ಪುತ್ತೂರು: ಕಳೆದ 20 ವರ್ಷಗಳಿಂದ ಯುಎಇಯ ಶಿಕ್ಷಣ, ತಂತ್ರಜ್ಞಾನ, ಸಾಮಾಜಿಕ ಹಾಗೂ ಬಾಹ್ಯಾಕಾಶ ತಂತ್ರಾಂಶ ಸಂಶೋಧನಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುದ್ದಿ ಬಿಡುಗಡೆಯ ತಾಂತ್ರಿಕ ನಿರ್ದೇಶಕ ಹನೀಫ್ ಪುತ್ತೂರುರವರನ್ನು ಖಲೀಜ್ ಟೈಮ್ಸ್‌ನ KT+150 ಪಟ್ಟಿಯ ಶಿಕ್ಷಣ ವಿಭಾಗದಲ್ಲಿ ಸೇರಿಸಿ ಗೌರವಿಸಲಾಗಿದೆ.
ಖಲೀಜ್ ಟೈಮ್ಸ್‌ನ KT+150 ಪಟ್ಟಿಯಲ್ಲಿ, ಯುಎಇಯ ಭವಿಷ್ಯವನ್ನು ರೂಪಿಸುತ್ತಿರುವ 150 ಪ್ರತಿಭೆಗಳನ್ನು ಗುರುತಿಸಲಾಗಿದೆ. ಶಿಕ್ಷಣ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಅಐ), ಸಾಮಾಜಿಕ ಪ್ರಭಾವ ಸೇರಿದಂತೆ 15 ಕ್ಷೇತ್ರಗಳಲ್ಲಿ ಅಚ್ಚಳಿಯುವ ಕೆಲಸ ಮಾಡಿದ ಆವಿಷ್ಕಾರಕರು, ಸೃಜನಶೀಲರು ಮತ್ತು ಬದಲಾವಣೆ ಮೂಡಿಸುತ್ತಿರುವ ಮುಂಚೂಣಿಗರನ್ನು ಈ ಪಟ್ಟಿ ಒಳಗೊಂಡಿದೆ. ಸಾವಿರಾರು ನಾಮನಿರ್ದೇಶನಗಳ ನಡುವೆ ಖಲೀಜ್ ಟೈಮ್ಸ್ ಸಂಪಾದಕೀಯ ತಂಡ ಮತ್ತು ತಜ್ಞರ ಆಯ್ಕೆಯಿಂದ ಹೊರಬಂದ ಈ ಸ್ಪೂರ್ತಿದಾಯಕ ವ್ಯಕ್ತಿಗಳನ್ನು, ಯುಎಇಯ ಮುಂದಿನ ತಲೆಮಾರಿನ ಉದ್ಯಮಶೀಲತೆ ಮತ್ತು ಸೃಜನಾತ್ಮಕ ಮನೋಭಾವದ ಪ್ರತಿರೂಪ ಎಂದು ಖಲೀಜ್ ಟೈಮ್ಸ್ ಹೇಳಿದೆ.
ಅನಿವಾಸಿ ಭಾರತೀಯನಾಗಿ ದುಬಾಯಿಯಲ್ಲಿ ಉದ್ಯೋಗದಲ್ಲಿದ್ದರೂ, ಹನೀಫ್ ಪುತ್ತೂರು ತಮ್ಮ ವಿಶಿಷ್ಟ ರೀತಿಯ ಕೊಡುಗೆಯನ್ನು ತಾಯ್ನಾಡಿಗೆ ನೀಡುತ್ತಾ ಬಂದಿದ್ದಾರೆ. ತಾವು ಬಾಲ್ಯದಲ್ಲಿ ವಿದ್ಯಾಭ್ಯಾಸ ಪಡೆದ ಕುಂಜೂರುಪಂಜ ಶಾಲೆಯಿಂದಲೇ ‘ಕ್ಲಾಸ್ ಆನ್ ವೀಲ್ಸ್’ ಎಂಬ ಗ್ರಾಮೀಣ ಮಕ್ಕಳ ಕಂಪ್ಯೂಟರ್ ಶಿಕ್ಷಣ ಬಸ್ ಯೋಜನೆಯನ್ನು ಪ್ರಾರಂಭಿಸಿದ್ದು, ಇದುವರೆಗೆ ಪುತ್ತೂರು ಹಾಗೂ ಸುತ್ತಮುತ್ತಲಿನ 4200 ಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನವನ್ನು ಪಡೆದಿದ್ದಾರೆ. ಈ ಯೋಜನೆ ಮಂಗಳೂರು ಆಧಾರಿತ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ, ಮಂಗಳೂರಿನ ಝಕರಿಯಾ ಜೋಕಟ್ಟೆ ಅವರ ಪ್ರಾಯೋಜಕತ್ವದಲ್ಲಿ ಸದ್ದಿಲ್ಲದೆ ಯಶಸ್ವಿಯಾಗಿ ಮುಂದುವರಿಯುತ್ತಿದೆ.
ಸದ್ಯ ಹನೀಫ್ ಪುತ್ತೂರು ದುಬಾಯಿಯ ಮಹಮ್ಮದ್ ಬಿನ್ ರಾಶೆದ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಪ್ರಯೋಗಾಲಯದಲ್ಲಿ ಡಿಜಿಟಲ್ ಟ್ರಾನ್ಸ್ ಫಾರ್ಮೇಶನ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದು, ದುಬಾಯಿ ವಿಶ್ವವಿದ್ಯಾಲಯದ ಐಟಿ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಯುಎಇಯ ಗೋಲ್ಡನ್ ವೀಸಾ ಹೊಂದಿದ್ದಾರೆ.
ಮೂಲತಃ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬಲ್ಲೇರಿ ಅಬ್ಬಾಸ್ ಹಾಜಿ ಅವರ ಪುತ್ರನಾಗಿರುವ ಹನೀಫ್ ಪುತ್ತೂರು, ಸುದ್ದಿ ಸಮೂಹ ಸಂಸ್ಥೆಯ ತಾಂತ್ರಿಕ ನಿರ್ದೇಶಕರಾಗಿದ್ದು, ಎಂ. ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್‌ನ ನಿರ್ದೇಶಕರೂ ಆಗಿದ್ದಾರೆ.