY

Please enter your comment!
Please enter your name here