ನೆಲ್ಯಾಡಿ: ಉಪ್ಪಿನಂಗಡಿ ಅರಣ್ಯ ಇಲಾಖೆ ವ್ಯಾಪ್ತಿಯ ಶಿಬಾಜೆಯಲ್ಲಿ ಒತ್ತುವಾರಿಯಾಗಿದ್ದ ಅರಣ್ಯ ಭೂಮಿಯನ್ನು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಪೊಲೀಸ್ ಬಂದೋಬಸ್ತ್ನಲ್ಲಿ ಅ.3ರಂದು ಕಾರ್ಯಾಚರಣೆ ನಡೆಸಿ ತೆರೆವು ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಅರಂಪಾಜೆ ಎಂಬಲ್ಲಿ ಸರ್ವೆ ನಂ.184/1ಸಿಯಲ್ಲಿ 1.9 ಎಕರೆ ಅರಣ್ಯ ಭೂಮಿಯನ್ನು ಓ.ಪಿ. ಜಾರ್ಜ್ ಎಂಬವರು ಅತಿಕ್ರಮಿಸಿಕೊಂಡು ರಬ್ಬರ್ ಕೃಷಿ ಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ನಿವಾಸಿ ಅಶೋಕ್ ಆಚಾರ್ಯ ಎಂಬವರು ಕರ್ನಾಟಕ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಅತಿಕ್ರಮಣದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ ಅವರ ಪೀಠ ಕೈಗೆತ್ತಿಕೊಂಡಿತ್ತು. ಈ ಪ್ರಕರಣ 2002-03ರಲ್ಲಿ ಆರಂಭವಾಗಿದ್ದರೂ ಅಧಿಕಾರಿಗಳು ಯಾವುದೇ ತೀರ್ಮಾನ ಕೈಗೊಳ್ಳದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಹೇಳಿತ್ತು.
ಅರಣ್ಯ ಇಲಾಖೆ ಮೆಮೊ:
ಈ ಪ್ರಕರಣದ ವಿಚಾರಣೆಯನ್ನು ರಾಜ್ಯ ಅರಣ್ಯ ಕಾಯಿದೆ 1963ರ ಕಲಂ 64-0 ಅಡಿಯಲ್ಲಿ ಮಾಡಲಾಗಿತ್ತು. 2024ರ ಮಾ.15 ಹಾಗೂ ಜೂ.15ರಂದು ಪ್ರತಿವಾದಿ ಓ.ಪಿ. ಜಾರ್ಜ್ ಅವರಿಗೆ ನೋಟಿಸ್ ನೀಡಿದ್ದರೂ ಅವರು ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದರು ಎಂದು ಉಪವಿಭಾಗದ ಅರಣ್ಯಾಧಿಕಾರಿಯವರು ಹೈಕೋರ್ಟ್ಗೆ ಸಲ್ಲಿಸಿದ ಮೆಮೊದಲ್ಲಿ ವಿವರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಹೈಕೋರ್ಟ್ ಮೂರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ಕಾನೂನು ಪ್ರಕಾರ ಅಂತಿಮ ಆದೇಶ ಹೊರಡಿಸಬೇಕು. ಈ ಅವಧಿಯಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ ನ್ಯಾಯಾಲಯದ ಅವಮಾನ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟ ಎಚ್ಚರಿಕೆ ನೀಡಿತು. ಹೈಕೋರ್ಟ್ನ ಈ ಎಚ್ಚರಿಕೆಯ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಅ.3ರಂದು ಕಾರ್ಯಾಚರಣೆ ನಡೆಸಿ ಅರಣ್ಯ ಭೂಮಿಯಲ್ಲಿದ್ದ ರಬ್ಬರ್ ತೋಟ ತೆರವುಗೊಳಿಸಿ ಜಾಗ ಮರು ಸ್ವಾಧೀನ ಪಡಿಸಿಕೊಂಡಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್, ಉಪವಲಯ ಅರಣ್ಯಾಧಿಕಾರಿಗಳಾದ ರಾಜೇಶ್, ಶಿವಾನಂದ ಆಚಾರ್ಯ, ಅರಣ್ಯ ಪಾಲಕ ಸುನಿಲ್ ನಾಯ್ಕ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಅರಣ್ಯ ಭೂಮಿ ಮರು ಸ್ವಾಧೀನಪಡಿಸಿಕೊಂಡಿದೆ.