ಯಕ್ಷಗಾನ ಕ್ಷೇತ್ರಕ್ಕೆ ಹೊಸ ಬೆಳಕು- ಟಿ. ಶ್ಯಾಮ ಭಟ್
ಪುತ್ತೂರು: ಕಾಡೂರು ಸೀತಾರಾಮ ಶಾಸ್ತ್ರಿರವರ ಅಧ್ಯಕ್ಷತೆಯಲ್ಲಿ ಪುತ್ತೂರು ಯಕ್ಷರಂಗದ ನೇತೃತ್ರದಲ್ಲಿ ನಡೆಯುವ ಯಕ್ಷಗಾನ ತಾಳಮದ್ದಳೆ ಹಾಗೂ ಹಾಸ್ಯರತ್ನ ವಿಟ್ಲ ಜೋಷಿ ಮತ್ತು ನಯನ ಕುಮಾರ್ ಸಂಸ್ಮರಣೆ ಅರ್ಥಪೂರ್ಣ ರೀತಿಯಲ್ಲಿ ಪ್ರತಿ ವರ್ಷ ಮೂಡಿ ಬರುತ್ತಿರುವುದು ತುಂಬಾ ಸಂತೋಷ ತಂದಿದೆ. ಇದು ಯಕ್ಷಗಾನ ಕ್ಷೇತ್ರಕ್ಕೆ ಹೊಸ ಬೆಳಕಾಗಿದೆ ಎಂದು ಬೆಂಗಳೂರಿನ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರೂ ಆಗಿರುವ ಕಲಾವಿದರ ಪೋಷಕರಾದ ಟಿ. ಶ್ಯಾಮ ಭಟ್ ಹೇಳಿದರು.

ಅ.2ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಯಕ್ಷರಂಗ ಪುತ್ತೂರು ವತಿಯಿಂದ ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗದ ಸಹಭಾಗಿತ್ವದೊಂದಿಗೆ ನಡೆದ ಯಕ್ಷಗಾನ ತಾಳಮದ್ದಳೆ ಮತ್ತು ರಸಿಕ ರತ್ನ' ವಿಟ್ಲ ಜೋಷಿ ಮತ್ತು
ಹಾಸ್ಯರತ್ನ’ ನಯನ ಕುಮಾರ್ರವರ ಗುರುಶಿಷ್ಯ – ಸಂಸ್ಮರಣೆ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷರಾಗಿ ಪಂಜಿಗುಡ್ಡೆ ಈಶ್ವರ ಭಟ್ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಅಧ್ಯಕ್ಷರಾದ ಮೇಲೆ ದೇವಾಲಯಕ್ಕೆ ಎಷ್ಟು ಜಾಗ ಇದೆ ಎಂಬುದು ಗೊತ್ತಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೀತಾರಾಮ ಶಾಸ್ತ್ರಿರವರು ಬಹಳ ಮುತುವರ್ಜಿಯಿಂದ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ : ಪಂಜಿಗುಡ್ಡೆ ಈಶ್ವರ ಭಟ್
ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ರವರು ಮಾತನಾಡಿ, ಯಕ್ಷರಂಗದಲ್ಲಿ ಸೇವೆ ಸಲ್ಲಿಸಿದವರ ಸಂಸ್ಮರಣೆ ಮಾಡುವ ಕಾರ್ಯ ಇಲ್ಲಿ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಯಕ್ಷರಂಗದ ಅಧ್ಯಕ್ಷ ಕಾಡೂರು ಸೀತಾರಾಮ ಶಾಸ್ತ್ರಿರವರು ಬಹಳ ಮುತುವರ್ಜಿಯಿಂದ ಪ್ರತಿ ವರ್ಷ ಕಾರ್ಯಕ್ರಮವನ್ನು ಸಂಘಟಿಸುತ್ತಿದ್ದಾರೆ. ಇವರ ಕಲಾ ಸೇವೆಗೆ ನಾವೆಲ್ಲ ಅಭಿನಂದಿಸಬೇಕು ಎಂದು ಹೇಳಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸುತ್ತು ಮತ್ತ ನವರಾತ್ರಿ ಪರ್ವದ ಈ ಸಂದರ್ಭದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುವುದರಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಇದರಿಂದ ದೇವಾಲಯಕ್ಕೆ ಆದಾಯ ಬರುತ್ತದೆ. ಪ್ರತಿ ದಿನ ಅನ್ನದಾನ ಸೇವೆ ನಡೆಯುತ್ತಿದೆ. ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಾರೆ. ಈಗಾಗಲೇ ಭಕ್ತಾಧಿಗಳ ಕೊಡುಗೆಯಾಗಿ 500 ಕಿಂಟ್ವಾಲ್ ಅಕ್ಕಿ ಸಂಗ್ರಹವಾಗಿದೆ ಎಂದು ಹೇಳಿದ ಅವರು ದೇವಾಲಯಕ್ಕೆ ಇಂದು ಆಗಮಿಸಿದ ಶ್ಯಾಮ್ ಭಟ್ರೂ ಕೂಡ ನಾಳೆಯೇ ಅನ್ನದಾನಕ್ಕೆ ಅಕ್ಕಿಯನ್ನು ಕಳಿಸುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ದೇವಾಲಯ ಅಭಿವೃದ್ಧಿ ಆಗಬೇಕು, ಭಕ್ತರು ಜಾಸ್ತಿ ಬರಬೇಕು ಎಂದು ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.
ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಪ್ರವರ್ತಕ ಡಾ. ಚಂದ್ರಶೇಖರ್ ದಾಮ್ಲೆರವರು ರಸಿಕ ರತ್ನ ವಿಟ್ಲ ಜೋಷಿ ಮತ್ತು ಹಾಸ್ಯರತ್ನ ನಯನಕುಮಾರ್ ಬಗ್ಗೆ ಸಂಸ್ಮರಣೆಯಲ್ಲಿ ಮಾತನಾಡಿ ಜೋಷಿ ಮತ್ತು ನಯನ ಕುಮಾರ್ ರವರುಗಳು ಯಕ್ಷಗಾನ ರಂಗದ ಹಾಸ್ಯ ವಿಭಾಗದಲ್ಲಿ ಸಲ್ಲಿಸಿದ ಸೇವೆ ಅಪ್ರತಿಮಾ ಎಂದು ಹೇಳಿ, ಇಬ್ಬರು ಕಲಾವಿದರೂ ಕೂಡ ಅತ್ಯುತ್ತಮವಾದ ಹಾಸ್ಯ ಸನ್ನಿವೇಶಗಳನ್ನು ರಸವತ್ತಾಗಿ ಪ್ರೇಕ್ಷಕರಿಗೆ ತಿಳಿಯಪಡಿಸುತ್ತಿದ್ದರು ಎಂದು ಹೇಳಿದರು.
ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನದ ಅಧ್ಯಕ್ಷ ಡಾ| ಹರೀಶ್ ಜೋಷಿ ಸಂದಭೋಚಿತವಾಗಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ವಿ.ಜಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗದ ಉದಯ ನಯನ್ ಕುಮಾರ್ ವಂದಿಸಿದರು. ಎನ್.ಕೆ.ರಾಮಚಂದ್ರ ಭಟ್ ಪನೆಯಾಲರವರು ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ಶಂಭು ಶರ್ಮ ವಿಟ್ಲರವರಿಗೆ ನಿಧಿ ಸಮರ್ಪಣೆ ಮಾಡಲಾಯಿತು. ಪುತ್ತೂರು ಯಕ್ಷರಂಗದ ಅಧ್ಯಕ್ಷ ಕಾಡೂರು ಸೀತಾರಾಮ ಶಾಸ್ತ್ರಿಮತ್ತು ಪದಾಧಿಕಾರಿಗಳು ಹಾಗೂ ನೂರಾರು ಪ್ರೇಕ್ಷಕರು ಉಪಸ್ಥಿತರಿದ್ದರು.
ಯಕ್ಷಗಾನ ತಾಳಮದ್ದಳೆ
ಪೂರ್ವಾಹ್ನ 9.30ರಿಂದ ಸೇರಾಜೆ ಸೀತಾರಾಮ ಭಟ್ಟ ವಿರಚಿತ ಹವ್ಯಕ ಪೌರಾಣಿಕ ಕಥಾನಕ ಭೂಮಿಂಜಯನ ಬೊಬ್ಬೆ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತೂರು ರಮೇಶ ಭಟ್, ಮೃದಂಗ ಮತ್ತು ಚೆಂಡೆಯಲ್ಲಿ ಗಣೇಶ್ ಭಟ್ ಬೆಳ್ಳಾರೆ, ರಾಮ್ ಪ್ರಸಾದ್ ವದ್ವ, ಪಿ.ಜಿ.ಜಗನ್ನಿವಾಸ ರಾವ್ ಪುತ್ತೂರು. ಅರ್ಥಧಾರಿಗಳಾಗಿ ಶಂಭು ಶರ್ಮ ವಿಟ್ಲ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ರಾಧಾಕೃಷ್ಣ ಕಲ್ಚಾರ್, ಸೇರಾಜೆ ಸೀತಾರಾಮ ಭಟ್ಟ, ಪಶುಪತಿ ಶಾಸ್ತ್ರಿ, ಡಾ| ಹರೀಶ್ ಜೋಷಿ ವಿಟ್ಲ, ಹರೀಶ ಬಳಂತಿಮೊಗರು, ಭಾಗವಹಿಸಿದರು.
ಶನೀಶ್ವರ ಮಹಾತ್ಮೆ ತಾಳಮದ್ದಳೆ:
ಮಧ್ಯಾಹ್ನ 2 ರಿಂದ ಯಕ್ಷಗಾನ ತಾಳಮದ್ದಳೆ ಶನೀಶ್ವರ ಮಹಾತ್ಮೆ ( ಕವಿ ಗಣೇಶ್ ಕೊಲೆಕ್ಕಾಡಿ ವಿರಚಿತ ಪೌರಾಣಿಕ ಕಥಾನಕ) ನಡೆಯಿತು. ಹಿಮ್ಮೇಳದಲ್ಲಿ ಭಾಗವತರರಾಗಿ ಕುರಿಯ ಗಣಪತಿ ಶಾಸ್ತ್ರಿ, ವಾಸುದೇವ ಭಟ್ ಎರ್ಮಾಳು, ಮೃದಂಗ ಮತ್ತು ಚೆಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀನಾರಾಯಣ ಅಡೂರು, ರಾಮಮೂರ್ತಿ ಕುದ್ರಕೋಡ್ಲು ಹಾಗೂ ಚಕ್ರತಾಳದಲ್ಲಿ ರಾಜೇಂದ್ರ, ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಶಂಭು ಶರ್ಮ ವಿಟ್ಲ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗೇರು, ಪಶುಪತಿ ಶಾಸ್ತ್ರಿ, ಸೇರಾಜೆ ಸೀತಾರಾಮ ಭಟ್, ಡಾ| ಹರೀಶ್ ಜೋಷಿ ವಿಟ್ಲ ಭಾಗವಹಿಸಿದರು.
ಯಕ್ಷಗಾನವನ್ನು ಬೆಳೆಸುವುದೇ ಸಂಘಟನೆಯ ಗುರಿ
ಪುತ್ತೂರು ಯಕ್ಷರಂಗ ಸಂಸ್ಥೆಯ ಮೂಲಕ ನಮ್ಮ ಯುವ ಪೀಳಿಗೆಯಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಸಬೇಕೆಂಬ ಉzಶದಿಂದ ನಾವು ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜನೆ ಮಾಡುತ್ತೇವೆ. ಯಕ್ಷಪ್ರೇಮಿಗಳ ಸಹಕಾರ, ಪ್ರೋತ್ಸಾಹ ಸದಾ ದೊರೆಯುತ್ತಿದ್ದು, ಮುಂದೆಯೂ ತಮ್ಮ ಸಹಕಾರಬೇಕು.
ಕಾಡೂರು ಸೀತಾರಾಮ ಶಾಸ್ತ್ರಿ, ಅಧ್ಯಕ್ಷರು ಯಕ್ಷರಂಗ ಪುತ್ತೂರು