ರಾಮಕುಂಜ: ಕಡಬ ತಾಲೂಕಿನ ಕೊಯಿಲ, ರಾಮಕುಂಜ, ಹಳೆನೇರೆಂಕಿ ಗ್ರಾಮಗಳನ್ನೊಳಗೊಂಡ ರಾಮಕುಂಜ ವಲಯ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 22ನೇ ವರ್ಷದ ಶ್ರೀ ಶಾರದೋತ್ಸವ ರಾಮಕುಂಜ ಗ್ರಾಮದ ಶಾರದಾ ಭಜನಾ ಮಂದಿರದಲ್ಲಿ ಸೆ.30ರಿಂದ ಅ.2ರ ತನಕ ನಡೆಯಿತು.
ಸೆ.೩೦ರಂದು ಶಾರದಾಂಬೆಯ ಪ್ರತಿಷ್ಟೆ, ವಿವಿಧ ಭಜನಾ ಮಂಡಳಿಗಳಿಂದ ಭಜನೆ ಸೇವೆ, ಸಂಜೆ ಶಾರದನಗರ ಗಾನಸಿರಿ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಭಜನಾ ಸಂದ್ಯಾ, ಮಹಾಪೂಜೆ, ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಅ.1ರಂದು ವಾಹನ ಪೂಜೆ, ಮಾರಿ ಚಾಮುಂಡಿ, ಗುಳಿಗ ದೈವಗಳಿಗೆ ತಂಬಿಲ, ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ, ಸಾಮೂಹಿಕ ದುರ್ಗಾಪೂಜೆ, ರಾತ್ರಿ ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅ.2ರಂದು ಸರಸ್ವತಿ ಪೂಜೆ, ವಿದ್ಯಾರಂಭ, ಸಾರ್ವಜನಿಕರಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟ, ಭಜನೆ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ, ಮಹಾಪೂಜೆ ನಡೆಯಿತು. ಸಾಯಂಕಾಲ ನಡೆದ ಧಾರ್ಮಿಕ ಸಭೆಯಲ್ಲಿ ಪುಣ್ಚಪ್ಪಾಡಿ ಸಮರ್ಥ ಜನಸೇವಾ ಟ್ರಸ್ಟ್ ಅಧ್ಯಕ್ಷ ಗಿರಿಶಂಕರ ಸುಲಾಯ ಧಾರ್ಮಿಕ ಭಾಷಣ ಮಾಡಿದರು. ಸಮಿತಿಯ ಅಧ್ಯಕ್ಷ ಸಂಜೀವ ಶಾರದನಗರ ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಗ್ರಾ.ಪಂ.ಸದಸ್ಯರಾದ ಯತೀಶ್ ಬಾನಡ್ಕ, ಪ್ರದೀಪ್ ಬಾಂತೊಟ್ಟು, ಜಯಶ್ರೀ ಇರ್ಕಿ, ಉದ್ಯಮಿ ಕಿರಣ್ಚಂದ್ರ ಡಿ.ಪುಷ್ಪಗಿರಿ ಶುಭಹಾರೈಸಿದರು. ನಿವೃತ್ತ ಉಪನ್ಯಾಸಕ ಸದಾಶಿವ ಭಟ್, ನಿವೃತ್ತ ಸೈನಿಕ ಚಿತ್ತರಂಜನ್ ಶೆಟ್ಟಿ, ಭಜನಾ ಮಂದಿರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಹಿರಿಯರಾದ ಲಕ್ಷ್ಣಣ ಶಾರದನಗರ, ಜಯಾನಂದ ಶಾರದನಗರ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಉಪನ್ಯಾಸಕ ಸದಾಶಿವ ಭಟ್ ಸನ್ಮಾನಿತರ ಪರವಾಗಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಲಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೆಂಕಟೇಶ್ ಭಟ್ ಹೂಂತಿಲ ಸ್ವಾಗತಿಸಿದರು. ಯೋಗೀಶ್ ಕುಲಾಲ್ ವಂದಿಸಿದರು. ಗೌರವ್ ಶಾರಾದನಗರ, ಅಕ್ಷಯ್ ಹೂಂತಿಲ, ಹರೀಶ್ ಬರಮೇಲು, ಎ.ಎನ್ ಕೊಳಂಬೆ, ಜಯಪ್ರಕಾಶ್ ಅಮೈ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಶಾರದಾ ನಗರದಿಂದ, ಗೋಳಿತ್ತಡಿ, ಗಣೇಶನಗರ ಮೂಲಕ ಆತೂರಿನವರೆಗೆ ಶಾರದಾಂಬೆಯ ಪಲ್ಲಕ್ಕಿ ಮೆರವಣಿಗೆ ನಡೆಯಿತು.