ನೆಲ್ಯಾಡಿ: ಬೈಕ್ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಗ್ರಾಮದ ಬರ್ಚಿನಹಳ್ಳ ತಿರುವಿನಲ್ಲಿ ಅ.೨ರಂದು ಮಧ್ಯಾಹ್ನ ನಡೆದಿದೆ.

ಚಿಕ್ಕಬಳ್ಳಾಪುರ ನಿವಾಸಿ ದರ್ಶನ್ ಎಂಬವರು ಮಂಗಳೂರಿಗೆ ಪ್ರವಾಸಕ್ಕೆ ಬಂದವರು ಮತ್ತೆ ಬೆಂಗಳೂರಿಗೆ ಕಾರು(ಕೆಎ 53, ಎಂಇ 2268)ನಲ್ಲಿ ಹೋಗುತ್ತಿದ್ದವರು ಶಿರಾಡಿ ಗ್ರಾಮದ ಬರ್ಚಿನಹಳ್ಳ ತಲುಪುತ್ತಿದ್ದಂತೆ ಬೆಂಗಳೂರು ಕಡೆಯಿಂದ ಸುಭಾಶ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ (ಕೆಎ 46 ಕ್ಯು 5158) ನಡುವೆ ಡಿಕ್ಕಿಯಾಗಿದೆ. ಬೈಕ್ ಸವಾರ ಸುಭಾಶ್ ಕಾರೊಂದನ್ನು ಓವರ್ ಟೇಕ್ ಮಾಡಿಕೊಂಡು ಬಂದು ಎದುರಿನಿಂದ ದರ್ಶನ್ ಅವರು ಚಲಾಯಿಸಿಕೊಂಡು ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದೆ. ಬೈಕ್ ಸವಾರ ಸುಭಾಶ್ ಹಾಗೂ ಸಹಸವಾರ ಅನಿಲ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಿನಲ್ಲಿದ್ದವರಿಗೆ ಯಾವುದೇ ನೋವು ಆಗಿರುವುದಿಲ್ಲ ಎಂದು ವರದಿಯಾಗಿದೆ. ಘಟನೆ ಬಗ್ಗೆ ಕಾರು ಚಾಲಕ ದರ್ಶನ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.