ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್ ವಠಾರದಲ್ಲಿ ತ್ಯಾಜ್ಯ ರಾಶಿ ಹಾಗೂ ಗ್ರಾ.ಪಂ ವಠಾರದಲ್ಲಿ ಸ್ವಚ್ಛತೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಗ್ರಾ.ಪಂಗೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಅ.3ರಂದು ನಡೆದಿದೆ.

ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಹಾಗೂ ಮಾಜಿ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ ನೇತೃತ್ವದಲ್ಲಿ ಗ್ರಾ.ಪಂಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಿಡಿಓ ಮನ್ಮಥ ಅಜಿರಂಗಳ ಜೊತೆ ಹಾಗೂ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಜೊತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾ.ಪಂ ವಠಾರದಲ್ಲೇ ಕಸದ ರಾಶಿ ತುಂಬಿದ್ದರೂ ಗ್ರಾ.ಪಂನಿಂದ ಬೇರೆಡೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದು ಇದನ್ನು ನೋಡುವಾಗ ನಾಚಿಕೆಯಾಗುತ್ತಿದೆ ಎಂದು ಸುಪ್ರೀತ್ ಕಣ್ಣಾರಾಯ ಹೇಳಿದರು. ಅ.2ರಂದು ಗಾಂಧಿ ಜಯಂತಿ ಆಚರಣೆ ಪಂಚಾಯತ್‌ನಲ್ಲಿ ಆಗಿದ್ದು ಆಗಲಾದರೂ ಸ್ವಚ್ಛತೆ ಬಗ್ಗೆ ಗ್ರಾ.ಪಂನವರಿಗೆ ತಿಳಿಯದೇ ಹೋಗಿರುವುದು ವಿಪರ್ಯಾಸ, ಇದು ಗಾಂಧೀಜಿಗೆ ಮಾಡಿದ ಅಣಕವಾಗಿದ್ದು ಸ್ವಚ್ಛತೆಯ ಪರಿಕಲ್ಪನೆ ಬಗ್ಗೆ ಪ್ರಧಾನಿಯವರು ನೀಡಿರುವ ಕರೆಯನ್ನೂ ಇಲ್ಲಿ ನಿರ್ಲಕ್ಷಿಸಲಾಗಿದೆ. ಊರಿಗೆ ಸ್ವಚ್ಛತೆಯ ಪಾಠ ಮಾಡುವ ನೀವು ಮೊದಲು ಪಂಚಾಯತ್ ವಠಾರವನ್ನು ಸ್ವಚ್ಛವಾಗಿಡಿ ಎಂದು ಅವರು ಹೇಳಿದರು.
ಪ್ರವೀಣ್ ಆಚಾರ್ಯ ನರಿಮೊಗರು ಮಾತನಾಡಿ ಗ್ರಾ.ಪಂ ವಠಾರದಲ್ಲಿ ಕಸದ ರಾಶಿ ತುಂಬಿದೆ, ಶೌಚಾಲಯದ ಅವಸ್ಥೆ ಹೇಳತೀರದಾಗಿದೆ, ಗ್ರಾ.ಪಂ ಅಂಗಳದಲ್ಲಿ ಪಾಚಿ ಹಿಡಿದು ಇತ್ತೀಚೆಗೆ ಮಹಿಳೆಯೊಬ್ಬರು ಬಿದ್ದು ಕಾಲು ಮುರಿತಕ್ಕೊಳಗಾಗಿದ್ದರೂ ಕೂಡಾ ಅದಕ್ಕೆ ಬ್ಲೀಚಿಂಗ್ ಪೌಡರ್ ಹಾಕಲು ಪಂಚಾಯತ್‌ನಿಂದ ಸಾಧ್ಯವಾಗಿಲ್ಲ, ಇದೆಲ್ಲವೂ ಗ್ರಾ.ಪಂ ನಿರ್ಲಕ್ಷ್ಯ ಮತ್ತು ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು. ಗ್ರಾ.ಪಂ ವಠಾರ ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುವ ಕೇಂದ್ರವಾಗಿ ಮಾರ್ಪಟ್ಟಿದೆಯೇ ಎಂದು ಪ್ರಶ್ನಿಸಿದ ಅವರು ಒಟ್ಟಾರೆ ವ್ಯವಸ್ಥೆ ಅವ್ಯವಸ್ಥೆಯಾಗಿದೆ ಎಂದು ಹೇಳಿದರು. ನಾವು ಶಾಸಕರ ಬೆನ್ನುಬಿದ್ದು ಕೋಟ್ಯಾಂತರ ಅನುದಾನ ತಂದಿದ್ದೇವೆ, ಆದರೆ ಗ್ರಾ.ಪಂಗೆ ಅಭಿವೃದ್ಧಿಯ ಇಚ್ಛಾಶಕ್ತಿಯೇ ಇಲ್ಲ, ಅಭಿವೃದ್ಧಿ ಶೂನ್ಯ ಪಂಚಾಯತ್ ಆಗಿ ಮುಂಡೂರು ಗ್ರಾ.ಪಂ ಗುರುತಿಸಿಕೊಂಡಿದೆ ಎಂದು ಆರೋಪಿಸಿದರು.
ಪಿಡಿಓ ಮನ್ಮಥ ಅಜಿರಂಗಳ ಉತ್ತರಿಸಿ ನಾವು ಸೆ.೨೫ರಂದು ಗ್ರಾ.ಪಂ ವಠಾರ ಸ್ವಚ್ಛಗೊಳಿಸುವ ಬಗ್ಗೆ ನಿರ್ಧರಿಸಿದ್ದೆವು, ಆದರೆ ಸರಕಾರದಿಂದ ಸಮೀಕ್ಷೆ ಆರಂಭವಾದ ಕಾರಣ ಮಾಡಲು ಸಾಧ್ಯವಾಗಿಲ್ಲ, ಟಾಯ್ಲೆಟ್‌ನ ಬೀಗವನ್ನು ಯಾರೋ ಒಡೆದು ಹಾಕಿರುವ ಕಾರಣದಿಂದ ಸ್ವಚ್ಛತೆ ಇಲ್ಲದಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಗಣೇಶ್ ಬಂಗೇರ ಕೊರುಂಗು ಮಾತನಾಡಿ ಗ್ರಾಮ ಪಂಚಾಯತ್‌ನವರು ಜವಾಬ್ದಾರಿ ಮರೆತವರಂತೆ ಮಾಡಬಾರದು, ತಮ್ಮ ಕಾಲ ಬುಡದಲ್ಲೇ ಕಸದ ರಾಶಿ ತುಂಬಿಕೊಂಡಿದ್ದರೂ ಅದನ್ನು ಸ್ವಚ್ಛಗೊಳಿಸಲು ನಿಮ್ಮಿಂದ ಆಗದಿರುವುದು ದುರಂತ ಎಂದು ಹೇಳಿದರು. ಮುಂಡೂರು ವಲಯ ಕಾಂಗ್ರೆಸ್ ಕಾರ್ಯದರ್ಶಿ ಅಶ್ರಫ್ ಮುಲಾರ್ ಮಾತನಾಡಿ ಗ್ರಾ.ಪಂ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಮಾತನಾಡಿ ನಿಮಗೆ ನಾವು ಮಾಡುವ ಒಳ್ಳೆಯ ಕಾರ್ಯ ಯಾವುದೂ ಕಾಣುವುದಿಲ್ಲ, ಎಲ್ಲಿ ತಪ್ಪು ಇದೆ ಎನ್ನುವುದನ್ನು ಮಾತ್ರ ಹುಡುಕುತ್ತೀರಿ, ಗ್ರಾ.ಪಂ ಅಂಗಳದಲ್ಲಿ ಯಾರಾದರೂ ಬಿದ್ದರೆ ಅದನ್ನು ನಾವು ಜವಾಬ್ದಾರರಾಗುವುದಿಲ್ಲ, ಕೆಲವೊಂದು ಸಂದರ್ಭಗಳಲ್ಲಿ ಕೆಲವು ಘಟನೆಗಳು ನಡೆಯುತ್ತದೆ. ಅದಕ್ಕೆಲ್ಲಾ ಪಂಚಾಯತ್ ಕಾರಣ ಎನ್ನುವುದು ನಿಮ್ಮ ವಾದವಾದರೆ ಅದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು. ಗ್ರಾ.ಪಂ ವಠಾರವನ್ನು ಸ್ವಚ್ಛಗೊಳಿಸುವ ಬಗ್ಗೆ ಮೊದಲೇ ತೀರ್ಮಾನಿಸಲಾಗಿತ್ತು. ಅದರ ಮಧ್ಯೆ ಸರಕಾರ ಸಮೀಕ್ಷೆ ಆರಂಭಿಸಿದ್ದರಿಂದ ಸ್ವಚ್ಛತೆ ಮಾಡುವ ಕಾರ್ಯ ವಿಳಂಬವಾಯಿತು. ನಮ್ಮ ಮೇಲೆ ಆರೋಪ ಮಾಡುವ ನಿಮಗೂ ಜವಾಬ್ದಾರಿಯಿದೆ, ಟೀಕೆ ಮಾಡುವುದಷ್ಟೇ ನಿಮ್ಮ ಕೆಲಸವಲ್ಲ ಎಂದು ಹೇಳಿದರು. ನಾವು ಏನೆಂದು ಗ್ರಾಮದ ಜನರಿಗೆ ಗೊತ್ತಿದೆ, ಕೆಲವೇ ಕೆಲವರ ಆರೋಪಕ್ಕೆ ನಾವು ಉತ್ತರ ಕೊಡಬೇಕೆಂದಿಲ್ಲ, ಅಭಿವೃದ್ಧಿ ಹೇಗೆ ಮಾಡಬೇಕೆನ್ನುವುದಕ್ಕೆ ನಮಗೆ ಯಾರಿಂದಲೂ ನೀತಿ ಪಾಠದ ಅಗತ್ಯವಿಲ್ಲ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ನೂತನವಾಗಿ ಆಗಮಿಸಿದ ಪಿಡಿಓ ಜಗದೀಶ್ ಉಪಸ್ಥಿತರಿದ್ದರು.
ಅ.೪ರಂದು ಸ್ವಚ್ಛತೆ:
ಅ.೪ರಂದು ಗ್ರಾ.ಪಂ ವಠಾರವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುವುದಾಗಿ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಹೇಳಿದರು.
ಪ್ರತಿಭಟನೆಯ ಎಚ್ಚರಿಕೆ:
ಬಳಿಕ ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ಆಗಮಿಸಿ ಸ್ವಚ್ಛತೆ ವಿಚಾರವಾಗಿ ಗ್ರಾ.ಪಂ ನಿರ್ಲಕ್ಷ್ಯದ ಬಗ್ಗೆ ಮಾತನಾಡಿದರು. ಈ ವೇಳೆ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಮತ್ತು ಕಮಲೇಶ್ ಎಸ್.ವಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಳಿಕ ಮನವಿ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರು ಅ.6ರ ಮೊದಲು ಗ್ರಾ.ಪಂ ವಠಾರ ಸ್ವಚ್ಛತೆ ಮಾಡದೇ ಇದ್ದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಗ್ರಾ.ಪಂ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕಮಲೇಶ್ ಎಸ್.ವಿ, ಸುಪ್ರೀತ್ ಕಣ್ಣಾರಾಯ, ಪ್ರವೀಣ್ ಆಚಾರ್ಯ, ಜಯಾನಂದ ಆಳ್ವ ಪಟ್ಟೆ, ಮಹಮ್ಮದ್ ಮುಂಡೂರು, ನೀಲಪ್ಪ ನಾಯ್ಕ ಅಂಬಟ ಉಪಸ್ಥಿತರಿದ್ದರು.