ರಾಮಕುಂಜ: ಕಡಬ ತಾಲೂಕಿನ ಕೊಯಿಲ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ರಾಮಕುಂಜ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ 1 ವಾರ ನಡೆದ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಸಮಾರೋಪ ಭಾಷಣ ಮಾಡಿದ ನಿವೃತ್ತ ಪ್ರಾಂಶುಪಾಲ ಭವಾನಿಶಂಕರ ಪರಂಗಾಜೆ ಅವರು, ರಾಷ್ಟ್ರೀಯ ಸೇವಾ ಯೋಜನೆಯು ಯುವಜನರಲ್ಲಿ ಸೇವಾ ಮನೋಭಾವ ಮೂಡಿಸುತ್ತದೆ. ಇದರಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಪ್ರಜ್ಞೆ ಸಹಜವಾಗಿ ಬರುತ್ತದೆ. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಲ್ಲಿ ಸಹೋದರತೆ, ಸಂಯಮ, ಸಮಯ ಪ್ರಜ್ಞೆ, ತ್ಯಾಗ, ನಾಯಕತ್ವ ಮತ್ತು ಸಮಾಜದೊಂದಿಗೆ ಬೆರೆಯುವ ವಿಶಿಷ್ಟ ಬದಲಾವಣೆಗಳನ್ನು ಕಾಣಲು ಸಾಧ್ಯ. ಈ ಶಿಬಿರದ ಎಲ್ಲ ವಿದ್ಯಾರ್ಥಿ ಸ್ವಯಂಸೇವಕರಲ್ಲಿ ಇಂತಹ ಬದಲಾವಣೆಗಳು ನಿಶ್ಚಲವಾಗಿ ಕಾಣುತ್ತಿದೆ. ಆದುದರಿಂದ ಈ ಶಿಬಿರವು ಖಂಡಿತವಾಗಿಯೂ ಯಶಸ್ವಿಯಾಗಿದೆ ಎಂದರು.
ಅತಿಥಿಯಾಗಿದ್ದ ಆಲಂಕಾರು ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ರೇಖಾ ಅವರು, ಇಂದಿನ ಯುವ ಜನರು ದಾರಿ ತಪ್ಪುತ್ತಿರುವ ಸನ್ನಿವೇಶದಲ್ಲಿ ಎನ್.ಎಸ್.ಎಸ್ ನಂತಹ ಘಟಕಗಳು ವಿದ್ಯಾರ್ಥಿಗಳಿಗೆ ಒಳ್ಳೆಯ ಜೀವನ ಪಾಠ, ಸಂಸ್ಕಾರ ಮತ್ತು ರಾಷ್ಟ್ರೀಯತೆಯನ್ನು ಮೂಡಿಸುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ, ಶಿಬಿರದ ನಿರ್ದೇಶಕರೂ ಆದ ಚಂದ್ರಶೇಖರ ಕೆ. ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಯುವಜನರು ಕೃಷಿ, ಪರಿಸರದಿಂದ ದೂರವಾಗುತ್ತಿದ್ದಾರೆ. ಇಂತಹ ಯುವ ಸಮೂಹವನ್ನು ಮತ್ತೆ ಪರಿಸರ, ಸಮಾಜದ ಕಡೆಗೆ ಕರೆದುಕೊಂಡು ಬಂದಾಗ ಅಲ್ಲಿನ ನೈಜ್ಯ ಸಮಸ್ಯೆಯ ಅರಿವಾಗಿ ಆ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಯುವಕರು ಕೆಲಸ ಮಾಡುತ್ತಾರೆ. ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಅನೇಕ ಕೃಷಿ ಚಟುವಟಿಕೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಹೇಳಲು ಸಂತೋಷವಾಗುತ್ತಿದೆ. ಆ ಮೂಲಕ ವಿದ್ಯಾರ್ಥಿಗಳು ಇನ್ನಷ್ಟು ಕೃಷಿಯ ಕಡೆಗೆ ಆಕರ್ಷಿತರಾಗಿ, ಪರಿಸರಕ್ಕೆ ಹತ್ತಿರವಾಗಿದ್ದಾರೆ. ಈ ನಿಟ್ಟಿನಲ್ಲಿ ಸಹಕರಿಸಿದ ಸರ್ವರಿಗೂ ವಂದನೆಗಳು ಎಂದು ಹೇಳಿದರು.
ಶಿಬಿರಾಧಿಕಾರಿ ಕೀರ್ತನ್ ಶಿಬಿರದ ವರದಿಯನ್ನು ಮಂಡಿಸಿದರು. ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ವೇದಿಕೆಯಲ್ಲಿ ಶಾಲೆಯ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ಮಹೇಶ್ ಪೊಸಳಕ್ಕೆ, ಶಾಲೆಯ ಎಸ್.ಡಿ.ಎಂ.ಸಿ ಸದಸ್ಯ ದಯಾನಂದ ಪುಣಿಕೆತ್ತಡಿ, ಬಿ.ಎಂ.ಎಸ್ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಸಂತ ಕುಮಾರ್ ಪೊಸಳಕ್ಕೆ, ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪ ಸುಭಾಷ್ ಶೆಟ್ಟಿ ಆರುವಾರ, ಶಿಬಿರ ಅನುಷ್ಠಾನ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಪುತ್ಯೆ, ಶಿಬಿರದ ನಾಯಕ ಲಿಖಿತ್ ರೈ, ಶಿಬಿರದ ನಾಯಕಿ ರಕ್ಷಾ ಜೆ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಹ ಶಿಬಿರಾಧಿಕಾರಿ ಅಕ್ಷತಾ ಸ್ವಾಗತಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ವಂದಿಸಿದರು. ಉಪನ್ಯಾಸಕ ಚೇತನ್ ಮೊಗ್ರಾಲ್ ನಿರೂಪಿಸಿದರು. ಸಹ ಶಿಬಿರ ಅಧಿಕಾರಿಗಳಾದ ಶಿವಪ್ರಸಾದ್ ಹೊಳ್ಳ, ಅಕ್ಷತಾ ಸಹಕರಿಸಿದರು. ವಿದ್ಯಾರ್ಥಿನಿಯರಾದ ಶಹನಿ ಮತ್ತು ಬಳಗದವರು ಪ್ರಾರ್ಥಿಸಿದರು.