ಪುತ್ತೂರು: ಗಾಂಧಿ ಜಯಂತಿ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಮಹಾಸಭೆಯು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಇವರ ನೇತೃತ್ವದಲ್ಲಿ ನಡೆಯಿತು.
ಸಭೆಯ ವರದಿ ಹಾಗೂ ಆಯವ್ಯಯವನ್ನು ಕಾರ್ಯದರ್ಶಿ ಯಶಸ್ ಎಸ್.ಜೆ. ಮಂಡಿಸಿದರು. ಸಭೆಯಲ್ಲಿ 2025-26ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಹಿರಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ನಂತರ ಸಮರ್ಪಣಾ ಮನೋಭಾವದಿಂದ ದುಡಿದು ವೃತ್ತಿಯಿಂದ ನಿವೃತ್ತರಾದ ಗುರುವೃಂದದವರನ್ನು ಹಾಗೂ ಕಛೇರಿ ಸಹಾಯಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೇಮನಾಥ ಶೆಟ್ಟಿ ಕಾವು ಅವರು ಕಲಿತ ಕಾವು ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಅವರು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಿದರು ಎನ್ನುವುದನ್ನು ಉದಾಹರಣೆಯಾಗಿಟ್ಟುಕೊಂಡು, ಈ ಶಾಲೆಯಲ್ಲಿ ವಿದ್ಯಾರ್ಜನೆಗೈದ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಒಂದಾಗಿ ತಾವು ಕಲಿತ ಶಾಲೆಯ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಶ್ರಾಂತ ಶಿಕ್ಷಕಿ ವಸಂತಿ ಕೆ. ಹಾಗೂ ರೂಪಕಲಾ ಕೆ. ರವರು ಹಿರಿಯ ವಿದ್ಯಾರ್ಥಿಗಳ ಶಾಲಾ ದಿನಗಳನ್ನು ನೆನಪಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ರವರು ಮಾತನಾಡಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು ಶಾಲೆಗೆ ಸರ್ವರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಪ್ರಭಾರ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್ ರವರು ಮಾತನಾಡಿ ಹಿರಿಯ ವಿದ್ಯಾರ್ಥಿಗಳು ಶಾಲೆಯೊಡನೆ ಆತ್ಮೀಯ ಒಡನಾಟವಿಟ್ಟುಕೊಂಡರೆ ಶಾಲೆಯ ಬೆಳವಣಿಗೆ ಒಳ್ಳೆ ರೀತಿಯಲ್ಲಿ ಮುಂದುವರಿಯಲು ಸಾಧ್ಯ ಎಂದು ತಿಳಿಸಿದರು. ವೇದಿಕೆಯಲ್ಲಿ ನಿವೃತ್ತ ಎಟೆಂಡರ್ ಐತ್ತಪ್ಪರವರು ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿಗಳಾದ ಕೃಷ್ಣಪ್ರಸಾದ್ ಸರ್ವರನ್ನೂ ಸ್ವಾಗತಿಸಿ, ಜನನಿ ವಂದಿಸಿದರು. ಭೂಮಿಕಾ ಜಿ. ಕಾರ್ಯಕ್ರಮವನ್ನು ನಿರೂಪಿಸಿದರು.
ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ರಚನೆ
ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಮಹಾಸಭೆಯು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಇವರ ನೇತೃತ್ವದಲ್ಲಿ ನಡೆಯಿತು. ಸಭೆಯ ವರದಿ ಹಾಗೂ ಆಯವ್ಯಯವನ್ನು ಕಾರ್ಯದರ್ಶಿ ಯಶಸ್ ಎಸ್.ಜೆ. ಮಂಡಿಸಿದನು. ಸಭೆಯಲ್ಲಿ 2025-26ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಸಾಗರ್ ಎಂ., ಉಪಾಧ್ಯಕ್ಷರಾಗಿ ಧನುಷ್ಆಚಾರ್ಯ, ಕಾರ್ಯದರ್ಶಿಯಾಗಿ ನಿರ್ಮಿತ್ ಕೆ.ಪಿ. , ಜತೆ ಕಾರ್ಯದರ್ಶಿಯಾಗಿ ಶ್ರೀರಕ್ಷಾ ಹಾಗೂ ಕೋಶಾಧಿಕಾರಿಯಾಗಿ ನಿಶ್ಚಿತ್ ರವರು ಆಯ್ಕೆಯಾದರು.